ಕೊರೊನಾ​ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳು; ಕೊವಿಡ್​-19 ತಾಂತ್ರಿಕ ಸಲಹಾ ಸಮಿತಿಯಿಂದ ಅಧಿಕಾರಿಗಳಿಗೆ ಹೊಸ ಸುತ್ತೋಲೆ

|

Updated on: Mar 14, 2021 | 12:10 PM

ದಿನೇ ದಿನೇ ಹೆಚ್ಚುತ್ತಿರುವ ಕೊವಿಡ್ ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ರಾಜ್ಯ ಮಟ್ಟದ ಕೊವಿಡ್ 19 ತಾಂತ್ರಿಕ ಸಲಹಾ ಸಮಿತಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.

ಕೊರೊನಾ​ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳು; ಕೊವಿಡ್​-19 ತಾಂತ್ರಿಕ ಸಲಹಾ ಸಮಿತಿಯಿಂದ ಅಧಿಕಾರಿಗಳಿಗೆ ಹೊಸ ಸುತ್ತೋಲೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ದಿನೇ ದಿನೇ ಹೆಚ್ಚುತ್ತಿರುವ ಕೊವಿಡ್ ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ರಾಜ್ಯ ಮಟ್ಟದ ಕೊವಿಡ್ 19 ತಾಂತ್ರಿಕ ಸಲಹಾ ಸಮಿತಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೊವಿಡ್ ಎರಡನೇ ಅಲೆಯ ಅಪಾಯ ನಿಯಂತ್ರಿಸುವ ಸಲುವಾಗಿ ಕೆಲವು ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚನೆ ನೀಡಿದೆ.

ಅಂತರ ರಾಜ್ಯ ಪ್ರಯಾಣದಿಂದ ಸೋಂಕು ಹರಡುವಿಕೆಯನ್ನು ತಡೆ ಹಿಡಿಯಲು ಸುಮಾರು 13 ಜಿಲ್ಲೆಗಳಲ್ಲಿ ಕೊವಿಡ್19 ದೈನಂದಿನ ಪರೀಕ್ಷೆಯನ್ನು ಪೂರ್ಣ ಪ್ರಮಾಣದಲ್ಲಿ ಮಾಡುವ ನಿಟ್ಟಿನಲ್ಲಿ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅವುಗಳಲ್ಲಿ ಬಳ್ಳಾರಿ, ಮೈಸೂರು, ದಾವಣಗೆರೆ, ಚಿಕ್ಕಮಗಳೂರು, ಬಾಗಲಕೋಟೆ, ಬೆಳಗಾವಿ, ವಿಜಯಪುರ, ದಕ್ಷಿಣ ಕನ್ನಡ, ತುಮಕೂರು, ಬೀದರ್, ಉಡುಪಿ, ಕಲಬುರಗಿ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಸೇರಿವೆ.

ದಾವಣಗೆರೆ, ಬಳ್ಳಾರಿ, ಮೈಸೂರು, ಬೆಳಗಾವಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆರ್​ಟಿ-ಪಿಸಿಆರ್​ ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸಲು ಸೂಚನೆ ನೀಡಲಾಗಿದೆ. ಜೊತೆಗೆ ಜಿಲ್ಲೆಗಳಲ್ಲಿ ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚುವ ಕಾರ್ಯವನ್ನು ಚುರುಕುಗೊಳಿಸಲು ತಿಳಿಸಲಾಗಿದೆ.

ಕೊವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳಾದ ಮಾಸ್ಕ್​ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಕೊವಿಡ್ ನಿಯಂತ್ರಣ ಕ್ರಮದ ಜೊತೆಗೆ ಪರೀಕ್ಷೆಗೆ ಒಳಪಡುವುದು ಹಾಗೂ ಲಸಿಕೆ ಪಡೆಯುವಂತೆ ಆಯಾ ಜಿಲ್ಲಾಧಿಕಾರಿಗಳು, ಸಾರ್ವಜನಿಕರಿಗೆ ಸಂದೇಶ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ವಿವಿಧ ಸಮಾರಂಭಗಳು, ಮದುವೆ, ಹಬ್ಬ-ಹರಿದಿನದ ಆಚರಣೆಗಳಲ್ಲಿ ಹೆಚ್ಚಿನ ಜನರು ಸೇರುತ್ತಿರುವುದರಿಂದ ಕೊವಿಡ್ ಎಲ್ಲೆಡೆ ಹರಡುತ್ತಿದೆ. ಈ ನಿಟ್ಟಿನಲ್ಲಿ ಕೆಲವು ನಿಯಮಾವಳಿಗಳನ್ನು ಕಡ್ಡಾಯ ಮಾಡಲಾಗಿದೆ.

ಮದುವೆ ಕಾರ್ಯಕ್ರಮ ಹೊರಂಗಾಣದಲ್ಲಿ(ತೆರೆದ ಪ್ರದೇಶ) ನಡೆಯುತ್ತಿದ್ದರೆ 500 ಜನ ಮೀರದಂತೆ, ಹಾಗೂ ಒಳಾಂಗಣ ಪ್ರದೇಶ ಅಂದರೆ ಹಾಲ್​ಗಳಲ್ಲಿ 200 ಜನರು ಮೀರದಂತೆ ನಿಯಮ ಪಾಲಿಸಬೇಕು. ಹುಟ್ಟುಹಬ್ಬ ಅಥವಾ ಇನ್ನಿತರ ಆಚರಣೆಗಳಿಗೆ ಹೊರಾಂಗಣದಲ್ಲಿ 100 ಜನ ಹಾಗೂ ಒಳಾಂಗಣದಲ್ಲಿ(ಹಾಲ್​) 50 ಜನರು ಮೀರದಂತೆ ನೋಡಿಕೊಳ್ಳಬೇಕು. ನಿಧನ, ಶವಸಂಸ್ಕಾರ ಕಾರ್ಯಕ್ರಮಗಳಲ್ಲಿ ಹೊರಾಂಗಣದಲ್ಲಿ 100 ಜನ ಹಾಗೂ ಒಳಾಂಗಣದಲ್ಲಿ 50 ಜನರು ಮೀರದಂತೆ ನಿಯಮ ಪಾಲಿಸಬೇಕು. ಅಂತ್ಯಕ್ರಿಯೆಯಲ್ಲಿ 50 ಜನರು ಮೀರದಂತೆ ಎಚ್ಚರವಹಿಸಬೇಕು. ಇತರ ಸಮಾರಂಭಗಳಲ್ಲಿ ಹಾಲ್​ ವಿಸ್ತೀರ್ಣಕ್ಕೆ ಅನುಗುಣವಾಗಿ 100 ಜನರು ಮೀರದಂತೆ ನಿಯಮ ಪಾಲಿಸಬೇಕು. ಹಾಗೂ ತೆರೆದ ಪ್ರದೇಶದಲ್ಲಿ ಧಾರ್ಮಿಕ ಆಚರಣೆಗಳು ಹಾಗೂ ರಾಜಕೀಯ ಆಚರಣೆಗಳಿಗೆ 500 ಜನ ಮೀರದಂತೆ ನಿಯಮ ಪಾಲಿಸುವುದು ಕಡ್ಡಾಯವೆಂದು ಸೂಚನೆ ನೀಡಿದೆ.

ಇನ್ನು, ಕೇರಳ ಹಾಗೂ ಮಹರಾಷ್ಟ್ರದಿಂದ ಬರುವವರಿಗೆ ಆರ್​​ಟಿ-ಪಿಸಿಆರ್​ ನೆಗೆಟಿವ್​ ಪರೀಕ್ಷಾ ವರದಿಯನ್ನು ಕಡ್ಡಾಯಗೊಳಿಸಲಾಗಿದೆ. ಹಾಗೂ ರಾಜ್ಯದ ಗಡಿ ಭಾಗದಲ್ಲಿ ಕೊವಿಡ್ ವರದಿಯನ್ನು ಕಟ್ಟು-ನಿಟ್ಟಾಗಿ ಪರಿಶೀಲಿಸಲು ಸೂಚನೆ ಹೊರಡಿಸಿದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಹೊಸ ಕೊವಿಡ್ ಮಾರ್ಗಸೂಚಿ ಬಿಡುಗಡೆ; ನೀವು ತಿಳಿದಿರಬೇಕಾದ ವಿಚಾರಗಳು ಇಲ್ಲಿದೆ

ಇದನ್ನೂ ಓದಿ: ಆರೋಗ್ಯ ಸಚಿವರ ಮನೆ ಪಕ್ಕದಲ್ಲೆ ಕುರಿ ಸಂತೆ, ಕೊವಿಡ್ ನಿಯಮಗಳಿಗೆ ತಿಲಾಂಜಲಿ ಇಟ್ಟ ಜನತೆ