ಮಂಡ್ಯ: ಬಾಲ್ಯದಿಂದಲೂ ನಟಿ ಸುಮಲತಾ ಅಂಬರೀಶ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಉತ್ತರ ಕರ್ನಾಟಕದ ಯುವತಿಗೆ ಸುಮಲತಾರಂತೆ ತಾನು ಸಹ ಮಂಡ್ಯ ಸೊಸೆಯಾಗಬೇಕು, ಅದ್ರಲ್ಲೂ ಅಂಬರೀಶ್ ಅವರ ಅಭಿಮಾನಿಯನ್ನೇ ಮದುವೆಯಾಗಬೇಕೆಂಬ ಮಹದಾಸೆ ಹೊಂದಿದ್ದಳು. ಸದ್ಯ ಆಕೆಯ ಮಹದಾಸೆಯಂತೆಯೇ ಮಂಡ್ಯದ ಗಂಡನ್ನೇ ವರಿಸಿದ್ದಾಳೆ. ಇನ್ನೂ ವಿಶೇಷ ಎಂದರೆ ದಾಂಪತ್ಯಕ್ಕೆ ಕಾಲಿಟ್ಟ ಆ ನವ ಜೋಡಿಗೆ ರೆಬಲ್ ಲೇಡಿ ಸುಮಲತಾ ಆಶೀರ್ವಾದ ಮಾಡಿದ್ದಾರೆ.
ಹಾವೇರಿ ಜಿಲ್ಲೆ, ರಾಣಿ ಬೆನ್ನೂರು ತಾಲೂಕಿನ ಅಂತರವಳ್ಳಿ ಗ್ರಾಮದ ಲಲಿತಮ್ಮ ಹಾಗೂ ಲೇ. ತಿಪ್ಪಣ್ಣ ಎಂಬ ದಂಪತಿಯ ಹಿರಿಯ ಪುತ್ರಿಯಾದ 21 ವರ್ಷದ ಸವಿತಾ ಪಿಯುಸಿ ವರೆಗೆ ಓದಿದ್ದು, ಈಕೆಗೆ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಎಂದರೆ ಸಿಕ್ಕಾಪಟ್ಟೆ ಇಷ್ಟ. ಸುಮಲತಾ ನಟನೆಯ ಎಲ್ಲಾ ಸಿನಿಮಾಗಳನ್ನ ನೋಡಿರುವ ಸವಿತಾ ಸುಮಲತಾ ಅವರನ್ನ ಅಮ್ಮ ಎಂದೇ ಕರೆಯುತ್ತಾರೆ.
ಚಿಕ್ಕ ವಯಸ್ಸಿನಿಂದಲೂ ಸುಮಲತಾ ಅಂಬರೀಶ್ ಬಗೆಗೆ ವಿಶೇಷ ಅಭಿಮಾನ ಹೊಂದಿದ್ದ ಸವಿತಾ ಅವರಂತೆ ತಾನೂ ಕೂಡ ಮಂಡ್ಯದ ಸೊಸೆಯಾಗಬೇಕು ಎಂಬ ಕನಸು ಕಂಡಿದ್ದರು. ಸವಿತಾಳ ತಂದೆ ತಿಪ್ಪಣ್ಣ 10 ವರ್ಷಗಳ ಹಿಂದೆಯೇ ತೀರಿಕೊಂಡಿದ್ದು, ತಾಯಿ ಲಲಿತಮ್ಮ ಕ್ಯಾಂಟೀನ್ ಇಟ್ಟುಕೊಂಡು ಇಬ್ಬರು ಹೆಣ್ಣು ಮಕ್ಕಳನ್ನು ಸಾಕಿದ್ದಾರೆ. ಸವಿತಾ ಪಿಯುಸಿವರೆಗೂ ಓದಿ ಬಳಿಕ ಕ್ಯಾಂಟೀನ್ನಲ್ಲಿ ತಾಯಿಗೆ ಸಹಾಯ ಮಾಡಿಕೊಂಡಿದ್ದರು. ಹೀಗಿರುವಾಗಲೇ ಅವರು ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಫೇಸ್ಬುಕ್ ಪೇಜ್ನಲ್ಲಿ ಆಕ್ಟೀವ್ ಆಗಿದ್ದರು.
ಆ ವೇಳೆಗೆ ಅದೇ ಫೇಸ್ಬುಕ್ನಲ್ಲಿ ಫ್ರೆಂಡ್ ಆಗಿದ್ದ ಅಂಬಿ ಅಭಿಮಾನಿ ಶ್ರೀನಿವಾಸ್ ಜೊತೆ ತನ್ನ ಕನಸು ಹಂಚಿಕೊಂಡಿದ್ದು ತಾನು ಮಂಡ್ಯ ಸೊಸೆಯಾಗಿ ಬರಬೇಕೆಂಬ ಬಗೆಗೆ ಹೇಳಿಕೊಂಡಿದ್ದರು. ಇಬ್ಬರು ಒಂದೇ ಜಾತಿಯಾಗಿದ್ದರಿಂದ ಎರಡು ಕುಟುಂಬಗಳೂ ಒಪ್ಪಿ ಇಬ್ಬರಿಗೂ ಮದುವೆ ಮಾಡಲು ನಿರ್ಧರಿಸಿತ್ತು. ಅದರಂತೆ ಮಂಡ್ಯ ಮದ್ದೂರು ತಾಲೂಕಿನ ಹೊಸಕೆರೆ ಗ್ರಾಮದ ಹೊರವಲಯದಲ್ಲಿನ ಬೀರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸರಳ ವಿವಾಹವಾಗುವ ಮೂಲಕ ದಾಂಪತ್ಯಕ್ಕೆ ಕಾಲಿಟ್ಟರು.
ಮದುವೆಗೆ ಸಂಸದೆ ಸುಮಲತಾ ಅಂಬರೀಶ್ ಭಾಗವಹಿಸಬೇಕಿತ್ತಾದರೂ ಅವರ ಕೆಲಸದ ಒತ್ತಡ ನಡುವೆ ತಡವಾಗಿ ಭೇಟಿ ನೀಡಿ ನವ ಜೋಡಿಗೆ ಶುಭ ಹಾರೈಸಿದರು. ಈ ವೇಳೆ ಸುಮಲತಾ ಮಂಡ್ಯ ಸೊಸೆಯಾಗಿರುವ ಸವಿತಾಗೆ ಮಂಡ್ಯದ ಸೇವೆ ಮಾಡುವ ಅವಕಾಶ ಬರಲಿ ಎಂದು ಆಶೀರ್ವದಿಸಿದರು.
ಒಟ್ಟಾರೆ ಸವಿತಾ ತನ್ನ ಕನಸ್ಸಿನಂತೆಯೇ ಮಂಡ್ಯ ಸೊಸೆಯಾಗಿದ್ದು, ಸಿನಿ ರಂಗದ ಯಶಸ್ವಿ ಜೋಡಿಯಾಗಿ ಉತ್ತುಂಗಕ್ಕೆ ಬೆಳೆದ ಅಂಬರೀಶ್ ಹಾಗೂ ಸುಮಲತಾ ಅವರಂತೆ ಈ ನವ ಜೋಡಿಯ ಬಾಳು ಬೆಳಗಲಿ ಎಂಬುದೇ ನಮ್ಮ ಆಶಯ.
ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಸಂಸದರ ವ್ಯಾಪ್ತಿ ಮೀರಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ- ಸಂಸದೆ ಸುಮಲತಾ