ಬೀದರ್: ಅಂಗನವಾಡಿ ಕೇಂದ್ರಗಳಲ್ಲಿ ಕನಿಷ್ಠ ಸೌಲಭ್ಯಗಳಿಲ್ಲ ಎನ್ನುವ ಆರೋಪ ಸಾಮಾನ್ಯ. ಇದಕ್ಕೆ ಜಿಲ್ಲೆಯ ಔರಾದ್ ತಾಲೂಕಿನ ಜಿರ್ಗಾ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ಮಾತ್ರ ಅಪವಾದ. ಖಾಸಗಿ ನರ್ಸರಿಗಳನ್ನ ಮೀರಿಸುವಂತೆ ಇಲ್ಲಿನ ಅಂಗನವಾಡಿಯಲ್ಲಿ ಎಲ್ಲಾ ಸೌಲಭ್ಯಗಳಿವೆ. ಏಣಿ, ಜೋಕಾಲಿ, ಜಾರು ಗುಪ್ಪೆ, ಆಟಿಕೆ ವಸ್ತುಗಳು ಇಲ್ಲಿದ್ದು ಖಾಸಗಿ ಶಾಲೆಗೆ ಭೇಟಿ ನೀಡಿದ ಅನುಭವಾಗುತ್ತದೆ. ಗ್ರಾಮದ ಜನರ ಸಹಕಾರ, ಪಿಡಿಓ ಕಾಳಜಿಯಿಂದ ಹೈಟೆಕ್ ಅಂಗನವಾಡಿ ಕೇಂದ್ರ ನಿರ್ಮಾಣವಾಗಿದ್ದು, ಅಂಗನವಾಡಿ ಅಂದರೆ ಹೀಗಿರಬೇಕಪ್ಪಾ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಸರ್ಕಾರಿ ಅಂಗನವಾಡಿ ಕೇಂದ್ರ ಎಂದರೆ ಬಡ ಮಕ್ಕಳು ಇರುವ ತಾಣ ಎಂಬ ಅನಿಸಿಕೆ ಸಾಮಾನ್ಯ. ಆದರೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಜಿರ್ಗಾ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ಇದಕ್ಕೆ ಅಪವಾದವಾಗಿದೆ. ಅಂಗನವಾಡಿ ಕೇಂದ್ರದ ಆವರಣಕ್ಕೆ ಕಾಲಿಟ್ಟರೆ ಖಾಸಗಿ ಶಾಲೆಗೆ ಭೇಟಿ ನೀಡಿದ ಅನುಭವಾಗುತ್ತದೆ. ಇಲ್ಲಿಗೆ ಭೇಟಿ ನೀಡಿದರೆ ರಾಜ-ರಾಣಿಯರು, ಪಕ್ಷಿ- ಪ್ರಾಣಿಗಳು, ಗೊಂಬೆಗಳ ಚಿತ್ರಗಳನ್ನು ಅಂಗನವಾಡಿ ಕೇಂದ್ರದ ಗೋಡೆಗಳ ಮೇಲೆ ಬಿಡಿಸಲಾಗಿದ್ದು, ಇದು ಮಕ್ಕಳಿಗೆ ಆರ್ಕಷಣೆ ಮಾಡುತ್ತಿದೆ. ಕೇಂದ್ರದ ಹೊರಗೆ ಇರುವ ಏಣಿ, ಜೋಕಾಲಿ, ಜಾರು ಗುಪ್ಪೆ ಏರಿ ಮಕ್ಕಳು ಆಟವಾಡುವ ದೃಶ್ಯ ಕಣ್ಣಿಗೆ ಬೀಳುತ್ತದೆ. ಈ ಅಂಗನವಾಡಿ ಕೇಂದ್ರದ ಒಳಗಿರುವ, ಮಕ್ಕಳ ವಯೋ ಸಹಜ ಪ್ರವೃತ್ತಿಗೆ ಪೂರಕವಾದ ಚಾರ್ಟ್ಗಳು ಗಮನ ಸೆಳೆಯುತ್ತದೆ. ಕೋಲಾಟ, ಗೀತೆಗಳನ್ನೂ ಹೇಳಿಕೊಡಲಾಗುತ್ತದೆ. ತಾಯಿಯ ಹಂಬಲದಿಂದ ಇನ್ನೂ ಸಂಪೂರ್ಣ ಬಿಡುಗಡೆ ಪಡೆಯದ ಹಾಲುಗಲ್ಲದ ಮಕ್ಕಳು ಆಕರ್ಷಕ ಸಮವಸ್ತ್ರ ತೊಟ್ಟು ಕುರ್ಚಿಯಲ್ಲಿ ಆರಾಮವಾಗಿ ಕುಳಿತು ಇಲ್ಲಿ ಅಕ್ಷರ ಕಲಿಯುತ್ತವೆ. ಮನೆಯ ವಾತಾವರಣ ಇರುವುದರಿಂದ ಅಂಗನವಾಡಿ ಕೇಂದ್ರಕ್ಕೆ ದಾಖಲಾಗಿರುವ ಪ್ರತಿ ಮಗು ಅಂಗನವಾಡಿಗೆ ಬರುತ್ತದೆ. ಈ ಕೇಂದ್ರದಲ್ಲಿ 45 ಮಕ್ಕಳಿದ್ದು, ಪ್ರತಿ ಮಗುವಿಗೂ ಕೂರಲು ಕುರ್ಚಿ ಇರುವುದು ಇನ್ನೊಂದು ವಿಶೇಷ.
ಹೈಟೆಕ್ ಮಾದರಿ
ಧುಪತಮಹಾಗಾಂವ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಈ ಅಂಗನವಾಡಿ ಕೇಂದ್ರ ಜಿಲ್ಲೆಯಲ್ಲಿಯೇ ಮಾದರಿ ಅಂಗನವಾಡಿ ಕೇಂದ್ರವಾಗಿದ್ದು, ಇಲ್ಲಿನ ಪಿಡಿಓ, ಗ್ರಾಮ ಪಂಚಾಯತಿ ಸದಸ್ಯರು ಗ್ರಾಮಸ್ಥರ ಆಸಕ್ತಿಯ ಫಲವಾಗಿ ಹೈಟೆಕ್ ಮಾದರಿಯ ಅಂಗನವಾಡಿ ಕೇಂದ್ರ ನಿರ್ಮಾಣವಾಗಲು ಸಾಧ್ಯವಾಗಿದೆ ಎಂದು ಪಿಡಿಓ ಹೇಳುತ್ತಿದ್ದಾರೆ.
ಅಂಗನವಾಡಿ ಕೇಂದ್ರಕ್ಕೆ ಸೂಪರ್ ಅಂಗನವಾಡಿ ಕೇಂದ್ರ ಅಂತಾ ಹೆಸರಿಡಲಾಗಿದೆ. ಹೆಸರಿಗೆ ತಕ್ಕಂತೆ ಅಂಗನವಾಡಿ ಕೇಂದ್ರವಿದ್ದು, ಸಂಪೂರ್ಣ ಸೋಲಾರ್ ಮಯವಾಗಿದೆ. ಫ್ಯಾನ್, ಲೈಟ್ಗಳು ಎಲ್ಲವೂ ಕೂಡಾ ಸೋಲಾರ್ನಿಂದಲೇ ಬೆಳಗುತ್ತವೆ. ಗ್ರಾಮೀಣ ಭಾಗದ ಮಕ್ಕಳಿಗೆ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಅಂಗನವಾಡಿ ಕೇಂದ್ರದಲ್ಲಿಯೇ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಇದರಿಂದ ಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ಶೌಚಾಲಯ ಬಳಸುವುದು, ಕೈ ಶುಚಿ ಮಾಡಿಕೊಳ್ಳುವುದನ್ನು ಮಕ್ಕಳಿಗೆ ತಿಳಿಸಿಕೊಡುವ ಉದ್ದೇಶ ಇದಾಗಿದೆ.
ಮಕ್ಕಳಿಗೆ ಚಿತ್ರಗಳ ಮೂಲಕ ಕಲಿಕೆಗೆ ಅವಕಾಶವನ್ನು ಇಲ್ಲಿ ಮಾಡಲಾಗಿದೆ. ಮಕ್ಕಳು ಕಲಿಯುವ ಸ್ಥಳ ಸ್ವಚ್ಚವಾಗಿರಬೇಕು, ಅವರು ಕೋಣೆ ಸ್ವಚ್ಚವಾಗಿರಬೇಕು ಎನ್ನುವ ಉದ್ದೇಶದಿಂದ ಉತ್ತಮವಾದ ಅಂಗನವಾಡಿ ಕೇಂದ್ರವನ್ನು ರೆಡಿ ಮಾಡಲಾಗಿದೆ. ಇಡೀ ಗೋಡೆಗಳ ಮೇಲೆ ಇರುವ ಚಿತ್ರಗಳು ಅಂಗನವಾಡಿಗೆ ಬರಲು ಮಕ್ಕಳಿಗೆ ಪ್ರೇರಣೆ ಕೂಡಾ ಮಾಡುತ್ತಿದೆ. ಪ್ರತಿ ದಿನ ಮಕ್ಕಳಿಗೆ ರುಚಿ ಹಾಗೂ ಶುಚಿಯಾದ ಆಹಾರ ನೀಡುತ್ತೇವೆ. ಫಿಲ್ಟರ್ನಿಂದ ಶುದ್ಧ ಕುಡಿವ ನೀರು, ನಿಯಮಿತ ವೇಳೆಯಲ್ಲಿ ಹಾಲು, ಆಹಾರ ವಿತರಿಸಲಾಗುತ್ತಿದೆ. ಕಲಿಕೆಗೆ ಮಗುವನ್ನು ಮಾನಸಿಕವಾಗಿ ಸಜ್ಜುಗೊಳಿಸುವುದು ಈ ಅಂಗನವಾಡಿ ಕೇಂದ್ರದ ಉದ್ದೇಶವಾಗಿದೆ. ಅಕ್ಷರ ಕಲಿಸುವ ಜೊತೆಗೆ ಮಣ್ಣಿನಲ್ಲಿ ಆಟಿಕೆ ತಯಾರಿಸುವುದು, ಚಿತ್ರ ಬರೆಯುವುದು, ಬಣ್ಣ ಹಚ್ಚುವುದು, ಹಾಡು ಮತ್ತು ನೃತ್ಯ ಕಲಿಸುವುದು ಇತರ ಚಟುವಟಿಕೆಗಳನ್ನು ಹೇಳಿಕೊಡಲಾಗುತ್ತಿದೆ. ಈ ಮೊದಲು ಕೇಂದ್ರಕ್ಕೆ ತೆರಳಲು ಹಿಂಜರಿಯುತ್ತಿದ್ದ ಮಕ್ಕಳು, ಇದೀಗ ಅವಧಿಗೂ ಮುನ್ನವೇ ಕೇಂದ್ರದಲ್ಲಿ ಹಾಜರಾಗುತ್ತಾರೆ. ಮಧ್ಯಾಹ್ನ ಮನೆಗೆ ತೆರಳುವುದಾಗಿ ಪೀಡಿಸುತ್ತಿದ್ದ ಚಿಣ್ಣರು ಕೇಂದ್ರದ ಬಾಗಿಲು ಮುಚ್ಚುವವರೆಗೂ ಅಲ್ಲಿಯೇ ಉಳಿಯುತ್ತಾರೆ. ಎಲ್ಕೆಜಿ, ಯುಕೆಜಿಗಾಗಿ ಪಟ್ಟಣಕ್ಕೆ ಅಲೆದಾಡುತ್ತಿದ್ದ ಗ್ರಾಮದ ಮಕ್ಕಳ ಸಂಖ್ಯೆಯೂ ತಗ್ಗಿದೆ. ಇಲ್ಲಿಂದ ನೇರವಾಗಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ದಾಖಲಾತಿ ಪಡೆಯುವುದು ಸಾಮಾನ್ಯವಾಗಿದ್ದು, ಇದೆಕ್ಕೆಲ್ಲ ಕಾರಣ ಗ್ರಾಮಸ್ಥರು ಪಿಡಿಓ ಅವರ ಶ್ರಮ ಇಲ್ಲಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ ಎನ್ನುತ್ತಾರೆ.
2.50 ಲಕ್ಷ ರೂಪಾಯಿ ವೆಚ್ಚ
ಅಂಗನವಾಡಿ ಕೇಂದ್ರಕ್ಕೆ ಮಕ್ಕಳು ಬರುವುದಕ್ಕೆ ಹಿಂಜರಿಯುತ್ತಿದ್ದ ಮಕ್ಕಳೀಗ ನಾ ಮುಂದು ತಾ ಮುಂದು ಅಂತಾ ಅಂಗನವಾಡಿ ಕೇಂದ್ರಕ್ಕೆ ಓಡೋಡಿ ಬರುತ್ತಿದ್ದಾರೆ. 2.50 ಲಕ್ಷ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಮಾದರಿಯ ಅಂಗನವಾಡಿ ಕೇಂದ್ರ ನಿರ್ಮಾಣವಾಗಿದ್ದು, ವರ್ಷಕ್ಕೆ ಸಾವಿರಾರು ರೂಪಾಯಿ ಹಣ ಕೊಟ್ಟು ನರ್ಸರಿಗಳಿಗೆ ಹೋಗುತ್ತಿದ್ದ ಮಕ್ಕಳೀಗ ಅಂನವಾಡಿ ಕೇಂದ್ರದತ್ತ ಮುಖ ಮಾಡುತ್ತಿದ್ದಾರೆ.
ಇದನ್ನೂ ಓದಿ
BBK8: ಬಿಗ್ ಬಾಸ್ ಮನೆಯಲ್ಲಿ ರಹಸ್ಯವಾಗಿ ಸಿಗುವ ಸೌಲಭ್ಯಗಳೇನು? ಮಾತಿನ ಮಧ್ಯೆ ಸತ್ಯ ಬಾಯಿಬಿಟ್ಟ ರಘು!