‘ಪತಂಜಲಿ’ ಹೇಳಿದ ಕೊರೊನಿಲ್ ಕಟ್ಟುಕಥೆಗೆ ಆರೋಗ್ಯ ಸಚಿವರ ಉತ್ತೇಜನ: ಐಎಂಎ ಖಂಡನೆ

ಮೊದಲ ಸಾಕ್ಷಿ ಆಧಾರಿತ ಔಷಧಿ ಎಂದು ಪತಂಜಲಿಯ ಕೊರೊನಿಲ್​ ಕುರಿತು ಯೋಗಗುರು ರಾಮ್​ದೇವ ಹೇಳಿಕೊಂಡಿದ್ದರು. ಈ ಮಾತು ಇದೀಗ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂ​ಎ) ಟೀಕೆಗೆ ಗುರಿಯಾಗಿದೆ.

  • TV9 Web Team
  • Published On - 17:53 PM, 22 Feb 2021
‘ಪತಂಜಲಿ’ ಹೇಳಿದ ಕೊರೊನಿಲ್ ಕಟ್ಟುಕಥೆಗೆ ಆರೋಗ್ಯ ಸಚಿವರ ಉತ್ತೇಜನ: ಐಎಂಎ ಖಂಡನೆ
ಆರೋಗ್ಯ ಸಚಿವರ ಸಮ್ಮುಖ ಕೊರೊನಿಲ್ ಸಂಶೋಧನ ಪ್ರಬಂಧ ಬಿಡುಗಡೆ

ದೆಹಲಿ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ಸಮ್ಮುಖದಲ್ಲಿ ಕೋವಿಡ್-19ಕ್ಕೆ ಸಿದ್ಧಪಡಿಸಿದ ಮೊದಲ ಪುರಾವೆ ಆಧರಿತ ಔಷಧಿ ಕೊರೊನಿಲ್ ಎಂದು ಪತಂಜಲಿಯ ಮುಖ್ಯಸ್ಥ ಯೋಗಗುರು ರಾಮ್​​ದೇವ್​ ಹೇಳಿಕೊಂಡಿದ್ದರು. ಈ ಮಾತು ಇದೀಗ ಭಾರತೀಯ ವೈದ್ಯಕೀಯ ಸಂಸ್ಥೆಯ (Indian Medical Association – IMA) ಟೀಕೆಗೆ ಗುರಿಯಾಗಿದೆ. ಆರೋಗ್ಯ ಸಚಿವರು ಕಟ್ಟುಕಥೆಯನ್ನು ಹೇಗೆ ಉತ್ತೇಜಿಸುತ್ತಾರೆ ಎಂದು ಐಎಂಎ ಪ್ರಶ್ನಿಸಿದೆ.

ಇದೇ ಶುಕ್ರವಾರ ಯೋಗಗುರು ರಾಮದೇವ್​, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಮ್ಮುಖದಲ್ಲಿ ಕೊರೊನಿಲ್ ಬಿಡುಗಡೆ ಮಾಡಿದರು. ಈ ಮೂವರ ಹಿಂದಿರುವ ಪೋಸ್ಟರ್​ನಲ್ಲಿ coPP ಮತ್ತು ವಿಶ್ವ ಆರೋಗ್ಯ ಸಂಸ್ಥೆ(WHO) ಮಾನ್ಯತೆ ನೀಡಿದೆ ಎಂಬ ಪೋಸ್ಟರ್​ ಕಾಣುಸುತ್ತಿದ್ದ ಚಿತ್ರ ವೈರಲ್​ ಆಗಿತ್ತು. ಈ ಕುರಿತಂತೆ ಕೊವಿಡ್ 19ಗೆ ಚಿಕಿತ್ಸೆ ನೀಡಲು ಅಥವಾ ನಿಯಂತ್ರಿಸಲು ಯಾವುದೇ ಸಾಂಪ್ರದಾಯಿಕ ಔಷಧಿಯನ್ನು ನಾವು ಪ್ರಮಾಣೀಕರಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಟ್ವೀಟ್​ ಮೂಲಕ ನಂತರ ಸ್ಪಷ್ಟಪಡಿಸಿತ್ತು.

ಈ ಕುರಿತು ಹೇಳಿಕೆ ನೀಡಿರುವ ಐಎಂಎ, ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣಿಕೃತ ‘ರಹಸ್ಯ ಔಷಧ’ವನ್ನು ಆರೋಗ್ಯ ಸಚಿವರ ಸಮಕ್ಷಮ ಬಿಡುಗಡೆ ಮಾಡಿದ್ದು ಕೇಳಿ ಆಘಾತವಾಯಿತು. ಈ ಕುರಿತಂತೆ ಸಚಿವರು ವಿವರಣೆ (ಸ್ಪಷ್ಟನೆ) ನೀಡಬೇಕಾಗಿದೆ. ಸ್ವತಃ ವೈದ್ಯರಾಗಿ, ದೇಶದ ಆರೋಗ್ಯ ಸಚಿವರಾಗಿ, ಇಂತಹ ಸುಳ್ಳು ಮಾಹಿತಿಯನ್ನು ದೇಶದ ಮುಂದೆ ಬಿಡುಗಡೆ ಮಾಡುವುದು ಎಷ್ಟರಮಟ್ಟಿಗೆ ಸರಿ? ಇದು ತರ್ಕಬದ್ಧವಾಗಿದೆಯೇ? ಪರಿಣಾಮಕಾರಿ ಔಷಧ ಎಂಬ ಅವೈಜ್ಞಾನಿಕ ವಿಚಾರವನ್ನು ಜನರ ಮುಂದೆ ಹೇಳುವುದು ಎಷ್ಟು ಸರಿ ಎಂದು ಐಎಂಎ ಪ್ರಶ್ನಿಸಿದೆ.

ದೇಶದ ಆರೋಗ್ಯ ಸಚಿವರು ಉತ್ತೇಜನ ನೀಡಿರುವ ಅವೈಜ್ಞಾನಿಕ ಔಷಧವನ್ನು ವಿಶ್ವ ಆರೋಗ್ಯ ಸಂಸ್ಥೆ ತಿರಸ್ಕರಿಸಿದೆ. ಇದು ದೇಶಕ್ಕೆ ಅವಮಾನ ಉಂಟು ಮಾಡಿದೆ. ಕೊರೊನಿಲ್​ ಪರಿಣಾಮಕಾರಿಯಾಗಿದ್ದರೆ ಸರ್ಕಾರ ಏಕೆ ಲಸಿಕೆ ಅಭಿವೃದ್ಧಿಪಡಿಸಲು ₹ 35,000 ಕೋಟಿ ಖರ್ಚು ಮಾಡಿತು ಎಂದು ಎಎಂಐ ಪ್ರಶ್ನಿಸಿದೆ.

ಕೊರೊನಿಲ್​ಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿದೆ ಎಂಬ ಪೋಸ್ಟ್  ವೈರಲ್  ಆಗಿರುವುದಕ್ಕೆ ಸ್ಪಷ್ಟನೆ ನೀಡಿದ್ದ ಪತಂಜಲಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಬಾಲಕೃಷ್ಣ, ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ಔಷಧಿಯನ್ನು ಅನುಮೋದಿಸುವುದಿಲ್ಲ ಅಥವಾ ನಿರಾಕರಿಸುವುದಿಲ್ಲ. ಪ್ರಪಂಚದಾದ್ಯಂತದ ಜನರಿಗೆ ಉತ್ತಮ, ಆರೋಗ್ಯಕರ ಭವಿಷ್ಯವನ್ನು ನಿರ್ಮಿಸಲು ವಿಶ್ವ ಆರೋಗ್ಯ ಸಂಸ್ಥೆ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.

ಕಳೆದ ವರ್ಷ ಕೊರೊನಾ ವೈರಸ್​ ಪ್ರಕರಣಗಳು ಹೆಚ್ಚುತ್ತಿದ್ದ ಸಮಯದಲ್ಲಿ, ಲಸಿಕೆಗಳು ಇನ್ನೂ ಪ್ರಯೋಗದ ಹಂತದಲ್ಲಿದ್ದವು. ಕೊರೊನಿಲ್ ಔಷಧ ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಬಲವಾಗಿ ಹೋರಾಡಬಲ್ಲದು ಎಂದು ಪತಂಜಲಿ ಆಯುರ್ವೇದ ಹೇಳಿಕೊಂಡಿತ್ತು. ಈ ಕುರಿತಂತೆ ಆಯುಷ್​ ಸಚಿವಾಲಯ, ಕೊರೊನಿಲ್ ರೋಗ ನಿರೋಧಕವಾಗಿ ಹೋರಾಡುತ್ತದೆ. ಆದರೆ ಅದೊಂದರಿಂದಲೇ ಪರಿಪೂರ್ಣ ಗುಣಮುಖರಾಗಲು ಸಾಧ್ಯವಿಲ್ಲ ಎಂದು ಹೇಳಿತ್ತು ಎಂದು ಸ್ಪಷ್ಟಪಡಿಸಿದ್ದರು.


ಇದನ್ನೂ ಓದಿ: Fact Check: ಪತಂಜಲಿ ಕೊರೊನಿಲ್​ಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ಸಿಕ್ಕಿದೆ ಎಂಬುದು ಸುಳ್ಳು

ಇದನ್ನೂ ಓದಿ: Coronil Medicine: ಬಂದಿದೆ ನೋಡಿ ಪತಂಜಲಿ ‘ಕೊರೊನಿಲ್’ ಔಷಧ: ಯೋಗಗುರು ಬಾಬಾ ರಾಮ್​ದೇವ್ ಘೋಷಣೆ