ಖಂಡ್ರೆ ವಿರುದ್ಧ ಹೇಳಿಕೆ; ಆರಗ ಜ್ಞಾನೇಂದ್ರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿಧಾನಸಭೆ ಸ್ಪೀಕರ್ಗೆ ವೀರಶೈವ ಮಹಾಸಭಾ ಪತ್ರ
ಆರಗ ನೀಡಿರುವ ಹೇಳಿಕೆಯು ವರ್ಣಭೇದ, ಜನಾಂಗೀಯ ನಿಂದನೆ ಮತ್ತು ಪ್ರಾಂತ್ಯವಾರು ಭೇದವನ್ನುಂಟು ಮಾಡಲು ಕಾರಣವಾಗಿದೆ ಎಂದು ಮಹಾಸಭಾ ದೂರಿದೆ.
ಬೆಂಗಳೂರು: ಅರಣ್ಯ ಸಚಿವ ಈಶ್ವರ ಖಂಡ್ರೆ (Eshwara Khandre) ಬಗ್ಗೆ ಮಾಜಿ ಗೃಹ ಸಚಿವ, ಬಿಜೆಪಿ ನಾಯಕ ಆರಗ ಜ್ಞಾನೇಂದ್ರ (Araga Jnanendra) ನೀಡಿರುವ ವಿವಾದಾತ್ಮಕ ಹೇಳಿಕೆಯ ಬಗ್ಗೆ ಅಖಿಲ ಭಾರತ ವೀರಶೈವ ಮಹಾಸಭಾ ಆಕ್ಷೇಪ ವ್ಯಕ್ತಪಡಿಸಿದೆ. ಜತೆಗೆ, ಜ್ಞಾನೇಂದ್ರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಧಾನಸಭೆ ಸ್ಪೀಕರ್ಗೆ ಪತ್ರ ಬರೆದಿದೆ. ಆರಗ ನೀಡಿರುವ ಹೇಳಿಕೆಯು ವರ್ಣಭೇದ, ಜನಾಂಗೀಯ ನಿಂದನೆ ಮತ್ತು ಪ್ರಾಂತ್ಯವಾರು ಭೇದವನ್ನುಂಟು ಮಾಡಲು ಕಾರಣವಾಗಿದೆ ಎಂದು ಮಹಾಸಭಾ ದೂರಿದೆ.
ತೀರ್ಥಹಳ್ಳಿ ಶಾಸಕರಾದ ಅರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಯಲ್ಲಿ ಆಗಸ್ಟ್ 1ರಂದು ನಡೆದ ಬಿಜೆಪಿಯ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅರಣ್ಯ ಮತ್ತು ಪರಿಸರ ಖಾತೆ ಸಚಿವರು ಹಾಗೂ ಮಹಾಸಭೆಯ ಮಹಾಪ್ರಧಾನ ಕಾರ್ಯದರ್ಶಿಗಳಾದ ಸನ್ಮಾನ್ಯ ಈಶ್ವರ ಖಂಡ್ರೆಯವರ ವಿರುದ್ಧ, ಕಲ್ಯಾಣ ಕರ್ನಾಟಕದ ಭಾಗದವರು ಸುಟ್ಟು ಕರಕಲಿನಂತೆ ಇರುತ್ತಾರೆ. ಇದು ಖರ್ಗೆಯವರನ್ನು ನೋಡಿದರೆ ತಿಳಿಯುತ್ತದೆ. ಅರಣ್ಯ ಮಂತ್ರಿಗಳಾದ ಈಶ್ವರ ಖಂಡ್ರೆಯವರ ತಲೆಮೇಲೆ ಕೂದಲು ಮುಚ್ಚಿಕೊಂಡಿರುವುದರಿಂದ ಕರಕಲಾಗದಂತೆ ಉಳಿದುಕೊಂಡಿರುತ್ತಾರೆ ಎ೦ದು ಹೇಳಿಕೆ ನೀಡಿದ್ದಾರೆ. ಆ ಮೂಲಕ ವರ್ಣಭೇದ, ಜನಾಂಗೀಯ ನಿಂದನೆ ಮತ್ತು ಪ್ರಾಂತ್ಯವಾರು ಭೇದವನ್ನುಂಟು ಮಾಡಲು ಕಾರಣವಾಗಿರುತ್ತಾರೆ. ಈ ವಿಷಯ ಎಲ್ಲಾ ಮಾಧ್ಯಮಗಳಲ್ಲಿ ಪ್ರಕಟ ಮತ್ತು ಪ್ರಸಾರವಾಗುತ್ತಿದೆ ಎಂದು ಸ್ಪೀಕರ್ಗೆ ಬರೆದ ಪತ್ರದಲ್ಲಿ ಮಹಾಸಭಾ ಉಲ್ಲೇಖಿಸಿದೆ.
ಇದನ್ನೂ ಓದಿ: ಅರಣ್ಯವೇ ಇಲ್ಲದ ಪ್ರದೇಶದಿಂದ ಬಂದವರು ಅರಣ್ಯ ಸಚಿವರಾಗಿದ್ದಾರೆ: ಈಶ್ವರ ಖಂಡ್ರೆ ವಿರುದ್ಧ ಆರಗ ಜ್ಞಾನೇಂದ್ರ ವಾಗ್ದಾಳಿ
ಈ ರೀತಿಯ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಅಶಾಂತಿ, ಜನಾಂಗೀಯ ಮತ್ತು ಪ್ರಾಂತ್ಯವಾರು ಘರ್ಷಣೆಗೆ ಆರಗ ಅವರು ಕಾರಣರಾಗಿರುತ್ತಾರೆ. ಬಸವಣ್ಣನವರ ನಾಡಿನಿಂದ ಬಂದಂತಹ ಹಾಗೂ ಬಸವಾದಿ ಶರಣರ ಆಶಯಗಳನ್ನು ಮೈಗೂಡಿಸಿಕೊಂಡು ಅದರಂತೆ ಸಾರ್ವಜನಿಕ ಜೀವನದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆಯವರು ಮತ್ತು ಈಶ್ವರ ಖಂಡ್ರೆಯವರ ವಿರುದ್ಧ ಸಂವಿಧಾನಬಾಹಿರ ಹೇಳಿಕೆ ನೀಡುವ ಮೂಲಕ ಅಸಮಾನತೆ, ವರ್ಣಭೇದ, ಜನಾಂಗೀಯ ಮತ್ತು ಪ್ರಾಂತ್ಯವಾರು ನಿಂದನೆಗಳ ಮೂಲಕ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡಲು ಕಾರಣರಾಗಿರುವ ಅರಗ ಜ್ಞಾನೇಂದ್ರ ಇವರನ್ನು ತಕ್ಷಣವೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ಮಹಾಸಭಾ ಪತ್ರದಲ್ಲಿ ಆಗ್ರಹಿಸಿದೆ.
ಇದನ್ನೂ ಓದಿ: ಖರ್ಗೆ, ಖಂಡ್ರೆ ಮನ ನೋಯಿಸುವ ಉದ್ದೇಶವಿರಲಿಲ್ಲ; ವಿವಾದಿತ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಅರಗ ಜ್ಞಾನೇಂದ್ರ
ಕಾಂಗ್ರೆಸ್ ಪಕ್ಷದಿಂದ ಪೊಲೀಸರಿಗೆ ದೂರು
ಖರ್ಗೆ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ ಹಿನ್ನೆಲೆ ಆರಗ ಜ್ಞಾನೇಂದ್ರ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ದೂರು ದಾಖಲಿಸಿದೆ. ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದ ನಿಯೋಗದಿಂದ ಆರಗ ಜ್ಞಾನೇಂದ್ರ ವಿರುದ್ಧ ಕೂಡಲೇ ಕೇಸ್ ದಾಖಲಿಸುವಂತೆ ಆಗ್ರಹಿಸಿ ದೂರು ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:49 pm, Wed, 2 August 23