ಬೆಂಗಳೂರು: ಕೊರೊನಾ ಮಹಾಮಾರಿಯ ಕೆಂಗಣ್ಣಿನಿಂದ ಶಾಲಾ ಮಕ್ಕಳನ್ನು ದೂರವಿಡಲು ಶಿಕ್ಷಣ ಇಲಾಖೆ ತಜ್ಞರ ಸಲಹೆ ಮೇರೆಗೆ ಆನ್ಲೈನ್ ಕ್ಲಾಸ್ಗಳ ಮುಖಾಂತರ ಪಾಠ ಮಾಡುವ ಸಲಹೆ ನೀಡಿತ್ತು. ವಿದ್ಯಾರ್ಥಿಗಳು ತಮ್ಮ ನಿವಾಸದ ಸುರಕ್ಷತೆಯಲ್ಲೇ ಕುಳಿತು ಪಾಠ ಕೇಳಿದರೆ ಚಿಣ್ಣರಲ್ಲಿ ವೈರಸ್ ಹರಡುವಿಕೆಯನ್ನು ತಡೆಯಬಹುದು ಎಂಬ ನಿರೀಕ್ಷೆಯಲ್ಲಿ ಈ ಯೋಚನೆಯನ್ನು ಕಾರ್ಯರೂಪಕ್ಕೆ ತರಲಾಗಿತ್ತು.
ಆದರೆ, ಈಗ ಸತತ ಆನ್ಲೈನ್ ಕ್ಲಾಸ್ಗಳಿಂದ ಮತ್ತೊಂದು ಅವಾಂತರ ಸೃಷ್ಟಿಯಾಗಿದೆ. ಹೌದು, ಆನ್ಲೈನ್ ಕ್ಲಾಸ್ಗಳಿಂದ ಇದೀಗ ಪೋಷಕರು ಹಾಗೂ ಶಿಕ್ಷಕರಲ್ಲಿ ಹೊಸ ಟೆನ್ಷನ್ ಶುರುವಾಗಿದೆ. ಆನ್ಲೈನ್ ಪಾಠಗಳಿಂದ ಮಕ್ಕಳ ಕಣ್ಣಿಗೆ ಕುತ್ತು ಬಂದಿದೆ.
ಯೆಸ್, ಇ-ಕಲಿಕೆಯಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಳವಾಗಿರುವುದು ಕಂಡುಬಂದಿದೆ. ಆನ್ಲೈನ್ ಕಲಿಕೆಯಿಂದಾಗಿ ವಿದ್ಯಾರ್ಥಿಗಳಲ್ಲಿ ದೃಷ್ಠಿ ಸಮಸ್ಯೆ (ವಿಷನ್ ಸಿಂಡ್ರೋಮ್) ಸಹ ಏರಿಕೆ ಆಗಿದೆ. ರಾಜ್ಯದ ಶೇ. 30 ರಿಂದ 40 ರಷ್ಟು ಮಕ್ಕಳಲ್ಲಿ ದೃಷ್ಟಿದೋಷ ಸಮಸ್ಯೆ ಕಂಡುಬಂದಿದೆ. ಕೊರೊನಾ ಆರಂಭಿಕ ಹಾಗೂ ನಂತರದ ದಿನಗಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಾಗ್ತಿದೆ. ಆದರೆ, ಪೋಷಕರು ತಮ್ಮ ಮಕ್ಕಳ ನೇತ್ರದ ತಪಾಸಣೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿ ಸಹ ಲಭ್ಯವಾಗಿದೆ.
ಸದ್ಯ, ಕೊರೊನಾ ಆರ್ಭಟ ಕೊಂಚ ಕಡಿಮೆಯಾಗಿರುವುದರಿಂದ ಪುನಃ ಶಾಲೆಗೆ ಮರಳಿರುವ ಹಲವು ವಿದ್ಯಾರ್ಥಿಗಳಲ್ಲಿ ಡ್ರೈ ಐ (Dry eye) ಕಣ್ಣಿನ ಸಮಸ್ಯೆ ಉಂಟಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಬೋರ್ಡ್ ಮೇಲಿರುವುದನ್ನ ಓದಲು ಕಷ್ಟ ಪಡುತ್ತಿರುವುದು ಕಂಡುಬಂದಿದೆ.
ಆನ್ಲೈನ್ ಕ್ಲಾಸ್ಗಳಿಗಾಗಿ ಡಿಜಿಟಲ್ ಸಾಧನಗಳ ಮೊರೆ ಹೋಗಿದ್ದರಿಂದ ನಗರದ ಶೇ.30 ರಷ್ಟು ಮಕ್ಕಳಲ್ಲಿ ಒಣ ಕಣ್ಣಿನ ಸಮಸ್ಯೆ ಅಥವಾ ಡ್ರೈ ಐ ಸಮಸ್ಯೆ ಎದುರಾಗಿದೆ. ಅಷ್ಟೇ ಅಲ್ಲ, ಗ್ಲೂಕೋಮಾ ಪ್ರಕರಣಗಳ ಸಂಖ್ಯೆ ಕೂಡ ಏರಿಕೆ ಕಂಡಿದೆ. ಹಾಗಾಗಿ, ಪೋಷಕರಿಗೆ ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಟೆನ್ಷನ್ ಶುರುವಾಗಿದೆ.
ಹಾಗಾದರೆ, ಈ ಕಣ್ಣಿನ ಸಮಸ್ಯೆಗೆ ಪರಿಹಾರವೇನು?
ಅಂದ ಹಾಗೆ, ಈ ಡ್ರೈ ಐ ಅಥವಾ ಒಣ ಕಣ್ಣಿನ ಸಮಸ್ಯೆಗೂ ಪರಿಹಾರವಿದೆ. ಅದರ ವಿವರ ಹೀಗಿದೆ.
1. ಮೊಬೈಲ್, ಡಿಜಿಟಲ್ ಸಾಧನಗಳ ಕಡಿಮೆ ಬಳಕೆ
2. ಪ್ರತಿ 20 ನಿಮಿಷಗಳ ನಂತರ 20 ಅಡಿ ದೂರದಲ್ಲಿರುವ ವಸ್ತುವನ್ನ 20 ಸೆಕೆಂಡ್ ನಿರಂತರವಾಗಿ ನೋಡಬೇಕು
3. ಪದೇ ಪದೇ ಕಣ್ಣಿನ ರೆಪ್ಪೆಗಳನ್ನ ಮಿಟುಕಿಸಬೇಕು
4. ಬಿಸಿ ನೀರಿನ ಮೂಲಕ ಬಟ್ಟೆ ತೇವ ಮಾಡಿ ಕಣ್ಣಿಗೆ ಮಸಾಜ್ ಮಾಡುವುದು
ಇವೆಲ್ಲವುಗಳನ್ನು ಮಾಡಿದರೆ ಈ ಒಣ ಕಣ್ಣಿನ ಸಮಸ್ಯೆಯಿಂದ ಸ್ವಲ್ಪ ಪರಿಹಾರ ಕಾಣಬಹುದು.