ಗುಟ್ಟಾಗಿ ಪ್ರಿಯಕರನನ್ನು ಮದುವೆಯಾದ ತಮಿಳುನಾಡಿನ ಸಚಿವರ ಮಗಳು; ತಂದೆಯಿಂದ ಕಾಪಾಡಿ ಎಂದು ಬೆಂಗಳೂರು ಪೊಲೀಸರಿಗೆ ಮನವಿ

ಗುಟ್ಟಾಗಿ ಪ್ರಿಯಕರನನ್ನು ಮದುವೆಯಾದ ತಮಿಳುನಾಡಿನ ಸಚಿವರ ಮಗಳು; ತಂದೆಯಿಂದ ಕಾಪಾಡಿ ಎಂದು ಬೆಂಗಳೂರು ಪೊಲೀಸರಿಗೆ ಮನವಿ
ಜಯಕಲ್ಯಾಣಿ- ಸತೀಶ್ ಕುಮಾರ್

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಾಲಸ್ವಾಮಿ ಮಠದಲ್ಲಿ ಸತೀಶ್ ಕುಮಾರ್​​ನನ್ನು ತಮಿಳುನಾಡು ಸಚಿವ ಶೇಖರ್ ಬಾಬು ಅವರ ಮಗಳು ಜಯಕಲ್ಯಾಣಿ ಮದುವೆಯಾಗಿದ್ದಾರೆ. ತಮ್ಮ ತಂದೆಯಿಂದ ಜೀವ ಬೆದರಿಕೆ ಇರುವುದರಿಂದ ಬೆಂಗಳೂರು ಪೊಲೀಸರ ಬಳಿ ರಕ್ಷಣೆ ಕೋರಿದ್ದಾರೆ.

TV9kannada Web Team

| Edited By: Sushma Chakre

Mar 07, 2022 | 5:33 PM

ಬೆಂಗಳೂರು: ತಮಿಳುನಾಡು ಸಚಿವ ಶೇಖರ್ ಬಾಬು (Sekar Babu) ಅವರ ಮಗಳು ಜಯ ಕಲ್ಯಾಣಿ ಕಳೆದ ವರ್ಷ ತಮಿಳುನಾಡಿನಿಂದ ನಾಪತ್ತೆಯಾಗಿದ್ದರು. ಈ ನಾಪತ್ತೆ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಯುವಕನನ್ನು ಪ್ರೀತಿಸಿದ್ದ ಜಯಕಲ್ಯಾಣಿ (Jaya Kalyani) ತನ್ನ ಪ್ರಿಯಕರನನ್ನು ಮದುವೆಯಾಗಿ, ತನ್ನ ತಂದೆಯಿಂದ ತನಗೆ ರಕ್ಷಣೆ ಕೊಡಿಸಬೇಕೆಂದು ಬೆಂಗಳೂರು ಕಮಿಷನರ್​ ಕಚೇರಿಗೆ ಭೇಟಿ ನೀಡಿದ್ದಾರೆ. ಈ ಮೂಲಕ ತಮಿಳುನಾಡಿನ ಸಚಿವರ (Tamil Nadu Minister) ಮಗಳ ಪ್ರೇಮ ಪುರಾಣ ಬೆಂಗಳೂರಿನ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ತಮಿಳುನಾಡು ಮುಜರಾಯಿ ಖಾತೆ ಸಚಿವ ಶೇಖರ್ ಬಾಬು ಅವರ ಮಗಳು ಜಯಕಲ್ಯಾಣಿ 2021ರ ಸೆಪ್ಟೆಂಬರ್​ನಲ್ಲಿ ಚೆನ್ನೈನಿಂದ ನಾಪತ್ತೆಯಾಗಿದ್ದರು. ಚೆನ್ನೈನಲ್ಲಿ ಜಯಕಲ್ಯಾಣಿ ನಾಪತ್ತೆ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದೀಗ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಾಲಸ್ವಾಮಿ ಮಠದಲ್ಲಿ ಸತೀಶ್ ಕುಮಾರ್​​ನನ್ನು ಜಯಕಲ್ಯಾಣಿ ಮದುವೆಯಾಗಿದ್ದಾರೆ. ತಮ್ಮ ಪ್ರೀತಿಗೆ ತಂದೆಯ ವಿರೋಧ ಉಂಟಾದ ಹಿನ್ನೆಲೆಯಲ್ಲಿ ರಕ್ಷಣೆ ನೀಡುವಂತೆ ಅವರು ಬೆಂಗಳೂರಿನ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ತಮಿಳುನಾಡು ಸರ್ಕಾರದ ಮುಜರಾಯಿ ಇಲಾಖೆ ಸಚಿವರ ಮಗಳು ತಮ್ಮ ಪ್ರಿಯಕರನನ್ನು ಮದುವೆಯಾಗಿದ್ದು, ತಮಗೆ ತಮ್ಮ ತಂದೆ ಸಚಿವ ಶೇಖರ್ ಬಾಬು ಅವರಿಂದ ಜೀವ ಬೆದರಿಕೆ ಇದೆ, ತಮಗೆ ರಕ್ಷಣೆ ನೀಡಿ ಎಂದು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ. ನನ್ನ ತಂದೆ ಸಚಿವರಾಗಿರುವುದರಿಂದ ನಮಗೆ ತಮಿಳುನಾಡು ಸರ್ಕಾರದಿಂದ ಯಾವುದೇ ಸಹಾಯ ಸಿಗುವುದಿಲ್ಲ. ಹೀಗಾಗಿ, ಕರ್ನಾಟಕ ಪೊಲೀಸರ ಬಳಿ ರಕ್ಷಣೆಗಾಗಿ ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

ತಮಿಳುನಾಡು ಮುಜರಾಯಿ ಇಲಾಖೆ ಸಚಿವ ಶೇಖರ್​ ಬಾಬು ಅವರ ಮಗಳು ಜಯಕಲ್ಯಾಣಿ ಹಾಗೂ ಸತೀಶ್ ಕುಮಾರ್ ಕಳೆದ 6 ವರ್ಷದಿಂದ ಪ್ರೀತಿಸುತ್ತಿದ್ದರು. ಅವರ ಪ್ರೀತಿಗೆ ಮನೆಯವರು ಒಪ್ಪದ ಕಾರಣ 6 ತಿಂಗಳ ಹಿಂದೆ ಅವರಿಬ್ಬರೂ ಓಡಿಹೋಗಲು ನಿರ್ಧರಿಸಿದ್ದರು. ಆದರೆ, ಅವರ ತಂದೆ ಸಚಿವ ಶೇಖರ್ ಬಾಬು ತಮ್ಮ ಅಧಿಕಾರ ಬಳಸಿ ಪುಣೆಯಲ್ಲಿ ಅವರಿಬ್ಬರನ್ನು ಪತ್ತೆ ಹಚ್ಚಿ, ತಮ್ಮ ಮಗಳನ್ನು ವಾಪಾಸ್ ಕರೆತಂದಿದ್ದರು.

ಇದಾದ ಬಳಿಕ 2 ತಿಂಗಳು ಕಾಲ ಪ್ರಿಯಕರ ಸತೀಶ್​ ಕುಮಾರ್​ನನ್ನು ಗೃಹ ಬಂಧನದಲ್ಲಿ ಇರಿಸಿದ್ದರು. ಈ ಪ್ರಕರಣದ ಕುರಿತಾಗಿ ಸತೀಶ್ ಕುಮಾರ್​ ಅವರ ಕುಟುಂಬದ ಸದಸ್ಯರಿಗೂ ತೊಂದರೆ ನೀಡಲಾಗಿದೆ ಎಂದು ಜಯ ಕಲ್ಯಾಣಿ ತಮ್ಮ ತಂದೆಯ ವಿರುದ್ಧ ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಗೃಹಬಂಧನದಲ್ಲಿದ್ದ ಅವರು ಕಳೆದ ಮೂರು ದಿನಗಳ ಹಿಂದೆ ಮನೆ ಬಿಟ್ಟು ಓಡಿ ಹೋಗಿದ್ದರು. ನಂತರ ಕರ್ನಾಟಕದಲ್ಲಿ ಮದುವೆಯಾಗಿದ್ದರು.

ಅವರಿಬ್ಬರು ಹಾಲಸ್ವಾಮಿ ಮಠದಲ್ಲಿ ಹಿಂದೂ ಧರ್ಮದ ಅನುಸಾರ ಮದುವೆ ಆಗಿದ್ದಾರೆ. ಈಗಾಗಲೇ ಮಗಳು ನಾಪತ್ತೆಯಾದ ಹಿನ್ನಲೆಯಲ್ಲಿ ಸತೀಶ್​ ಕುಮಾರ್​​ ಅವರ ಸಂಬಂಧಿಕರನ್ನು ಅಕ್ರಮವಾಗಿ ಬಂಧಿಸಲಾಗಿದೆ. ನಮಗೆ ಪ್ರಾಣ ರಕ್ಷಣೆ ಬೇಕು ಎಂದು ಸಂಪರ್ಕಿಸಿದ ಹಿನ್ನೆಲೆಯಲ್ಲಿ ಪೊಲೀಸರ ಮುಂದೆ ಕರೆತರಲಾಗಿದೆ ಎಂದಿದ್ದಾರೆ. ತಮಿಳುನಾಡು ಮುಜರಾಯಿ ಸಚಿವರ ಮಗಳು ಜಯ ಕಲ್ಯಾಣಿ ಎಂಬಿಬಿಎಸ್​ ಪದವೀಧರೆಯಾಗಿದ್ದಾರೆ. ಸತೀಶ್​​ ಕುಮಾರ್​ ಡಿಪ್ಲೋಮಾ ಓದಿದ್ದು, ಚೆನ್ನೈನಲ್ಲಿ ಉದ್ಯಮಿಯಾಗಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಬಾಲಕಿಯ ಆತ್ಮಹತ್ಯೆ: ಹಾಸ್ಟೆಲ್​​​ನಲ್ಲಿ ಹೆಚ್ಚಿನ ಕೆಲಸ ಮಾಡಲು ಒತ್ತಾಯಿಸುತ್ತಿದ್ದರು ಎಂದು ಆರೋಪಿಸಿರುವ ವಿಡಿಯೊ ಬಹಿರಂಗ

Tamil Nadu Lockdown: ತಮಿಳುನಾಡಿನಲ್ಲಿ ಭಾನುವಾರ ಸಂಪೂರ್ಣ ಲಾಕ್​ಡೌನ್ ಘೋಷಿಸಿದ ಸಿಎಂ ಸ್ಟಾಲಿನ್

Follow us on

Related Stories

Most Read Stories

Click on your DTH Provider to Add TV9 Kannada