ಮಂಗಳೂರು: ವಿದ್ಯಾರ್ಥಿಗಳ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ಸಂಬಂಧ ನಗರದ ಅಪಾರ್ಟ್ ಮೆಂಟ್ವೊಂದರಲ್ಲಿ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು ರೂಂ ಪಡೆದು ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿರುವುದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ನಗರದ ಅಪಾರ್ಟ್ಮೆಂಟ್ನಲ್ಲಿ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು ರೂಂ ಪಡೆದಿದ್ದರು. ಆ ರೂಮ್ನಲ್ಲಿ ಕೆಲ ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ ನಡೆದುಕೊಂಡ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಪರಿಶೀಲಿಸಿ ವಿಡಿಯೋ ಮಾಡಿದ ಹುಡುಗನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದೇವೆ ಎಂದಿದ್ದಾರೆ.
ಉಳಿದ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಯಾರು ಅನ್ನೋ ಮಾಹಿತಿ ಸಿಕ್ಕಿದೆ. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಮಂಗಳೂರು ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ. ವಿದ್ಯಾರ್ಥಿನಿಯನ್ನ ಠಾಣೆಗೆ ಕರೆಸಿ ಮಾಹಿತಿ ಪಡೆಯುವ ಪ್ರಕ್ರಿಯೆ ನಡೆದಿದೆ. ಮಂಗಳೂರು ನಗರದ ಬಾವುಟಗುಡ್ಡೆ ಬಳಿಯ ಅಪಾರ್ಟ್ಮೆಂಟ್ನಲ್ಲಿ ಜನವರಿಯಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ರೂಮ್ ಮಾಡಿ ವಿದ್ಯಾರ್ಥಿನಿಯರನ್ನು ಕರೆತರುತ್ತಿದ್ದ ಹುಡುಗರು
ಯುವತಿಯರೊಂದಿಗೆ ಅನುಚಿತವಾಗಿ ನಡೆದುಕೊಂಡ ಹುಡುಗರು ಎರಡು ತಿಂಗಳುಗಳ ಕಾಲ ಬಾವುಟಗುಡ್ಡೆ ಬಳಿಯ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದರು. ಈ ವೇಳೆ ಮದ್ಯಪಾನ ಮಾಡುವುದು ಮತ್ತು ಯಾರನ್ನೋ ಕರೆದುಕೊಂಡು ಬರುತ್ತಿದ್ದಾರೆ ಎಂದು ತಿಳಿದು ಅಪಾರ್ಟ್ಮೆಂಟ್ ಮಾಲೀಕರು ಹುಡುಗರನ್ನು ಅಪಾರ್ಟ್ಮೆಂಟ್ನಿಂದ ಖಾಲಿ ಮಾಡಿಸಿದ್ದರು ಎಂದು ಆಯುಕ್ತರು ಹೇಳಿದ್ದಾರೆ.
ವಿಡಿಯೋ ಲೀಕ್ ಮಾಡಿದ್ದು ಯಾರು?
ವಿದ್ಯಾರ್ಥಿಗಳು ವಿಡಿಯೋ ವೈರಲ್ ಪ್ರಕರಣ ಸಂಬಂಧ ಯಾವುದೇ ಪ್ರಕರಣ ದಾಖಲಿಸಿಲ್ಲ, ವಿಚಾರಣೆ ನಡೆಸಿದ ನಂತರ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ. ವಿಡಿಯೋ ಲೀಕ್ ಬಗ್ಗೆ ಮಾತನಾಡಿ, ವಿದ್ಯಾರ್ಥಿಯೊಬ್ಬ ತನ್ನ ತರಗತಿಯ ವಾಟ್ಸ್ಆ್ಯಪ್ ಗ್ರೂಪ್ಗೆ ನೇರವಾಗಿ ಶೇರ್ ಮಾಡಿದ್ದಾನೆ. ಇದನ್ನು ಸಂಯೋಜಕ ಪ್ರಾಂಶುಪಾಲರಿಗೆ ಮಾಹಿತಿ ತಿಳಿಸಿದ್ದಾನೆ. ಬಳಿಕ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಕರೆಸಿ ಮಾತನಾಡಿದ್ದು, ಆಂತರಿಕ ಶಿಸ್ತು ಪಾಲನಾ ಸಮಿತಿ ಮೂಲಕ ವಿಚಾರಣೆ ನಡೆಸಿ ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದಾರೆ ಎಂದರು.
ಫೇಕ್ ಖಾತೆ ತೆರೆದು ವಿಡಿಯೋ ಅಪ್ಲೋಡ್
ಕೆಲವರು ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ವಿದ್ಯಾರ್ಥಿಗಳ ಅಶ್ಲೀಲ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪೋಷಕರನ್ನ ಕರೆಸಿ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕಂಡು ಬಂದಿಲ್ಲ, ದೌರ್ಜನ್ಯ ಕಂಡುಬಂದರೆ ಪ್ರಕರಣ ದಾಖಲಿಸಲಾಗುವುದು. ವಿದ್ಯಾರ್ಥಿನಿಯರ ವಯಸ್ಸಿನ ಆಧಾರದಲ್ಲಿ ಪೋಸ್ಕೋ ದಾಖಲಿಸುವ ಬಗ್ಗೆ ಕಾನೂನು ತಜ್ಞರ ಸಲಹೆ ನೀಡಲಿದ್ದಾರೆ. ಇದರಲ್ಲಿ ಮಂಗಳೂರು ನಗರ ಮತ್ತು ಹೊರಗಿನ ವಿದ್ಯಾರ್ಥಿಗಳು ಇದ್ದಾರೆ. ವಿಡಿಯೋದ ಹೊರತಾಗಿ ಯಾರೆಲ್ಲಾ ಇದ್ದರು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು. ಯಾರಾದರೂ ದೂರು ಕೊಟ್ಟರೆ ಅದನ್ನು ಆಧರಿಸಿ ತನಿಖೆ ನಡೆಸಲಾಗುವುದು ಎಂದರು.
ಸೆಕ್ಸ್ಗೆ ತಿರುಗಿದ ಟ್ರುತ್ ಆಂಡ್ ಡೇರ್ ಆಟ
ವಿದ್ಯಾರ್ಥಿಗಳು ಟ್ರುತ್ ಆಂಡ್ ಡೇರ್ ಆಟ ಆಡುವಾಗ ಇದೆಲ್ಲ ನಡೆದಿದೆ ಎಂದು ಹೇಳಿದ ಪೊಲೀಸ್ ಆಯುಕ್ತ ಶಶಿಕುಮಾರ್, ವಿದ್ಯಾರ್ಥಿಗಳ ವಯಸ್ಸು 18 ವರ್ಷ ಕೆಳಗೆ ಇದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ವಿಚಾರದಲ್ಲಿ ಕಾಲೇಜು ಆಡಳಿತದ ಹೊಣೆ ಇರುತ್ತದೆ. ಕೆಲವು ವಿದ್ಯಾರ್ಥಿಗಳು ಹಾಸ್ಟೆಲ್, ಪಿಜಿಗಳಲ್ಲಿ ಇದ್ದಾಗ ಇಂತಹ ಚಟುವಕಟಿಯಲ್ಲಿ ಇರುತ್ತಾರೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ಪೊಲೀಸರಿಗೆ ಈ ವಿಚಾರವನ್ನು ತಿಳಿಸಬೇಕು. ಒಂದು ವೇಳೆ ಪ್ರಕರಣ ದಾಖಲಾದರೆ ಕಾಲೇಜು ಆಡಳಿತದ ವಿರುದ್ಧವೂ ವಿಚಾರಣೆ ನಡೆಸಲಾಗುತ್ತದೆ ಎಂದರು.
Published On - 2:07 pm, Thu, 21 July 22