ದಿಯು-ದಮನ್, ದಾದ್ರಾ ಮತ್ತು ನಗರ ಹವೇಲಿಯ ಸಂಸದ ಮೋಹನ್ ದೇಲ್ಕರ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
58 ವರ್ಷದ ಮೋಹನ್ ದೇಲ್ಕರ್ ತಮ್ಮ ಪತ್ನಿ ಕಲಾಬೆನ್ ದೇಲ್ಕರ್ ಮತ್ತು ಇಬ್ಬರು ಮಕ್ಕಳಾದ ಅಭಿನವ್ ಮತ್ತು ದಿವಿತಾರನ್ನು ಅಗಲಿದ್ದಾರೆ.
ಮುಂಬೈ: ದಿಯು-ದಮನ್ ಮತ್ತು ದಾದ್ರಾ ಮತ್ತು ನಗರ ಹವೇಲಿಯ ಲೋಕಸಭಾ ಸಂಸದ ಮೋಹನ್ ದೇಲ್ಕರ್ ಮುಂಬೈನ ಹೊಟೇಲ್ ಒಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆಯೆಂದು ಅನಿಸುವಂತಿದ್ದು, ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ತಂಗಿದ್ದ ಕೊಠಡಿಯಲ್ಲಿ ಗುಜರಾತಿ ಭಾಷೆಯಲ್ಲಿ ಬರೆಯಲಾದ ಆತ್ಮಹತ್ಯಾ ಪತ್ರ ಪತ್ತೆಯಾಗಿದೆ.
58 ವರ್ಷದ ಮೋಹನ್ ದೇಲ್ಕರ್ ತಮ್ಮ ಪತ್ನಿ ಕಲಾಬೆನ್ ದೇಲ್ಕರ್ ಮತ್ತು ಇಬ್ಬರು ಮಕ್ಕಳಾದ ಅಭಿನವ್ ಮತ್ತು ದಿವಿತಾರನ್ನು ಅಗಲಿದ್ದಾರೆ. ಅವರು 7 ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದ್ದು ಆತ್ಮಹತ್ಯೆಗೆ ಕಾರಣಗಳು ಇನ್ನಷ್ಟೇ ತಿಳಿದುಬರಬೇಕಿದೆ. 2019ರಲ್ಲಿ ಕಾಂಗ್ರೆಸ್ ತ್ಯಜಿಸಿ ಸ್ವತಂತ್ರ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸಿ, ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.
ಸಂಸದ ಮೋಹನ್ ದೇಲ್ಕರ್ ಅವರ ರಾಜಕೀಯ ಹಿನ್ನೆಲೆ
1986ರಿಂದಲೂ ರಾಜಕೀಯ ವಲಯದಲ್ಲಿ ಮುನ್ನೆಲೆಯಲ್ಲಿ ಗುರುತಿಸಿಕೊಂಡಿದ್ದ ಮೋಹನ್ ದೇಲ್ಕರ್ ನಂತರ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. 1986-89ರ ಅವಧಿಯಲ್ಲಿ ಅವರು ದಾದ್ರಾ ಮತ್ತು ನಗರ ಹವೇಲಿಯ ಯುವ ಕಾಂಗ್ರೆಸ್ನ ಜನರಲ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸಿದ್ದರು. 1989ರಲ್ಲಿ 9ನೇ ಲೋಕಸಭೆಗೆ ಸಂಸದರಾಗಿ ಆಯ್ಕೆಯಾದ ಅವರು 1990-91ರಲ್ಲಿ ಕಾನೂನು ಸ್ಥಾಯಿ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ನಂತರ ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸಲಹಾ ಸಮಿತಿಯಲ್ಲೂ ಅವರು ಕೆಲಸ ಮಾಡಿದ್ದರು. 1991ರಲ್ಲಿ ಮತ್ತು 1996ರಲ್ಲಿಯೂ ಅವರು ಸಂಸದರಾಗಿ ಆಯ್ಕೆಯಾಗಿದ್ದರು ಎಂದು ಲೋಕಸಭಾ ವೆಬ್ಸೈಟ್ ತಿಳಿಸುತ್ತದೆ.
ಹಿಂದಿನ ವರ್ಷ ದಾದ್ರಾ ಮತ್ತು ನಗರ ಹವೇಲಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಗಳನ್ನು ಮೋಹನ್ ದೇಲ್ಕರ್ ಬೆಂಬಲಿಸಿದ್ದರು. ಅದಕ್ಕೂ ಮೊದಲು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿದ್ದ ಅವರು, ಜೆಡಿಯು ಅಭ್ಯರ್ಥಿಗಳನ್ನು ಬೆಂಬಲಿಸಿ ಗೆಲ್ಲಿಸಿದ್ದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಖಾಸಗಿ ಭೇಟಿಗೆ ಮುಂಬೈಗೆ ಆಗಮಿಸಿದ್ದ ಅವರ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು, ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ: ಸಂಸದ ಅಭಿಷೇಕ್ ಬ್ಯಾನರ್ಜಿ ಮಾನನಷ್ಟ ಮೊಕದ್ದಮೆ ಕೇಸ್: ಅಮಿತ್ ಶಾಗೆ ಬಂಗಾಳ ವಿಶೇಷ ಕೋರ್ಟ್ನಿಂದ ಸಮನ್ಸ್
ಸ್ವಕ್ಷೇತ್ರ ವಯನಾಡ್ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ
Published On - 4:12 pm, Mon, 22 February 21