ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದರೂ ಬುಟ್ಟಿ ಹೆಣೆಯುವ ಕಾಯಕ ಬಿಡದ ಬೀದರ್ ಮೂಲದ ವ್ಯಕ್ತಿ!
ಕಡು ಬಡತನದಲ್ಲಿ ಹುಟ್ಟಿರುವ ರಾಮು ಇಂದಿಗೂ ಕೂಡ ಬಡತನ ಮನೆಯಲ್ಲಿ ತಾಂಡವಾಡುತ್ತಿದೆ. ಹೀಗಾಗಿ ರಾಮು ಕೊರವರ್ನ ಇಡೀ ಕುಟುಂಬ ಇಂದಿಗೂ ಕೂಡ ಬುಟ್ಟಿ ಹೆಣಿಯುವ ಕಾಯಕದಿಂದಲೇ ತಮ್ಮ ಕುಟುಂಬ ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದಾರೆ.
ಬೀದರ್: ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಗ್ರಾಮಸ್ಥರ ಬೇಕು ಬೇಡಗಳಿಗೆ ಸ್ಪಂದಿಸಿದ ವ್ಯಕ್ತಿಯೊಬ್ಬರು, ರಾಜಕಾರಣ ಶಾಶ್ವತವಲ್ಲ ಎನ್ನುವುದನ್ನು ಅರಿತಿದ್ದು, ವಂಶಪಾರಂಪರ್ಯವಾಗಿ ಬಂದಿರುವ ಕಾಯಕವನ್ನ ಮಾತ್ರ ಬಿಟ್ಟಿಲ್ಲ. ಇಂದಿಗೂ ಬುಟ್ಟಿ ಹೆಣೆದು ದಿನಕ್ಕೆ 100ರಿಂದ200 ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಆ ಮೂಲಕ ಬುಟ್ಟಿ ಹೆಣೆಯುವುದನ್ನೇ ನಿತ್ಯ ಕಾಯಕ ಮಾಡಿಕೊಂಡಿರುವ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮದ ಮಾಜೀ ಗ್ರಾಮ ಪಂಚಾಯತಿ ಅಧ್ಯಕ್ಷ ರಾಮು ಕೊರವರ್ ಇತರರಿಗೆ ಮಾದರಿಯಾಗಿದ್ದಾರೆ.
ಇಂದಿನ ಯುಗದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಅಥವಾ ಗ್ರಾಮ ಪಂಚಾಯತಿ ಅಧ್ಯಕ್ಷ ಆಗಿಬಿಟ್ಟರೇ ಸಾಕು ಅವರ ಕಾಲು ನೆಲದ ಮೇಲೆ ನಿಲ್ಲುವುದಿಲ್ಲ. ಆದರೆ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮದ ರಾಮು ಕೊರವರ್ ಭಿನ್ನವಾಗಿದ್ದು, ಚಳಕಾಪುರ ಗ್ರಾಮದಲ್ಲಿ ಮೂರು ಬಾರಿ ಗ್ರಾಮ ಪಂಚಾಯತಿ ಸದಸ್ಯರಾಗಿ ಒಂದು ಬಾರಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿಯೂ ಆಯ್ಕೆಯಾಗುವ ಮೂಲಕ ಜನಮೆಚ್ಚುವ ಕೆಲಸ ಮಾಡಿ ಜನರಿಂದ ಸೈ ಎನಿಸಿಕೊಂಡಿದ್ದಾರೆ.
ಆದರೆ ಈ ಬಾರಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸದೆ ರಾಜಕೀಯ ನಿವೃತ್ತಿ ತೆಗೆದುಕೊಂಡಿರುವ ರಾಮು ಕೊರವರ್ ಪಂಚಾಯತಿ ಸದಸ್ಯ ಮತ್ತು ಅಧ್ಯಕ್ಷರಾಗಿದ್ದರೂ ಅವರ ಮೂಲ ವೃತ್ತಿ ಬುಟ್ಟಿ ಹೆಣೆಯುವ ಕಾಯಕವನ್ನ ಮಾತ್ರ ಬಿಟ್ಟಿಲ್ಲ. ಇಂದಿಗೂ ಕೂಡ ಈ ಕಾಯಕವನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಪ್ರತಿ ದಿನ ಏನಿಲ್ಲವೆಂದರೂ ನಾಲ್ಕೈದು ಬುಟ್ಟಿಯನ್ನ ಹೆಣಿಯದಿದ್ದರೇ ಇವರ ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ.
ಈ ಬಾರಿಯ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧೆ ಮಾಡದೆ ಹೋದರೂ ಹತ್ತಾರು ವರ್ಷಗಳಿಂದ ಜನರ ಸಮಸ್ಯೆ ಆಲಿಸುವುದು ಇವರಿಗೆ ರೂಢಿಯಾಗಿದೆ. ಹೀಗಾಗಿ ಪ್ರತಿ ದಿನ ಊರನ್ನ ಒಂದು ಸುತ್ತು ಹಾಕಿ ಜನರ ಸಮಸ್ಯೆ ಆಲಿಸಿ ಅವರ ಜೊತೆಗೆ ಕುಳಿತುಕೊಂಡು ನಂತರ ಮತ್ತೆ ಅವರ ಮೂಲ ವೃತ್ತಿಯಾದ ಬುಟ್ಟಿ ನೇಯುವ ಕೆಲಸದಲ್ಲಿ ನಿರತರಾಗುತ್ತಾರೆ. ಸುಮಾರು ನಾಲ್ಕು ದಶಕದಿಂದಲೂ ರಾಮು ಬುಟ್ಟಿ ಹೆಣೆಯುವ ಕಾಯಕದಲ್ಲಿ ನಿರತರಾಗಿದ್ದಾರೆ.
ಕಡು ಬಡತನದಲ್ಲಿ ಹುಟ್ಟಿರುವ ರಾಮು ಮನೆಯಲ್ಲಿ ಇಂದಿಗೂ ಕೂಡ ಬಡತನ ತಾಂಡವಾಡುತ್ತಿದೆ. ಹೀಗಾಗಿ ರಾಮು ಕೊರವೆಯ ಇಡೀ ಕುಟುಂಬ ಇಂದಿಗೂ ಕೂಡ ಬುಟ್ಟಿ ಹೆಣಿಯುವ ಕಾಯಕದಿಂದಲೇ ತಮ್ಮ ಕುಟುಂಬ ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದಾರೆ. ರಾಮು ಕುಟುಂಬದವರು ಬುಟ್ಟಿ ಹೆಣೆಯುತ್ತಿರುವಾಗ ಇವರು ಕೂಡ ಕುಟುಂಬದವರ ಜೊತೆಗೂಡಿ ಬುಟ್ಟಿ ಹೆಣಿಯುತ್ತಾರೆ.
ರಾಮು ತಯಾರಿಸುವ ಒಂದು ಬುಟ್ಟಿಯನ್ನು 30 ರಿಂದ 40 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಕೆಲ ರೈತರು ವರ್ಷಕ್ಕೆ ಇಂತಿಷ್ಟು ಎಂದು ಹೊಲದಲ್ಲಿ ಬೆಳೆದ ವಸ್ತುಗಳನ್ನ ಕೊಟ್ಟು ಇವರ ಬಳಿ ಬುಟ್ಟಿಯನ್ನ ತೆಗೆದುಕೊಂಡು ಹೋಗುತ್ತಾರೆ. ಇವರು ಹೆಣೆದ ಬುಟ್ಟಿಯನ್ನ ಬೀದರ್ ಜಿಲ್ಲೆ ಗ್ರಾಮ ಗ್ರಾಮಗಳಿಗೆ ಹೋಗಿ ಮಾರಾಟ ಮಾಡಿಕೊಂಡು ಬರುತ್ತಾರೆ. ಪ್ಲಾಸ್ಟಿಕ್, ಫೈಬರ್, ಲೋಹದ ಬುಟ್ಟಿಯ ಭರಾಟೆಯ ನಡುವೆಯೂ ರಾಮು ಕೊರವೇ ಕಡಿಮೆ ಆದಾಯ ಬಂದರೂ ಜಿಂತೆಯಿಲ್ಲ ಎಂದು ಮೂಲ ವೃತ್ತಿಗೆ ಅಂತ್ಯ ಹೇಳದೇ ಇದೇ ಕೆಲಸದಲ್ಲಿ ಮುಂದುವರೆದಿದ್ದಾರೆ.
ಒಟ್ಟಾರೆ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಮು ಪರಂಪರಾಗತವಾಗಿ ಬಂದಿರುವ ಕಾಯಕವನ್ನ ಮುಂದುವರೆಸಿಕೊಂಡು ಹೋಗುತ್ತಿದ್ದು, ತಮ್ಮ ಮಕ್ಕಳಿಗೂ ಬುಟ್ಟಿ ಹೆಣೆಯುವುದನ್ನ ಹೇಳಿಕೊಟ್ಟು ತಾವೂ ಬುಟ್ಟಿ ಹೆಣೆಯುತ್ತಿದ್ದಾರೆ.
ಇದನ್ನೂ ಓದಿ: ಬುಟ್ಟಿ ನೇಯ್ದು ಬದುಕು ಸಾಗಿಸುತ್ತಿದ್ದ ಕೊರವ ಸಮುದಾಯದ ಹಾಡು-ಪಾಡು