ಬೆಂಗಳೂರಿನ ಸರ್ಕಾರಿ ಶಾಲೆಯಲ್ಲಿ ಸೀಟ್ ಕೊಡಿಸಲು ಸಚಿವರಿಗೆ ಮನವಿ! ಖುಷಿ ವಿಚಾರ ಹಂಚಿಕೊಂಡ ಸುರೇಶ್ ಕುಮಾರ್

| Updated By: shivaprasad.hs

Updated on: Jul 09, 2021 | 1:39 PM

ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದ ನೆಲಗದರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ಸುದ್ದಿಯಲ್ಲಿದೆ. ಈ ಶಾಲೆಯಲ್ಲಿ ತಮ್ಮ ಮಗನಿಗೆ ಪ್ರವೇಶಾತಿ ನೀಡಬೇಕೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪೋಷಕರೊಬ್ಬರಿಂದ ಮನವಿಯೊಂದು ಬಂದಿತ್ತು. ಸಾಮಾನ್ಯವಾಗಿ ಬೆಂಗಳೂರಿನ ಪ್ರಸಿದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಕಲ್ಪಿಸಲು ಶಿಫಾರಸು ಮಾಡುವಂತೆ ಆಗಾಗ ಮನವಿಗಳು ಬರುತ್ತಿರುತ್ತವೆ. ಈ ಸರಕಾರಿ ಶಾಲೆಗೆ ಪ್ರವೇಶ ಕೇಳಿ ಏಕೆ ಜನ ಬರುತ್ತಿದ್ದಾರೆ? ಇಲ್ಲಿದೆ ವಿವರ ನೋಡಿ.

ಬೆಂಗಳೂರಿನ ಸರ್ಕಾರಿ ಶಾಲೆಯಲ್ಲಿ ಸೀಟ್ ಕೊಡಿಸಲು ಸಚಿವರಿಗೆ ಮನವಿ! ಖುಷಿ ವಿಚಾರ ಹಂಚಿಕೊಂಡ ಸುರೇಶ್ ಕುಮಾರ್
ನೆಲಗದರನಹಳ್ಳಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳನ್ನು ಮಾತನಾಡಿಸುತ್ತಿರುವ ಸಚಿವ ಸುರೇಶ್ ಕುಮಾರ್
Follow us on

ಖಾಸಗಿ ಶಾಲೆಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿರುವ ಪೋಷಕರಿಂದಾಗಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿತ್ತು. ಕೆಲವು ತರಗತಿಗೆ ಒಬ್ಬ ವಿದ್ಯಾರ್ಥಿಯೂ ಇಲ್ಲದ ಪರಿಸ್ಥಿತಿ ಕೆಲವು ಶಾಲೆಗಳದ್ದಾದರೆ, ಇನ್ನು ಹಲವು ಸರ್ಕಾರಿ ಶಾಲೆಗಳು ಈಗಾಗಲೇ ಮುಚ್ಚಲ್ಪಟ್ಟಿತ್ತು. ಇದೆಲ್ಲದರ ನಡುವೆ ಕೆಲವು ಸರ್ಕಾರಿ ಶಾಲೆಗಳು ಖಾಸಗಿ ವಿದ್ಯಾಸಂಸ್ಥೆಗಳಿಗೆ ಸೆಡ್ಡು ಹೊಡೆದು ಉತ್ತಮ ಫಲಿತಾಂಶ ನೀಡುತ್ತಿವೆ. ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿ ಸರ್ಕಾರಿ ಶಾಲೆಯೊಂದಕ್ಕೆ ತಮ್ಮ ಮಕ್ಕಳಿಗೆ ಒಂದು ಸೀಟ್ ಕೊಡಿಸಿ ಎಂದು ಸಚಿವರ ಮೂಲಕ ಶಿಫಾರಸು ಮಾಡಿಸುವುದೆಂದರೆ ತಮಾಷೆಯ ಮಾತಲ್ಲ!

ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದ ನೆಲಗದರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ಅದೇ ಕಾರಣಕ್ಕೆ ಸುದ್ದಿಯಲ್ಲಿದೆ. ಈ ಶಾಲೆಯಲ್ಲಿ ತಮ್ಮ ಮಗನಿಗೆ ಪ್ರವೇಶಾತಿ ನೀಡಬೇಕೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪೋಷಕರೊಬ್ಬರಿಂದ ಮನವಿಯೊಂದು ಬಂದಿತ್ತು. ಸಾಮಾನ್ಯವಾಗಿ ಬೆಂಗಳೂರಿನ ಪ್ರಸಿದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಕಲ್ಪಿಸಲು ಶಿಫಾರಸು ಮಾಡುವಂತೆ ಆಗಾಗ ಮನವಿಗಳು ಬರುತ್ತಿರುತ್ತವೆ. ಆದರೆ, ಸರ್ಕಾರಿ ಶಾಲೆಯಲ್ಲಿ ಅಡ್ಮಿಷನ್ ಮಾಡಿಸಿಕೊಡಿ ಎಂದು ತಮ್ಮಿಂದ ಶಿಫಾರಸು ಮಾಡಿಸುವಂಥದ್ದು ಆ ಶಾಲೆಯಲ್ಲಿ ಏನಿದೆ? ಎಂಬ ಕುತೂಹಲದಿಂದ ಖುದ್ದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ತಮ್ಮ ಫೇಸ್​ಬುಕ್ ಪೇಜಿನಲ್ಲಿ ಪೋಸ್ಟ್ ಮಾಡಿರುವ ಸಚಿವ ಸುರೇಶ್ ಕುಮಾರ್, ನಾನು ಬೆಂಗಳೂರು ನಗರದ ದಾಸರಹಳ್ಳಿ ಕ್ಷೇತ್ರದ ನೆಲಗದರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿ ಶಾಲೆಗೆ ಭೇಟಿ ನೀಡಿದ್ದೆ.
ಈ ಸರ್ಕಾರಿ ಶಾಲೆಗೆ ಪ್ರವೇಶಾವಕಾಶ ಕೊಡಿಸಬೇಕೆಂದು ಕೆಲವು ಕಡೆಯಿಂದ ನಮ್ಮ ಕಚೇರಿಗೆ ಮನವಿ ಬಂದ ಹಿನ್ನೆಲೆಯಲ್ಲಿ ಕುತೂಹಲದಿಂದ ಅಲ್ಲಿಗೆ ಭೇಟಿ ನೀಡಿದ್ದೆ. ಪ್ರತಿಷ್ಠಿತ ಶಾಲೆಗಳಿಗೆ ಪ್ರವೇಶವಕಾಶ ಕೊಡಿಸಬೇಕೆಂದು ಮನವಿ ಬರುವುದು ಮಾಮೂಲು. ಆದರೆ, ಓರ್ವ ಸಚಿವರ ಕಚೇರಿಯಿಂದಲೂ ಈ ಸರ್ಕಾರಿ ಶಾಲೆಯಲ್ಲಿ ಪ್ರವೇಶಾವಕಾಶ ಕೊಡಿಸಬೇಕೆಂದು ಮನವಿ ಬಂದದ್ದು ವಿಶೇಷವಾಗಿತ್ತು. ಹೀಗಾಗಿ, ಶಾಲೆಯ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರನ್ನು ಹಾಗೂ ಶಿಕ್ಷಕರನ್ನು ಭೇಟಿ ಮಾಡಿ ಅವರು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದೆ. ಸಾಲಿನಲ್ಲಿ ಕುಳಿತು ಶಾಲೆಗೆ ಪ್ರವೇಶಾವಕಾಶ ಪಡೆಯಲು ಪೋಷಕರೊಂದಿಗೆ ಕಾದಿದ್ದ ಮಕ್ಕಳನ್ನು ಹಾಗೂ ಪೋಷಕರನ್ನು ಮಾತನಾಡಿಸಿದೆ ಎಂದು ಸಚಿವ ಸುರೇಶ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಶಾಲೆಗಳ ಬಗ್ಗೆ ಇತ್ತೀಚೆಗೆ ಉತ್ತಮ ಪ್ರತಿಕ್ರಿಯೆಗಳು ಬರತೊಡಗಿವೆ. ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ಸರ್ಕಾರ ಅನೇಕ ಯೋಜನೆಗಳನ್ನು ಕೂಡ ಹಾಕಿಕೊಂಡಿದೆ. ವಿದ್ಯಾಗಮ, ಆನ್​ಲೈನ್ ಶಿಕ್ಷಣದ ಮೂಲಕ ಖಾಸಗಿ ಶಾಲೆಗಳಷ್ಟೇ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲೂ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲೂ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಾಗುತ್ತಿವೆ. ಕೊರೋನಾ ಅಟ್ಟಹಾಸದ ನಡುವೆಯೂ ಕೆಲವು ಸರ್ಕಾರಿ ಶಾಲೆಗಳಿಗೆ ಬಹಳಷ್ಟು ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದು, ಬೆಂಗಳೂರಿನ ಸರ್ಕಾರಿ ಶಾಲೆಯ ವಾತಾವರಣ ನನಗೆ ಖುಷಿ ನೀಡಿತು. ಇಂತಹ ಶಾಲೆಗಳ ಬಗ್ಗೆ ಇಡೀ ರಾಜ್ಯದಿಂದ ಸುದ್ದಿ ಬರುತ್ತಿದೆ. ಶಾಲೆಗೆ ನೀಡಿರುವ ಪ್ರವೇಶವಕಾಶ ಸಂಖ್ಯೆಯನ್ನು ಮೀರಿ ಬೇಡಿಕೆಗಳು ಬರುತ್ತಿವೆ. ಈ ಕುರಿತು ಎಸ್.ಡಿ.ಎಂ.ಸಿ ಸದಸ್ಯರು ಪ್ರವೇಶಾವಕಾಶ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಮನವಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮೊದಲೆಲ್ಲ ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿ ಪಡೆಯಲು ಸಚಿವರ ಬಳಿ ಶಿಫಾರಸು ಮಾಡಿಸುತ್ತಿದ್ದರು. ಆದರೆ, ಈಗ ಶಾಸಕರ ಮತ್ತು ಸಚಿವರ ಮೂಲಕ ಸರ್ಕಾರಿ ಶಾಲೆಗಳಲ್ಲೂ ಸೀಟ್ ಕೊಡಿಸುವಂತೆ ಪ್ರಭಾವ ಬಳಸುತ್ತಿದ್ದಾರೆ. ಸರ್ಕಾರಿ ಶಾಲೆಗಳ ಗುಣಮಟ್ಟ ಎಷ್ಟು ಸುಧಾರಿಸುತ್ತಿದೆ ಎಂಬುದು ಇದರಿಂದ ಗೊತ್ತಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಿಗೆ ಈಗಾಗಲೇ ದಾಖಲಾತಿ ಪ್ರಕ್ರಿಯೆಗಳು ಆರಂಭವಾಗಿದ್ದು, ಚಂದನ ವಾಹಿನಿಯಲ್ಲಿ ಆನ್​ಲೈನ್ ಪಾಠಗಳು ಕೂಡ ಶುರುವಾಗಿವೆ ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

ಖಾಸಗಿ ಶಾಲೆಗಳು, ಪೋಷಕರ ನಡುವೆ ಫೀಸ್ ಫೈಟ್; ಫೇಸ್​ಬುಕ್​ನಲ್ಲಿ ಸಚಿವ ಸುರೇಶ್​ ಕುಮಾರ್​ ಪ್ರತಿಕ್ರಿಯೆ 

(Suresh Kumar FB post on why parents asking for admission in government school near Dasarahalli)

Published On - 1:35 pm, Fri, 9 July 21