ಮಂಡ್ಯ: ಕೃಷ್ಣರಾಜ ಸಾಗರ ಜಲಾಶಯ ಅಂದ್ರೆ ಎಷ್ಟು ಜನರಿಗೆ ಗೊತ್ತಾಗುತ್ತೋ ಇಲ್ವೋ ಗೊತ್ತಿಲ್ಲ.. ಆದ್ರೆ, ಕೆಆರ್ಎಸ್ ಅಂದ್ರೆ ಮಾತ್ರ ಥಟ್ಟನೆ ಎಲ್ಲರೂ ತಿರುಗಿ ನೋಡ್ತಾರೆ. ಅಷ್ಟರ ಮಟ್ಟಿಗೆ ಕನ್ನಡಿಗರಿಗೂ ಕೆಆರ್ಎಸ್ಗೂ ನಿಕಟವಾದ ನಂಟಿದೆ. ಇಂತಾ ಕೆಆರ್ಎಸ್ ಡ್ಯಾಂನಲ್ಲಿ ಬಿರುಕು ಕಾಣಿಸಿಕೊಂಡಿದೆ ಅಂತಾ ಮಂಡ್ಯ ಸಂಸದೆ ಸುಮಲತಾ ದೊಡ್ಡ ಬಾಂಬ್ ಸಿಡಿಸಿದ್ರು. ಯಾವಾಗ ಈ ರೀತಿಯ ಬಾಂಬ್ ಸಿಡಿಸಿದ್ರೋ.. ಇದಕ್ಕೆ ತಿರುಗೇಟು ನೀಡೋ ಭರದಲ್ಲಿ ಮಾಜಿ ಸಿಎಂ ಹೆಚ್ಡಿಕೆ ಆಡಿದ್ದ ಮಾತು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆಯ ನಂತರ ಇಬ್ಬರ ನಡುವೆ ಮಾತಿನ ಮಲ್ಲಯುದ್ಧವೇ ನಡೆದು ಹೋಗಿತ್ತು. ವಾಕ್ಸಮರ ತಾರಕಕ್ಕೇರಿದ್ದಾಗಲೇ ಅಂದ್ರೆ ಜುಲೈ 7 ರಂದು ಮಂಡ್ಯದಲ್ಲಿ ಗಣಿಗಾರಿಕೆ ನಡೀತಿದ್ದ ಪ್ರದೇಶಗಳಿಗೆ ಸುಮಲತಾ ಭೇಟಿ ನೀಡಿದ್ರು. ಅಂದೂ ಸಹ ಹಲವು ಹೈಡ್ರಾಮಾಗಳು ನಡೆದಿದ್ವು. ಇವತ್ತು ಕೆಆರ್ಎಸ್ ಮತ್ತು ಬೇಬಿ ಬೆಟ್ಟಕ್ಕೆ ಸುಮಲತಾ ಭೇಟಿ ನೀಡ್ತಿದ್ದಾರೆ.
ಇಂದು ಕೆಆರ್ಎಸ್ ಜಲಾಶಯಕ್ಕೆ ಸಂಸದೆ ಸುಮಲತಾ ಭೇಟಿ
ಜುಲೈ 7 ರಂದು ಗಣಿಗಾರಿಕೆ ನಡೆಯುತ್ತಿರೋ ಪ್ರದೇಶಗಳಿಗೆ ಭೇಟಿ ನೀಡಿದ್ರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ದಳಪತಿಗಳು, ಡ್ಯಾಂ ಬಿರುಕು ಬಿಟ್ಟಿದೆ ಅಂದ್ರೆ ಅವರು ಜಲಾಶಯಕ್ಕೆ ಭೇಟಿ ನೀಡಬೇಕಿತ್ತು. ಅದು ಬಿಟ್ಟು ಗಣಿಗಾರಿಕೆ ನಡೀತಿರೋ ಪ್ರದೇಶಗಳಿಗೆ ಭೇಟಿ ನೀಡ್ತಿರೋದ್ಯಾಕೆ ಅಂತಾ ಪ್ರಶ್ನಿಸಿದ್ರು. ಹೀಗಾಗಿ ಇಂದು ಮಧ್ಯಾಹ್ನ 12.30ರ ಸುಮಾರಿಗೆ ಕೆಆರ್ಎಸ್ ಡ್ಯಾಂಗೆ ಭೇಟಿ ನೀಡಲಿದ್ದಾರೆ. ಜೊತೆಗೆ ಅಧಿಕಾರಿಗಳ ಸಭೆ ನಡೆಸಿ ಡ್ಯಾಂ ಸುರಕ್ಷತೆಯ ಮಾಹಿತಿ ಪಡೆಯಲಿದ್ದಾರೆ.
ಇದಾದ ಬಳಿಕ ಡ್ಯಾಂಗೆ ತೊಂದರೆ ನೀಡ್ತಿದೆ ಅಂತಾ ಹೇಳಲಾಗ್ತಿರೋ ಬೇಬಿ ಬೆಟ್ಟಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಮಂಡ್ಯದಲ್ಲಿ ನಡೀತಿರೋ ಈ ಎಲ್ಲ ಬೆಳವಣಿಗೆಗಳಿಗೆ ಸಂಸದೆ ಸುಮಲತಾ ಅಂಬರೀಶ್, ಮೇ 29 ರಂದು ಮಂಡ್ಯದ ಪ್ರೆಸ್ಕ್ಲಬ್ನಲ್ಲಿ ನಡೆದ ಸಂವಾದದಲ್ಲಿ ನೀಡಿದ್ದ ಹೇಳಿಕೆ ಕಾರಣವಾಗಿತ್ತು. ಅಂದು ಅವರು ನೀಡಿದ್ದ ಕೆಆರ್ಎಸ್ ಬಿರುಕು ಬಿಟ್ಟಿದೆ ಅನ್ನೋ ಹೇಳಿಕೆಯನ್ನ ಖಂಡಿಸಿ, ಮಾರನೇ ದಿನವೇ ಅಂದ್ರೆ ಮೇ 30ರಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ತಿರುಗೇಟು ನೀಡಿದ್ರು. ಸಂಸದರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಈ ರೀತಿ ಹೇಳಿಕೆ ನೀಡ್ತಿದ್ದಾರೆ ಅಂತಾ ಕಿಡಿಕಾರಿದ್ರು. ಇಲ್ಲಿಂದ ಬೆಂಕಿ ಹೊತ್ತಿಕೊಂಡಿತ್ತು. ಈ ಬೆಂಕಿ ಹೊತ್ತಿಕೊಂಡ ಬರೋಬ್ಬರಿ ಒಂದೂವರೆ ತಿಂಗಳ ಬಳಿಕ ಸಂಸದೆ ಸುಮಲತಾ ಡ್ಯಾಂಗೆ ಭೇಟಿ ನೀಡ್ತಿದ್ದಾರೆ. ಇಂದಿನ ಭೇಟಿ ಬಳಿಕ ಸಂಸದೆ ಮತ್ತು ಜೆಡಿಎಸ್ ನಾಯಕರ ನಡುವಿನ ವಾಕ್ಸಮರ ಮತ್ತೊಂದು ಹಂತಕ್ಕೆ ತಲುಪೋ ನಿರೀಕ್ಷೆ ಇದೆ.
ಕೆಆರ್ಎಸ್ ನಂತರ ಬೇಬಿ ಬೆಟ್ಟಕ್ಕೂ ಸಂಸದೆ ಸುಮಲತಾ ಭೇಟಿ ನೀಡಲಿದ್ದಾರೆ. ಬೇಬಿ ಬೆಟ್ಟವನ್ನ ಅಮೃತ್ ಮಹಲ್ ಕಾವಲ್ ಪ್ರದೇಶ ಎಂದೂ ಸಹ ಕರೆಯಲಾಗುತ್ತೆ. ಈ ಅಮೃತ್ ಮಹಲ್ ಪ್ರದೇಶದ ಸರ್ವೆ ನಂಬರ್ 1 ರಲ್ಲಿ 1623 ಎಕರೆ ವಿಸ್ತೀರ್ಣ ಪ್ರದೇಶ ಹೊಂದಿದೆ. ಈ ಪೈಕಿ 1487 ಎಕರೆ ಪ್ರದೇಶ ಮೈಸೂರು ಸಂಸ್ಥಾನಕ್ಕೆ ಸೇರಿದ ಸ್ಥಳವಾಗಿದೆ ಎನ್ನಲಾಗಿದೆ. ಈಗಲೂ ಅವರ ಹೆಸರಿನಲ್ಲಿಯೇ ಆರ್ಟಿಸಿ ಬರುತ್ತಿದೆ. ಈ ನಡುವೆ ಬೇಬಿ ಬೆಟ್ಟದಲ್ಲಿ 80 ಕ್ಕೂ ಹೆಚ್ಚು ಕ್ರಷರ್ಗಳು ಇದ್ದು ಈ ಪೈಕಿ 50 ಕ್ರಷರ್ಗಳು ಇಂದಿಗೂ ಅನಧಿಕೃತವಾಗಿಯೇ ನಡೆಯುತ್ತಿವೆ. ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿರುವವರು ಎಲ್ಲ ಪಕ್ಷಗಳಿಗೂ ಸೇರಿದವರು. ಕೆಆರ್ಎಸ್ ಡ್ಯಾಂ ನಿಂದ ಕೇವಲ 10 ಕಿ.ಮಿ ದೂರ ಈ ಬೇಬಿ ಬೆಟ್ಟವಿದೆ.
ಪೊಲೀಸರಿಗೆ ಎಚ್ಚರಿಕೆಯ ಪತ್ರ ನೀಡಿದ ಗ್ರಾಮ ಪಂಚಾಯ್ತಿ ಅಧ್ಯಕ್ಷ
ಇನ್ನು ಸಂಸದೆ ಸುಮಲತಾ ಅಂಬರೀಶ್ ಕೆಆರ್ಎಸ್ ಡ್ಯಾಂ ವೀಕ್ಷಣೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಂದ್ರ ಕುಮಾರ್ ಮಂಡ್ಯ ಎಸ್.ಪಿ ಹಾಗೂ ಕೆಆರ್ಎಸ್ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಸಂಸದರಾಗಿ ಡ್ಯಾಂ ವೀಕ್ಷಣೆಗೆ ಬರ್ತಿರೋದಕ್ಕೆ ನಮ್ಮ ಅಭ್ಯಂತರವಿಲ್ಲ. ಆದ್ರೆ ಸಾಮಾಜಿಕ ಜಾಲ ತಾಣಗಳಲ್ಲಿ ಸ್ಕೂಟರ್ ಜಾಥ ಇದೆ ಎಂದು ಭಿತ್ತರಿಸಿದ್ದಾರೆ.
ಜನ ಕೊರೊನಾದಿಂದ ತತ್ತರಿಸಿದ್ದಾರೆ. ನಾವುಗಳು ಜನರಿಗೆ ತಿಳಿಹೇಳಿ ಕೊರೊನಾ ಒಂದು ಹಂತದಲ್ಲಿದೆ. ಇದರ ಹಿಂದೆ ಹಲವರ ಪರಿಶ್ರಮ ಇದೆ. ಹಾಗಾಗಿ ನೀವುಗಳು, ಅಧಿಕಾರಿಗಳ ಜೊತೆ ಬಂದು ವೀಕ್ಷಿಸಿ. ಸ್ಕೂಟರ್ ಜಾಥಾ, ಜಾಸ್ತಿ ಜನ ಸೇರುವುದು ನಿಮಗೂ ತೊಂದರೆ ನಮಗೂ ತೊಂದರೆ. ಜಾಥಾ ಮತ್ತು ಸಾರ್ವಜನಿಕರ ಸಭೆಗೆ ನಮ್ಮ ಆಕ್ಷೇಪಣೆ ಇದೆ. ಕೊರೊನಾ ಮಾನದಂಡದಲ್ಲಿ ನಿಮ್ಮ ಪ್ರವಾಸ ಇರಲಿ ಎಂದು ಸಂಸದೆ ಸುಮಲತಾರನ್ನ ಉದ್ದೇಶಿಸಿ ಪತ್ರ ಬರೆದಿದ್ದಾರೆ.
‘ನನಗೆ ರಾಯಕೀಯವೂ ಹೊಸದು.. ಭ್ರಷ್ಟಾಚಾರವೂ ಹೊಸದು’
ಇವತ್ತು ಕೆಆರ್ಎಸ್ ಭೇಟಿಗೂ ಮುನ್ನ ನಿನ್ನೆ ಮಂಡ್ಯದ ಮನ್ಮುಲ್ ಎದುರು ನಡೆದ ರೈತರ ಪ್ರತಿಭಟನೆಯಲ್ಲಿ ಸುಮಲತಾ ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಅವರು, ಜೆಡಿಎಸ್ ನಾಯಕರು ನನ್ನ ಕುರಿತು ಹೇಳ್ತಿರೋ ಹಲವು ಮಾತುಗಳಲ್ಲಿ ನಿಜವಿದೆ. ಹೌದು.. ಅವರು ಹೇಳ್ತಿರೋ ಹಾಗೆ ನನಗೆ ರಾಜಕೀಯ ಹೊಸದು. ಅದನ್ನ ಕಲಿತುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇದೇ ರೀತಿ ನನಗೆ ಭ್ರಷ್ಟಾಚಾರವೂ ಹೊಸದು ಅಂತಾ ತೆನೆ ಹೊತ್ತ ನಾಯಕರಿಗೆ ತಿರುಗೇಟು ನೀಡಿದ್ರು.
ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಎರಡು ದಿನ ಕ್ಷೇತ್ರ ಪ್ರವಾಸ ಮಾಡ್ತಿದ್ದಾರೆ. ಇವತ್ತು ಕೆಆರ್ಎಸ್ ಡ್ಯಾಂ ಮತ್ತು ಬೇಬಿ ಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಯಾವ ಹೇಳಿಕೆ ನೀಡ್ತಾರೆ. ಇದಕ್ಕೆ ದಳಪತಿಗಳು ನೀಡೋ ಕೌಂಟರ್ ಏನು ಅನ್ನೋದು ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಇಷ್ಟು ದಿನ ಸುಮಲತಾ ಎಲ್ಲಿ ಮಲಗಿದ್ದರು?: ಮಂಡ್ಯ ನಗರಸಭೆ ಅಧ್ಯಕ್ಷ ಎಚ್ ಎಸ್ ಮಂಜು ಪ್ರಶ್ನೆ