ಆರೋಗ್ಯ ಸಚಿವರ ಮನೆ ಪಕ್ಕದಲ್ಲೆ ಕುರಿ ಸಂತೆ, ಕೊವಿಡ್ ನಿಯಮಗಳಿಗೆ ತಿಲಾಂಜಲಿ ಇಟ್ಟ ಜನತೆ
ಸಂತೆಗೆ ಬರುವವರಿಗೆ ಮಾಸ್ಕ್ ಧರಿಸುವಂತೆ ಹೇಳಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡ್ತಿಲ್ಲ. ಇದ್ರಿಂದ ಆರೋಗ್ಯ ಸಚಿವರ ಸ್ವಗ್ರಾಮದಲ್ಲಿ ಕೊವಿಡ್ ನಿಯಮಗಳಿಗೆ ತಿಲಾಂಜಲಿ ಇಟ್ಟಿದ್ದು ಸರ್ಕಾರ ಆದೇಶಕ್ಕೆ ಅಪಹಾಸ್ಯ ಮಾಡಿದಂತಾಗಿದೆ.
ಚಿಕ್ಕಬಳ್ಳಾಪುರ: ಚಳಿಗಾಲದಲ್ಲಿ ಕೊರೊನಾ ಸೋಂಕಿನ ಬಗ್ಗೆ ಸಾಕಷ್ಟು ಜಾಗೃತರಾಗಿ ಇರಬೇಕೆಂದು ಸರ್ಕಾರ ಸೂಚಿಸಿದೆ. ಆದರೂ ನಮ್ಮ ಜನ ಮಾತ್ರ ಕೊರೊನಾ ಬಗ್ಗೆ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮ ಇದಕ್ಕೆ ತಾಜಾ ಉದಾಹರಣೆ. ಇದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಸ್ವಗ್ರಾಮ ಎನ್ನುವುದು ಗಮನಿಸಬೇಕಾದ ಸಂಗತಿ.
ಸಚಿವರ ಮನೆಯ ಪಕ್ಕದಲ್ಲೇ ಕುರಿ ಸಂತೆ ಸಚಿವರ ಮನೆಯ ಪಕ್ಕದಲ್ಲೆ ಪ್ರತಿ ಸೋಮವಾರ ಅದ್ದೂರಿಯಾಗಿ ಕುರಿ ಸಂತೆ ಆಯೋಜನೆ ಆಗುತ್ತೆ. ಸಂತೆಗೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ವಿವಿಧ ರಾಜ್ಯಗಳಿಂದ ಸಾವಿರಾರು ಜನ ಕುರಿ ವರ್ತಕರು ಬರುತ್ತಾರೆ. ಹೀಗೆ ಕುರಿಗಳ ಸಂತೆಗೆ ಬಂದವರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಿಲ್ಲ. ಮಾಸ್ಕ್ ಧರಿಸದೆ ಸಂತೆಯಲ್ಲಿ ಭಾಗಿಯಾಗುವುದು ಮಾಮೂಲು ಸಂಗತಿ. ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ ಮಾಸ್ಕ್ ಧರಿಸಿದ್ದು ಕಂಡು ಬಂತು.
ಸಂತೆಗೆ ಬರುವವರಿಗೆ ಕೊರೊನಾ ಜಾಗೃತಿಯಾಗಲಿ ಅಥವಾ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವುದಕ್ಕೆ ಯಾರೊಬ್ಬರೂ ಇಲ್ಲಿರುವುದಿಲ್ಲ. ಸ್ಥಳೀಯ ಪೆರೇಸಂದ್ರ ಗ್ರಾಮ ಪಂಚಾಯತಿ, ಪಶುವೈದ್ಯಕೀಯ ಸೇವಾ ಇಲಾಖೆ, ಎಪಿಎಂಸಿ ಸಿಬ್ಬಂದಿ ಅಥವಾ ಪೊಲೀಸರು ಈ ಬಗ್ಗೆ ಗಮನ ನೀಡುತ್ತಿಲ್ಲ.
ಸಹಕಾರ ಸಂಘದ ಜವಾಬ್ದಾರಿ.. ಕುರಿ ಸಂತೆಯಲ್ಲಿ ಪ್ರತಿ ಸೋಮವಾರ ಸಾವಿರಾರು ಜನ ಸೇರಿ ಸಂತೆ ಮಾಡುವ ಕಾರಣ ಸಂತೆಯ ನಿರ್ವಹಣೆ ಜವಾಬ್ದಾರಿಯನ್ನು ಸ್ಥಳಿಯ ಭೋಗನಂದೀಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಕ್ಕೆ ಒಪ್ಪಿಸಲಾಗಿದೆ. ಸಂತೆಯಲ್ಲಿ ಖರೀದಿಯಾಗುವ ಪ್ರತಿಯೊಂದು ಕುರಿಗೂ ಕುರಿಗಳ ವರ್ತಕರಿಂದ ₹ 5 ರೂಪಾಯಿ ಹಣ ಸಂಗ್ರಹಿಸುತ್ತಿದೆ. ಆದರೆ ಸಂತೆಗೆ ಬರುವ ರೈತರು ವರ್ತಕರ ಹಿತ ಮಾತ್ರ ಕಾಯುತ್ತಿಲ್ಲ.
ಸಂತೆಗೆ ಬರುವವರಿಗೆ ಮಾಸ್ಕ್ ಧರಿಸುವಂತೆ ಹೇಳಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡ್ತಿಲ್ಲ. ಇದ್ರಿಂದ ಆರೋಗ್ಯ ಸಚಿವರ ಸ್ವಗ್ರಾಮದಲ್ಲಿ ಕೊವಿಡ್ ನಿಯಮಗಳಿಗೆ ತಿಲಾಂಜಲಿ ಇಟ್ಟಿದ್ದು ಸರ್ಕಾರ ಆದೇಶಕ್ಕೆ ಅಪಹಾಸ್ಯ ಮಾಡಿದಂತಾಗಿದೆ.
-ಭೀಮಪ್ಪ ಪಾಟೀಲ
ಇದನ್ನೂ ಓದಿ: ಎಚ್ಚರ, ಎಚ್ಚರ… ಮರುಸೋಂಕಿಗೆ ಒಳಗಾದರೆ ಅಪಾಯ ಹೆಚ್ಚು!