ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದಾಗಿ ಕರ್ನಾಟಕದ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಒಂದೆಡೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಚಿತಾಗಾರಗಳ ಮುಂದೆ ಸಾಲು ಸಾಲು ಮೃತದೇಹಗಳು ಕಾಣುವ ದೃಶ್ಯವೂ ಸರ್ವೇಸಾಮಾನ್ಯವಾಗಿದ್ದು, ಅಂತ್ಯಸಂಸ್ಕಾರಕ್ಕೂ ಪರದಾಡಬೇಕಾದ ದುಸ್ಥಿತಿ ಎದುರಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಶವ ಸಂಸ್ಕಾರ ಮಾಡಲಾಗುತ್ತಿರುವ ಕಾರಣ ಸುದ್ದಿಯಲ್ಲಿರುವ ಸುಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಇದೀಗ ವಾರದ ಮಟ್ಟಿಗೆ ಅಂತ್ಯ ಸಂಸ್ಕಾರ ಕ್ರಿಯೆ ಸ್ಥಗಿತಗೊಳ್ಳುತ್ತಿದೆ.
ಇಂದಿನಿಂದ ಸುಮನಹಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ಸ್ಥಗಿತಗೊಳ್ಳುತ್ತಿದ್ದು, ತುರ್ತು ನಿರ್ವಹಣಾ ಕೆಲಸ ಹಿನ್ನೆಲೆ 7 ದಿನಗಳ ಕಾಲ ಅಂತ್ಯಕ್ರಿಯೆ ನಡೆಯುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ. ಫರ್ನೇಸ್ಗಳನ್ನು ಬದಲಾಯಿಸುವ ಸಲುವಾಗಿ ಮೇ 4ರಿಂದ ಮೇ 10ರವರೆಗೆ ಅಂತ್ಯಕ್ರಿಯೆ ತಾತ್ಕಾಲಿಕ ಸ್ಥಗಿತಗೊಳ್ಳಲಿದೆ.
ರೈಲ್ವೇ ನಿಲ್ದಾಣದಲ್ಲಿ ಜನಸಾಗರ, ಎಚ್ಚೆತ್ತುಕೊಳ್ಳದ ಸರ್ಕಾರ
ರಾಜ್ಯದಲ್ಲಿ ಕೊರೊನಾ ಸೋಂಕು ಹಬ್ಬುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್ಡೌನ್ ಮಾದರಿಯ ಕರ್ಫ್ಯೂ ವಿಧಿಸಿದೆ. ಆದರೆ, ಕಳೆದ ಬಾರಿಯ ಲಾಕ್ಡೌನ್ ರೀತಿಯಲ್ಲಿ ಅತಿಯಾದ ಕಠಿಣ ನಿಯಮಗಳು ಜಾರಿಯಲ್ಲಿಲ್ಲವಾದ್ದರಿಂದ ಜನರು ಓಡಾಡುವುದನ್ನು ನಿಲ್ಲಿಸಿಲ್ಲ. ಅದರಲ್ಲೂ ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ಹೋಗುವ ಪ್ರಯಾಣಿಕರು ಗುಂಪುಗುಂಪಾಗಿ ಜಮಾಯಿಸಿದ್ದು, ಕೊವಿಡ್ ನಿಯಮಾವಳಿಗಳನ್ನು ಸಂಪೂರ್ಣ ಗಾಳಿಗೆ ತೂರಲಾಗಿದೆ.
ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣಕ್ಕೆ ಗುಂಪು ಗುಂಪಾಗಿ ಆಗಮಿಸುತ್ತಿರುವ ಪ್ರಯಾಣಿಕರು ಕೊರೊನಾ ಬಗ್ಗೆ ಅತಿಯಾದ ನಿರ್ಲಕ್ಷ್ಯ ತೋರುತ್ತಿರುವುದು ಆತಂಕ ಮೂಡಿಸುತ್ತಿದೆ. ಕಠಿಣ ನಿಯಮಗಳನ್ನು ಜಾರಿಗೆ ತರುವುದಕ್ಕೇ ಮೀನಾಮೇಷ ಎಣಿಸಿದ ಸರ್ಕಾರ ಈಗ ಜನರು ನಿಯಮ ಉಲ್ಲಂಘನೆ ಮಾಡುತ್ತಿರುವಾಗಲೂ ಎಚ್ಚೆತ್ತುಕೊಳ್ಳದಿದ್ದರೆ ಈಗ ತಲೆದೋರಿರುವ ಸಂಕಷ್ಟ ಇನ್ನಷ್ಟು ಉಲ್ಬಣಿಸುವುದರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ:
ಸುಮನಹಳ್ಳಿ ಚಿತಾಗಾರದಲ್ಲಿ ಸಾಲು ಸಾಲು ಶವ | ಕರ್ಫ್ಯೂ ನಡುವೆಯೂ ಕೊರೊನಾ ರಣಕೇಕೆ
ಅಂತ್ಯಸಂಸ್ಕಾರಕ್ಕೆ ಉಚಿತ ಚಿತಾಗಾರ; ಕೊರೊನಾ ಸಂಕಷ್ಟಕ್ಕೆ ಮಿಡಿದ ದೇವಾಂಗ ಮಂಡಳಿ