ಬೆಂಗಳೂರು, ನವೆಂಬರ್ 24: ನಗರದ ಕಾವಲ್ ಬೈರಸಂದ್ರದಲ್ಲಿರೋ ಮುಸ್ಲಿಂ ಸಮುದಾಯದ (Muslim Community) ದಾರುಲ್ ಉಲೂಮ್ ಸಾದಿಯಾ ಅನಾಥಾಶ್ರಮದಲ್ಲಿ (Orphanage) ಮಕ್ಕಳು ಮಧ್ಯಕಾಲೀನ ತಾಲಿಬಾನ್ ಜೀವನ ನಡೆಸುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದಕ್ಕಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂನ್ಗೊ ವಿರುದ್ಧ ಡಿಜೆ ಹಳ್ಳಿ (DJ Halli) ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದಾರುಲ್ ಉಲೂಮ್ ಸಾದಿಯಾ ಅನಾಥಾಶ್ರಮದ ಕಾರ್ಯದರ್ಶಿ ಅಶ್ರಫ್ ಖಾನ್ (70) ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಇತ್ತೀಚೆಗೆ ಖಾನ್ ಅವರ ಅನಾಥಾಶ್ರಮಕ್ಕೆ ಭೇಟಿ ನೀಡಿದ್ದ ಪ್ರಿಯಾಂಕ್ ಕಾನೂನ್ಗೊ, ಅದಕ್ಕಾಗಿ ಯಾವುದೇ ಅನುಮತಿ ಪಡೆದಿಲ್ಲ ಎಂದು ಹೇಳಿದ್ದರು. ಇದಲ್ಲದೆ, ಅನಾಥಾಶ್ರಮವು ಮಕ್ಕಳಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಿದ್ದರು.
ಸಮುದಾಯಗಳ ನಡುವೆ ಬಿರುಕು ಮೂಡಿಸಲು ಕಾನೂನ್ಗೊ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಸುಳ್ಳು ಮಾಹಿತಿಯನ್ನು ಹರಡಿದ್ದಾರೆ ಎಂದು ಅಶ್ರಫ್ ಖಾನ್ ಆರೋಪಿಸಿದ್ದಾರೆ. ಅವರು (ಕಾನೂನ್ಗೊ) ಆರಂಭದಲ್ಲಿ ಅನಾಥಾಶ್ರಮದ ಸೌಲಭ್ಯಗಳಿಗಾಗಿ ಶ್ಲಾಘಿಸಿದ್ದರು ಮತ್ತು ಅದರ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದರು. ಆದಾಗ್ಯೂ, ನಂತರ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ನಿರಾಶಾದಾಯಕ ಕಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಖಾನ್ ದೂರಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಅನಾಥಾಶ್ರಮದಲ್ಲಿ ಅಕ್ರಮವಾಗಿ ಇಸ್ಲಾಂ ಧಾರ್ಮಿಕ ಶಿಕ್ಷಣ: ತಾಲಿಬಾನ್ ಜೀವನ ವಿಧಾನವೆಂದ ಮಕ್ಕಳ ರಕ್ಷಣಾ ಆಯೋಗ
ಕಾನೂನ್ಗೊ ಅವರು ನವೆಂಬರ್ 19 ರಂದು ಎನ್‌ಸಿಪಿಸಿಆರ್‌ನ ಕೆಲವು ಸದಸ್ಯರೊಂದಿಗೆ ಅನಾಥಾಶ್ರಮವನ್ನು ಪರಿಶೀಲನೆ ನಡೆಸಿದ್ದರು. ಬಳಿಕ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ, ಅನಾಥಾಶ್ರಮವು ನೋಂದಾಯಿತ ಸಂಸ್ಥೆ ಅಲ್ಲ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯನ್ನು ಹೊಂದಿದೆ ಎಂದು ಹೇಳಲಾಗಿತ್ತು. ಜುವೆನೈಲ್ ಜಸ್ಟೀಸ್ ಅಥವಾ ಬಾಲ ನ್ಯಾಯ ಕಾಯ್ದೆಯಡಿ (ಜೆಜೆ) (ಮಕ್ಕಳ ಆರೈಕೆ ಮತ್ತು ರಕ್ಷಣೆ) ಅನಾಥಾಶ್ರಮದ ವಿರುದ್ಧ ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಆಯೋಗದ ಪತ್ರವು ಕರ್ನಾಟಕ ಸರ್ಕಾರಕ್ಕೆ ತಿಳಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Fri, 24 November 23