ಎಫ್​ಡಿಎ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ: ಆರ್​ಡಿ ಪಾಟೀಲ್‌ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

| Updated By: Ganapathi Sharma

Updated on: Jan 09, 2025 | 2:14 PM

ಕರ್ನಾಟಕದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದ್ದ ಎಫ್​ಡಿಎ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್​ಪಿನ್ ರುದ್ರಗೌಡ ಪಾಟೀಲ್ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಬಿಆರ್ ಗವಾಯಿ ನೇತೃತ್ವದ ದ್ವಿಸದಸ್ಯ ಪೀಠ ತಿರಸ್ಕರಿಸಿದೆ.

ಎಫ್​ಡಿಎ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ: ಆರ್​ಡಿ ಪಾಟೀಲ್‌ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್
ಆರ್​ಡಿ ಪಾಟೀಲ್‌ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್
Follow us on

ನವದೆಹಲಿ, ಜನವರಿ 9: ಎಫ್​ಡಿಎ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಪ್ರಕರಣದ ಕಿಂಗ್​ಪಿನ್ ಆರ್‌ಡಿ ಪಾಟೀಲ್‌ಗೆ (ರುದ್ರಗೌಡ ಪಾಟೀಲ್) ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿದೆ. ಜಾಮೀನು ನಿರಾಕರಿಸಿ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಆರ್‌ಡಿ ಪಾಟೀಲ್‌ ಸುಪ್ರೀಂ ಕೋರ್ಟ್ ಮೊರೆಹೋಗಿದ್ದ. ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಬಿಆರ್ ಗವಾಯಿ ನೇತೃತ್ವದ ದ್ವಿಸದಸ್ಯ ಪೀಠ ಜಾಮೀನು ನಿರಾಕರಿಸಿ ಆದೇಶ ಪ್ರಕಟಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ್ದ ಎಫ್​ಡಿಎ (ಎಫ್​ಡಿಎ) ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು.

ಏನಿದು ಎಫ್​ಡಿಎ ನೇಮಕಾತಿ ಪರೀಕ್ಷೆ ಅಕ್ರಮ?

ಕರ್ನಾಟಕದಾದ್ಯಂತ 2023 ರ ಅಕ್ಟೋಬರ್​​​ 28 ರಂದು ಕೆಪಿಎಸ್​ಸಿಯ ವಿವಿಧ ಇಲಾಖೆಗಳ ಪರೀಕ್ಷೆ ನಡೆದಿತ್ತು. ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಎಫಡಿಎ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಬ್ಲೂಟೂತ್ ಬಳಸಿ ನಕಲು ಮಾಡಲು ಯತ್ನಿಸಿದಾಗ ಸಿಕ್ಕಿಬಿದ್ದಿರು. ಈ ಸಂಬಂಧ ಅಫಜಲಪುರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ಕೂಡ ದಾಖಲಾಗಿತ್ತು. ವಿಚಾರಣೆ ನಡೆಸಿದ ಪೊಲೀಸರು, ಹಲವರನ್ನು ಬಂಧಿಸಿದ್ದರು.

ಅಕ್ರಮದ ವಿಚಾರಣೆ ವೇಳೆ, ಪ್ರಕರಣದ ಕಿಂಗ್​ಪಿನ್ ಆರ್​ಡಿ ಪಾಟೀಲ್ ಹೆಸರು ಹೊರಬಿದ್ದಿತ್ತು. ನಂತರ ಆತನನ್ನು ಬಂಧಿಸಲಾಗಿತ್ತು. ಬಳಿಕ ಪ್ರಕರಣದ ತನಿಖೆಯ ಹೊಣೆಯನ್ನು ಕರ್ನಾಟಕ ಸರ್ಕಾರ ಸಿಐಡಿಗೆ ವಹಿಸಿತ್ತು.

ಪಿಎಸ್‌ಐ ಪರೀಕ್ಷೆ ಹಗರಣದಲ್ಲಿ ಕೂಡ ಆರ್​​ಡಿ ಪಾಟೀಲ್ ಪ್ರಮುಖ ಆರೋಪಿಯಾಗಿದ್ದಾನೆ. ಈತ ಕಾಲೇಜು ಆಡಳಿತ ಮಂಡಳಿಗಳ ಜತೆ ಕೈಜೋಡಿಸಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಉತ್ತರಗಳನ್ನು ಬ್ಲೂಟೂಥ್ ಡಿವೈಸ್ ಮೂಲಕ ಕಳುಹಿಸುತ್ತಿದ್ದ ಎಂಬ ಮಾಹಿತಿಯೂ ನಂತರದಲ್ಲಿ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್

ಆರ್​​ಡಿ ಪಾಟೀಲ್ ಮನೆಯಲ್ಲಿ ಕೆಲವು ಒಎಂಆರ್​ ಶೀಟ್​ಗಳು, ಕೆಲವು ಅಭ್ಯರ್ಥಿಗಳ ಹಾಲ್​ಟಿಕೆಟ್​ ಸಹ ಪೊಲೀಸರಿಗೆ ಪತ್ತೆಯಾಗಿತ್ತು. ಅವುಗಳು ಎಫ್​​ಡಿಎ, ಎಸ್​ಡಿಎ ಪರೀಕ್ಷೆಗಳಿಗೆ ಸಂಬಂಧಿಸಿದ್ದು ಎಂಬುದೂ ಗೊತ್ತಾಗಿತ್ತು.

ಎಫ್​ಡಿಎ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಪ್ರಕರಣ ಕರ್ನಾಟಕದಾದ್ಯಂತ ತೀವ್ರ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿತ್ತು. ಕಲಬುರಗಿಯಲ್ಲೇ ಅಕ್ರಮ ನಡೆದಿರುವುದನ್ನು ಮುಂದಿಟ್ಟುಕೊಂಡು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದ್ದವು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ