ದೆಹಲಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಹೈಕೋರ್ಟ್ ಸಿಜೆಗಳ ಕಾನ್ಪರೆನ್ಸ್ ನಡೆಯುತ್ತಿದೆ. ಇಂದು ಕಾನ್ಪರೆನ್ಸ್ ನಲ್ಲಿ ಸುಪ್ರೀಂಕೋರ್ಟ್ ಸಿಜೆ ರಮಣ ಅವರು (Chief Justice of India NV Ramana) ಸ್ವಾಗತ ಭಾಷಣ ಮಾಡುತ್ತಾ, ಹೈಕೋರ್ಟ್ ನಲ್ಲಿ (High Court) ಖಾಲಿ ಇರುವ ನ್ಯಾಯಮೂರ್ತಿಗಳ (Judge) ಹುದ್ದೆ ಭರ್ತಿಗೆ (Recruitment) ಹೆಸರುಗಳನ್ನು ಶಿಫಾರಸ್ಸು ಮಾಡಬೇಕೆಂದು ಹೈಕೋರ್ಟ್ ಸಿಜೆಗಳಿಗೆ ಮನವಿ ಮಾಡಿದ್ದಾರೆ. ನಾಳೆ ಹೈಕೋರ್ಟ್ ಸಿಜೆ ಹಾಗೂ ಸಿಎಂಗಳ ಕಾನ್ಪರೆನ್ಸ್ ನಡೆಯಲಿದೆ.
ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗಳಿಗೆ ಶಿಫಾರಸ್ಸು ಮಾಡಿ -ಸಿಜೆಐ
ಹೈಕೋರ್ಟ್ ಗಳಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗಳಿಗೆ ನ್ಯಾಯಮೂರ್ತಿಗಳ ಹೆಸರುನ್ನ ಶಿಫಾರಸ್ಸು ಮಾಡುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಇಂದು ಹೈಕೋರ್ಟ್ ಸಿಜೆಗಳಿಗೆ ಹೇಳಿದ್ದಾರೆ. ದೆಹಲಿಯಲ್ಲಿ ಇಂದು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಸಮ್ಮೇಳನದಲ್ಲಿ ಸ್ವಾಗತ ಭಾಷಣ ಮಾಡುತ್ತಾ ಸಿಜೆ ಎನ್.ವಿ.ರಮಣ ಅವರು ಮಾತನಾಡಿದರು. ಆರು ವರ್ಷಗಳ ನಂತರ ಹೈಕೋರ್ಟ್ ಸಿಜೆಗಳ ಸಮ್ಮೇಳನ ನಡೆಯುತ್ತಿರುವುದು ವಿಶೇಷ. ನಿಮ್ಮ ಜೊತೆಗೆ ನನ್ನ ಮೊದಲ ಸಂವಹನ ನ್ಯಾಯಮೂರ್ತಿಗಳ ಖಾಲಿ ಹುದ್ದೆ ಭರ್ತಿ ಮಾಡುವುದರ ಬಗ್ಗೆ ಆಗಿತ್ತು ಎಂಬುದನ್ನು ತಾವು ಸ್ಮರಿಸಿಕೊಳ್ಳಬಹುದು. ನಮ್ಮ ಮೊದಲ ಆನ್ ಲೈನ್ ಸಂವಾದದಲ್ಲೂ ಹೈಕೋರ್ಟ್ ಗೆ ನ್ಯಾಯಮೂರ್ತಿಗಳ ಹೆಸರುನ್ನು ಸಾಮಾಜಿಕ ವೈವಿಧ್ಯತೆಗೆ ಒತ್ತು ನೀಡಿ ಶಿಫಾರಸ್ಸು ಮಾಡುವುದನ್ನು ತ್ವರಿತಗೊಳಿಸಲು ಹೇಳಿದ್ದೆ ಎಂದು ಸಿಜೆಐ ಎನ್.ವಿ.ರಮಣ ಹೇಳಿದ್ದರು.
ಬಹಳಷ್ಟು ಹೈಕೋರ್ಟ್ ಗಳ ಸ್ಪಂದನೆಯೂ ಬಹಳ ಪೋತ್ಸಾಹದಾಯಕವಾಗಿತ್ತು. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಹೈಕೋರ್ಟ್ ಗಳ 126 ನ್ಯಾಯಮೂರ್ತಿಗಳ ಹುದ್ದೆಯನ್ನು ಭರ್ತಿ ಮಾಡಲಾಗಿದೆ. ಸಾಮೂಹಿಕ ಶ್ರಮದ ಫಲವಾಗಿ ಈ ನೇಮಕಾತಿ ನಡೆದಿದೆ. ಇನ್ನೂ 50 ನ್ಯಾಯಮೂರ್ತಿಗಳ ನೇಮಕವಾಗುವುದು ಬಾಕಿ ಇದೆ. ನಿಮ್ಮೆಲ್ಲರ ಸಹಕಾರ ಹಾಗೂ ನ್ಯಾಯಾಂಗ ಕ್ಷೇತ್ರಕ್ಕೆ ನಿಮ್ಮ ಬದ್ದತೆಯಿಂದ ಈ ಮೈಲಿಗಲ್ಲಿನ ಸಾಧನೆ ಸಾಧ್ಯವಾಗಿದೆ. ಇನ್ನೂ ಹೈಕೋರ್ಟ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಹೈಕೋರ್ಟ್ ಸಿಜೆಗಳು ಹೆಸರುಗಳನ್ನು ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಸಿಜೆ ಎನ್.ವಿ.ರಮಣ ಹೇಳಿದ್ದರು.
ಕಳೆದೊಂದು ವರ್ಷದಲ್ಲಿ ಸುಪ್ರೀಂಕೋರ್ಟ್ ಗೆ 9 ಹೊಸ ನ್ಯಾಯಮೂರ್ತಿಗಳ ನೇಮಕವಾಗಿದೆ. ಹೈಕೋರ್ಟ್ ಗಳಿಗೆ 10 ಮುಖ್ಯ ನ್ಯಾಯಮೂರ್ತಿಗಳ ನೇಮಕವಾಗಿದೆ. ಕೊಲಿಜಿಯಂನಲ್ಲಿರುವ ನಮ್ಮ ಸೋದರ ನ್ಯಾಯಮೂರ್ತಿಗಳಿಗೆ ಅವರ ಸಹಕಾರಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದು ಸಿಜೆಐ ರಮಣ ಹೇಳಿದ್ದರು.
ಕಳೆದ ವಾರವೂ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡುತ್ತಾ, ನ್ಯಾಯಮೂರ್ತಿಗಳ ನೇಮಕದ ಬಗ್ಗೆ ರಮಣ ಹೇಳಿದ್ದರು. ದೇಶದ ವಿವಿಧ ಹೈಕೋರ್ಟ್ ಗಳಲ್ಲಿ 212 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ. ನ್ಯಾಯಮೂರ್ತಿಗಳ ಕಾನ್ಪರೆನ್ಸ್ ಗೆ 6 ಅಜೆಂಡಾಗಳನ್ನು ಸಿಜೆಐ ರಮಣ ಪಟ್ಟಿ ಮಾಡಿದ್ದಾರೆ.
1-ಆದ್ಯತೆಯ ಮೇಲೆ ದೇಶಾದ್ಯಂತ ಎಲ್ಲ ಕೋರ್ಟ್ ಗಳಲ್ಲಿ ಐ.ಟಿ. ಮೂಲಸೌಕರ್ಯವನ್ನು ಬಲಪಡಿಸಬೇಕು.
2-ಮಾನವ ಸಂಪನ್ಮೂಲ ಅಥವಾ ಸಿಬ್ಬಂದಿಯ ನೀತಿ, ಜಿಲ್ಲಾ ಕೋರ್ಟ್ ಗಳ ಅಗತ್ಯತೆ.
3-ಮೂಲಸೌಕರ್ಯ ಮತ್ತು ಸಾಮರ್ಥ್ಯ ವೃದ್ದಿ
4-ಸಾಂಸ್ಥಿಕ ಮತ್ತು ನ್ಯಾಯಾಂಗ ಸುಧಾರಣೆ
5-ಹೈಕೋರ್ಟ್ ಗೆ ನ್ಯಾಯಮೂರ್ತಿಗಳ ನೇಮಕ
6-ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ನೀಡಬೇಕಾದ ಸೌಲಭ್ಯ, ಪರಿಹಾರ ಹಾಗೂ ನ್ಯಾಯಮೂರ್ತಿಗಳ ನಿವೃತ್ತಿ ನಂತರದ ಸೌಲಭ್ಯಗಳು.
ಸಿಜೆಗಳ ಸಮ್ಮೇಳನದ ಉದ್ದೇಶ ಮತ್ತು ಗುರಿಯು ನ್ಯಾಯಾಂಗ ಆಡಳಿತದ ಸಮಸ್ಯೆಗಳನ್ನು ಗುರುತಿಸಿ ಅವುಗಳ ಬಗ್ಗೆ ಚರ್ಚಿಸುವುದೇ ಆಗಿದೆ ಎಂದು ಸಿಜೆಐ ರಮಣ ಹೇಳಿದರು. ಕಾನ್ಪರೆನ್ಸ್ ನಲ್ಲಿ ಸುಪ್ರೀಂಕೋರ್ಟ್ ನ ಹಿರಿಯ ನ್ಯಾಯಮೂರ್ತಿಗಳಾದ ಉದಯ ಲಲಿತ್ ಹಾಗೂ ಎ.ಎಂ.ಖಾನವಿಲ್ಕರ್ ಅವರು ಸಿಜೆ ರಮಣ ಅವರ ಜೊತೆಗೆ ಭಾಗಿಯಾಗಿದ್ದರು.
ಇಂದು ಹೈಕೋರ್ಟ್ ಸಿಜೆಗಳ ಕಾನ್ಪರೆನ್ಸ್ ನಡೆದರೇ, ನಾಳೆ ಹೈಕೋರ್ಟ್ ಸಿಜೆ ಹಾಗೂ ಸಿಎಂಗಳ ಕಾನ್ಪರೆನ್ಸ್ ನಡೆಯಲಿದೆ. ನಾಳಿನ ಕಾನ್ಪರೆನ್ಸ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸುವರು. ಕೇಂದ್ರದ ಕಾನೂನು ಸಚಿವ ಕಿರಣ್ ರಿಜಿಜು ಹಾಗೂ ಸಿಜೆಐ ರಮಣ ಹಾಗೂ ಎಲ್ಲ ರಾಜ್ಯಗಳ ಸಿಎಂಗಳು ಕಾನ್ಪರೆನ್ಸ್ ನಲ್ಲಿ ಭಾಗಿಯಾಗುವರು. ಸಿಜೆಗಳ ಕಾನ್ಪರೆನ್ಸ್ ನಲ್ಲಿ ಭಾಗಿಯಾಗಲು ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳುತ್ತಿದ್ದಾರೆ.