ಬಳ್ಳಾರಿಯಲ್ಲಿ ತಲೆ ಎತ್ತಲಿದೆ ಮೈನಿಂಗ್ ಕಾಲೇಜು; ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸಕಲ ಸಿದ್ಧತೆ
ಸರ್ಕಾರದಿಂದಲೂ ಜಾಗ ಮೀಸಲಿರುವಂತೆ ಈಗಾಗಲೇ ವಿಎಸ್ಕೆ ವಿವಿಗೆ ಪತ್ರ ಬಂದಿದ್ದು, ವಿವಿ ಆಡಳಿತ ಮಂಡಳಿಯೂ ಸ್ಕೂಲ್ ಆಫ್ ಮೈನಿಂಗ್ ಕಾಲೇಜು ಆರಂಭಕ್ಕೆ ತೀವ್ರ ಉತ್ಸುಕವಾಗಿದೆ. ಈಗಾಗಲೇ ಸಿಂಡಿಕೇಟ್ ಸಭೆಯಲ್ಲಿ ಕಾಲೇಜು ಆರಂಭಕ್ಕೆ ಜಾಗ ಮೀಸಲಿಡುವುದಕ್ಕೆ ಸಂಬಂಧಿಸಿದಂತೆ ಚರ್ಚೆ ಕೂಡ ನಡೆದಿದೆ ಎಂದು ವಿಎಸ್ಕೆ ವಿವಿ ಕುಲಪತಿ ಪ್ರೊ.ಸಿದ್ದು ಅಲಗೂರು ತಿಳಿಸಿದ್ದಾರೆ.
ಬಳ್ಳಾರಿ: ರಾಜ್ಯದಲ್ಲಿಯೇ ಮೊದಲ ಬಾರಿಗೆ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ “ಸ್ಕೂಲ್ ಆಫ್ ಮೈನಿಂಗ್ ನ್ಯಾಷನಲ್ ಕಾಲೇಜು’ ಆರಂಭವಾಗುವ ಮೂನ್ಸೂಚನೆ ದೊರೆತಿದೆ. ಆ ಮೂಲಕ ದೇಶದಲ್ಲಿಯೇ ಎರಡನೇ ಮೈನಿಂಗ್ (Mining) ಕಾಲೇಜು ಎನ್ನುವ ಹೆಗ್ಗಳಿಕೆಗೆ ಕೂಡ ಇದು ಪಾತ್ರವಾಗಿದ್ದು, ಬಳ್ಳಾರಿಗೆ ಕೀರಿಟ ಪ್ರಾಯವೊಂದು ದೊರೆತಂತಾಗಲಿದೆ. ಗಣಿಗಾರಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಅಧ್ಯಯನ ಮಾಡಲು ಜಾರ್ಖಂಡ್ ರಾಜ್ಯದ ದನಬಾದ್ ವಿಶ್ವವಿದ್ಯಾಲಯದಲ್ಲಿ ಮಾತ್ರ ಸ್ಕೂಲ್ ಆಫ್ ಮೈನಿಂಗ್ ಕಾಲೇಜಿದ್ದು, ಪ್ರಸ್ತುತ 4500ವಿದ್ಯಾಥಿರ್ಗಳು ಅಭ್ಯಯಿಸಿಸುತ್ತಿದ್ದಾರೆ. ಇದನ್ನು ಬಿಟ್ಟರೇ ಎಲ್ಲಿಯೂ ಈ ರೀತಿಯ ಕಾಲೇಜು ಇಲ್ಲ. ಹೀಗಾಗಿ ದೇಶದ ಎರಡನೇ ಕಾಲೇಜಾಗಿ ಬಳ್ಳಾರಿಯಲ್ಲಿ ಆರಂಭವಾಗಲಿದೆ.
ಅವೈಜ್ಞಾನಿಕ ಗಣಿಗಾರಿಕೆ ತಡೆಯುವುದರ ಜತೆಗೆ ಕಲ್ಲು, ಮರಳು, ಉಕ್ಕು, ಚಿನ್ನ ಸೇರಿ ಎಲ್ಲ ರೀತಿಯ ಗಣಿಗಾರಿಕೆಯ ತರಬೇತಿ, ನಿರ್ವಹಣೆ, ಮಾಲೀಕರು ಹಾಗೂ ಕಾಮಿರ್ಕರಿಗೆ ವೈಜ್ಞಾನಿಕ ನಿರ್ವಹಣೆಯ ಕುರಿತು ಕಾಲೇಜಿನಲ್ಲಿ ತರಬೇತಿ ನೀಡಲಾಗುತ್ತದೆ. ಕಳೆದ ವರ್ಷದ ಬಜೆಟ್ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಮೈನಿಂಗ್ ಕಾಲೇಜು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಆದರೆ, ಸ್ಥಳ ನಿಗಧಿ ಮಾಡಿರಲಿಲ್ಲ. ಇದೀಗ ಗಣಿನಾಡಿನಲ್ಲಿ ಆರಂಭಿಸುವುದಾಗಿ ಸ್ವತಃ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ಮುರುಗೇಶ ನಿರಾಣಿ ಅವರೇ ಖಚಿತ ಪಡಿಸಿದ್ದು, ಸಚಿವ ಸಂಪುಟದ ಒಪ್ಪಿಗೆ ಪಡೆಯುವುದಾಗಿ ತಿಳಿಸಿರುವುದರಿಂದ ಮತ್ತೆ ಈ ಆಸೆ ಚಿಗುರೊಡಿದಿದೆ. ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆ ಉತ್ತುಂಗದಲ್ಲಿರುವುದರಿಂದ 54ಎಕರೆ ಪ್ರದೇಶದಲ್ಲಿ ಸ್ಕೂಲ್ ಆಫ್ ಮೈನಿಂಗ್ ನ್ಯಾಷನಲ್ ಕಾಲೇಜು ಆರಂಭವಾಗಲಿದೆ.
ಸರ್ಕಾರದಿಂದಲೂ ಜಾಗ ಮೀಸಲಿರುವಂತೆ ಈಗಾಗಲೇ ವಿಎಸ್ಕೆ ವಿವಿಗೆ ಪತ್ರ ಬಂದಿದ್ದು, ವಿವಿ ಆಡಳಿತ ಮಂಡಳಿಯೂ ಸ್ಕೂಲ್ ಆಫ್ ಮೈನಿಂಗ್ ಕಾಲೇಜು ಆರಂಭಕ್ಕೆ ತೀವ್ರ ಉತ್ಸುಕವಾಗಿದೆ. ಈಗಾಗಲೇ ಸಿಂಡಿಕೇಟ್ ಸಭೆಯಲ್ಲಿ ಕಾಲೇಜು ಆರಂಭಕ್ಕೆ ಜಾಗ ಮೀಸಲಿಡುವುದಕ್ಕೆ ಸಂಬಂಧಿಸಿದಂತೆ ಚರ್ಚೆ ಕೂಡ ನಡೆದಿದೆ ಎಂದು ವಿಎಸ್ಕೆ ವಿವಿ ಕುಲಪತಿ ಪ್ರೊ.ಸಿದ್ದು ಅಲಗೂರು ತಿಳಿಸಿದ್ದಾರೆ.
ವಿವಿ ಪಕ್ಕದಲ್ಲಿ ಕೂಡ ಸರ್ಕಾರಕ್ಕೆ ಸೇರಿದ 70ಎಕರೆ ಭೂಮಿ ಇದ್ದು, ನೂತನ ಕಾಲೇಜಿಗೆ ಕೊಡುವ ಚಿಂತನೆ ಕೂಡ ನಡೆಯುತ್ತಿದೆ. ಜಿಲ್ಲಾ ಖನಿಜ ನಿಧಿಯಡಿ ಬಳಕೆಯಾಗದೇ ಸಾವಿರಾರು ಕೋಟಿ ರೂಪಾಯಿ ಅನುದಾನ ಇರುವುದರಿಂದ ಕಾಲೇಜು ಆರಂಭಕ್ಕೆ ಅನುದಾನದ ಕೊರತೆಯಿಲ್ಲ. ಸ್ಥಳಿಯವಾಗಿರುವ ಡಿಎಂಎಫ್ ಅನುದಾನದಲ್ಲಿ 200ಕೋಟಿ ರೂಪಾಯಿ ಅನುದಾನವನ್ನು ಸ್ಕೂಲ್ ಆಫ್ ಮೈನಿಂಗ್ ಕಾಲೇಜು ಆರಂಭಕ್ಕೆ ಸರ್ಕಾರದ ಮಟ್ಟದಲ್ಲಿ ಮೀಸಲಿಡುವ ಕುರಿತು ಚರ್ಚೆ ಕೂಡ ನಡೆದಿದೆ.
ರಾಜ್ಯದಲ್ಲಿ ಮೊದಲ ಬಾರಿಗೆ ಬಳ್ಳಾರಿಯಲ್ಲಿ ಸ್ಕೂಲ್ ಆಫ್ ಮೈನಿಂಗ್ ನ್ಯಾಷನಲ್ ಕಾಲೇಜ್ ಆರಂಭವಾಗಲಿದೆ.ಈ ಕುರಿತಂತೆ ಸಿದ್ಧತೆ ನಡೆಯುತ್ತಿದೆ. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸ್ಥಳ ಪರಿಶೀಲನೆ ನಡೆಸಿ, ಪ್ರಸಕ್ತ ವರ್ಷದಿಂದಲೇ ಕಾಲೇಜು ಆರಂಭಿಸಲು ಚಿಂತನೆ ನಡೆಸಲಾಗಿದೆ. ಬಳ್ಳಾರಿಗೆ ರಾಷ್ಟ್ರೀಯ ಮಟ್ಟದ ಕಾಲೇಜು ಬರುವುದರಿಂದ ಜಾಗ ಕೊಡಲು ವಿಎಸ್ ಕೆ ವಿವಿ ಸಿದ್ಧವಾಗಿದೆ. ಹೀಗಾಗಿ ವಿಎಸ್ಕೆ ವಿವಿ ಕ್ಯಾಂಪಸ್ನಲ್ಲಿ ಶೀಘ್ರದಲ್ಲಿ ಸ್ಕೂಲ್ ಆಫ್ ಮೈನಿಂಗ್ ಇನ್ಸ್ಟಿಟೂಷನ್ ಆರಂಭವಾಗುವ ಲಕ್ಷಣ ಗೋಚರಿಸಿದೆ. ಬಳ್ಳಾರಿಯಲ್ಲಿ ಸ್ಕೂಲ್ ಆಫ್ ಮೈನಿಂಗ್ ಆರಂಭವಾಗುತ್ತಿರುವುದು ಒಳ್ಳೆಯದು. ಆದರೆ ಸರ್ಕಾರ ಇದಕ್ಕೆ ತೋರಿದ ಉತ್ಸಾಹ ಕೃಷಿ ಕಾಲೇಜಿಗೆ ನೀಡುತ್ತಿಲ್ಲ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸಿರಿಗೇರಿ ಪನ್ನರಾಜ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಅತಿಹೆಚ್ಚು ಅದಿರು ಗಣಿಗಾರಿಕೆ ಇರುವುದು ಬಳ್ಳಾರಿ ಜಿಲ್ಲೆಯಲ್ಲಿ. ಹೀಗಾಗಿ ಈ ಭಾಗದಲ್ಲಿ ಸ್ಕೂಲ್ ಆಫ್ ಮೈನಿಂಗ್ ಆರಂಭವಾಗುವುದರಿಂದ ತುಂಬಾ ಅನುಕೂಲವಾಗಲಿದೆ. ಈ ಮೂಲಕ ವೈಜ್ಷಾನಿಕ ಗಣಿಗಾರಿಕೆಗೆ ಹೆಚ್ಚು ಆದ್ಯತೆ ಸಿಗುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರದಲ್ಲಿಯೇ ಬಳ್ಳಾರಿಯಲ್ಲಿ ಸ್ಕೂಲ್ ಆಫ್ ಮೈನಿಂಗ್ ತಲೆ ಎತ್ತಲಿದೆ.