ದೆಹಲಿ: ಕೊರೊನಾ ರೂಪಾಂತರ ಹಾಗೂ ಕೊವಿಡ್ 19 ಎರಡನೇ ಅಲೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ (International Arrivals) ಹೊಸ ನಿಯಮಾವಳಿಗಳನ್ನು ಸೂಚಿಸಿ ಕೇಂದ್ರ ಆರೋಗ್ಯ ಸಚಿವಾಲಯ (Union Health Ministry) ಆದೇಶ ಹೊರಡಿಸಿದೆ. ಹೊಸ ಕೊವಿಡ್ ಮಾರ್ಗಸೂಚಿಗಳು ಇಂದಿನಿಂದ (ಫೆ.22) ಮುಂದಿನ ಆದೇಶ ನೀಡುವವರೆಗೆ ಜಾರಿಯಾಗಲಿದೆ. ಹೊಸ ನಿಯಮಾವಳಿಯ ಪ್ರಕಾರ ಮುಂದಿನ 14 ದಿನಗಳ ಕಾಲ ಯುಕೆ, ಯುರೋಪ್ ಹಾಗೂ ಮಧ್ಯಪೂರ್ವ ದೇಶಗಳಿಂದ ಆಗಮಿಸುತ್ತಿರುವ ಪ್ರಯಾಣಿಕರು ತಮ್ಮ ವಿವರಗಳನ್ನು ನೀಡಬೇಕಾಗಿದೆ. ಹೊಸ ಕೊವಿಡ್ ಮಾರ್ಗಸೂಚಿಗಳು ಈ ಕೆಳಗಿನಂತಿವೆ.
ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರು, ಪ್ರಯಾಣಕ್ಕೂ ಮೊದಲು ಆನ್ಲೈನ್ ಏರ್ ಸುವಿಧಾ ಪೋರ್ಟಲ್ನಲ್ಲಿ ಕೊವಿಡ್ ಸೋಂಕು ಪರೀಕ್ಷೆಯ ಬಗ್ಗೆ ಸ್ವಯಂಘೋಷಣೆ (Self Declaration) ಮಾಡಬೇಕು.
ಕೊವಿಡ್-19 RT-PCR ಪರೀಕ್ಷೆ ನಡೆಸಿ ಕೊರೊನಾ ನೆಗೆಟಿವ್ ವರದಿಯನ್ನು www.newdelhiairport.in ಆನ್ಲೈನ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕು.
ಪ್ರಯಾಣಿಕರು ಅಂತಾರಾಷ್ಟ್ರೀಯ ಪ್ರಯಾಣ ನಡೆಸುವುದಕ್ಕೆ 72 ಗಂಟೆಗಳ ಮೊದಲು ಕೊರೊನಾ ಪರೀಕ್ಷೆ ನಡೆಸಿರಬೇಕು. ಜತೆಗೆ, ಪ್ರಯಾಣಿಕರು ವರದಿಯನ್ನು ಪ್ರಮಾಣೀಕರಿಸಿರಬೇಕು.
ವಿಮಾನ ಪ್ರಯಾಣಕ್ಕೂ ಮೊದಲು ಪ್ರತಿಯೊಬ್ಬ ಪ್ರಯಾಣಿಕನ ತಾಪಮಾನ ಪರೀಕ್ಷೆ ನಡೆಸಲಾಗುತ್ತದೆ. ರೋಗಲಕ್ಷಣಗಳಿಲ್ಲದ ಪ್ರಯಾಣಿಕರಿಗೆ ಮಾತ್ರ ವಿಮಾನಯಾನ ನಡೆಸಲು ಅನುಮತಿ ನೀಡಲಾಗುತ್ತದೆ.
ವಿಮಾನಯಾನದ ಉದ್ದಕ್ಕೂ ಎಲ್ಲಾ ಪ್ರಯಾಣಿಕರು ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಆರೋಗ್ಯ ಸೇತು ಆ್ಯಪ್ನ್ನು ಕೂಡ ಡೌನ್ಲೋಡ್ ಮಾಡಿಕೊಂಡಿರಬೇಕು.
ವಿಮಾನಯಾನದ ಹೊರತಾಗಿ, ಜಲಮಾರ್ಗ ಹಾಗೂ ಭೂಮಾರ್ಗದ ಮುಖಾಂತರ ದೇಶಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೂಡ ಇದೇ ಕೊವಿಡ್-19 ಮಾರ್ಗಸೂಚಿಗಳು ಅನ್ವಯವಾಗುತ್ತದೆ. ಆದರೆ, ಆನ್ಲೈನ್ ರಿಜಿಸ್ಟ್ರೇಷನ್ ಸೌಲಭ್ಯ ಸದ್ಯ ವಿಮಾನಯಾನ ಪ್ರಯಾಣಿಕರಿಗೆ ಮಾತ್ರ ಲಭ್ಯವಿರುತ್ತದೆ.
ಯುನೈಟೆಡ್ ಕಿಂಗ್ಡಂ, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾದಿಂದ ಆಗಮಿಸುತ್ತಿರುವ ಪ್ರಯಾಣಿಕರನ್ನು ಏರ್ಲೈನ್ ಪ್ರತ್ಯೇಕವಾಗಿ ಗುರುತಿಸಬೇಕು ಎಂದು ಕೂಡ ತಿಳಿಸಲಾಗಿದೆ.
ಪ್ರಯಾಣ ಮಾಡಿದ ಬಳಿಕ 14 ದಿನಗಳ ಕಾಲ ಜಾಗರೂಕರಾಗಿರಬೇಕು.. ಯುರೋಪ್ ಹಾಗೂ ಮಧ್ಯಪೂರ್ವ ದೇಶಗಳಿಂದ ಬರುವ ಪ್ರಯಾಣಿಕರು ತಮ್ಮ ಗಂಟಲು ದ್ರವ ಮಾದರಿಗಳನ್ನು ಪ್ರಯಾಣದ ಕೊನೆಗೆ ಏರ್ಪೋರ್ಟ್ನಲ್ಲಿ ನೀಡಬೇಕು. ಕೊರೊನಾ ಪರೀಕ್ಷೆ ವರದಿ ನೆಗೆಟಿವ್ ಬಂದರೆ, ನಂತರದ 14 ದಿನಗಳಲ್ಲಿ ಜಾಗರೂಕರಾಗಿ ಇರುವಂತೆ ಪ್ರಯಾಣಿಕರಿಗೆ ತಿಳಿಸಲಾಗುತ್ತದೆ. ಒಂದುವೇಳೆ ಕೊವಿಡ್-19 ವರದಿ ಪಾಸಿಟಿವ್ ಬಂದರೆ ಆರೋಗ್ಯ ಸೂಚನೆಗಳನ್ನು ಪಾಲಿಸಿ, ಚಿಕಿತ್ಸೆ ಪಡೆಯಬೇಕಾಗುತ್ತದೆ.
ನಿಗದಿತ ವೇಳಾಪಟ್ಟಿಯ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳು ಸದ್ಯ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಮಾರ್ಚ್ 23ರಿಂದ ಕೊರೊನಾ ಸಾಂಕ್ರಾಮಿಕ ಕಾರಣದಿಂದ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳು ಸ್ಥಗಿತಗೊಂಡಿದ್ದವು. ಭಾರತದಿಂದ ವಿದೇಶಕ್ಕೆ ಹಾಗೂ ವಿದೇಶದಿಂದ ಭಾರತಕ್ಕೆ ಪ್ರಯಾಣಿಸುವ ವಿಮಾನಗಳು ಏರ್ ಬಬಲ್ ಒಪ್ಪಂದದ ಅನ್ವಯ ಸದ್ಯ ಕೆಲಸ ಮಾಡುತ್ತಿವೆ. ದೇಶೀಯ ವಿಮಾಗಳು ಮೇ 25ರಿಂದ ಕಾರ್ಯನಿರ್ವಹಿಸುತ್ತಿದೆ. ಕೊರೊನಾ ಕಾರಣದಿಂದ 2 ತಿಂಗಳು ಸ್ಥಗಿತಗೊಂಡಿದ್ದ ದೇಶೀಯ ವಿಮಾನಯಾನ ಈಗ ಪ್ರಯಾಣಿಕರಿಗೆ ಸೇವೆ ನೀಡುತ್ತಿದೆ.
ಇದನ್ನೂ ಒದಿ: Viral Video | ಎಂಜಲು ಹಚ್ಚಿ ರೊಟ್ಟಿ ಮಾಡುತ್ತಿದ್ದ ಭೂಪ ಅರೆಸ್ಟ್: ಕೊರೊನಾ ಹರಡೋಕೆ ಈ ತಂತ್ರವಾ?
‘ಪತಂಜಲಿ’ ಹೇಳಿದ ಕೊರೊನಿಲ್ ಕಟ್ಟುಕಥೆಗೆ ಆರೋಗ್ಯ ಸಚಿವರ ಉತ್ತೇಜನ: ಐಎಂಎ ಖಂಡನೆ