ಬೆಳಗಾವಿ/ಬಾಗಲಕೋಟೆ/ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದಾಗಿ ರಾಜ್ಯದಲ್ಲೇ ಎಷ್ಟೋ ಕುಟುಂಬಗಳು ಅನಾಥವಾಗಿ ಬೀದಿಗೆ ಬಿದ್ದಿವೆ. ಅತ್ತ ಬೆಳಗಾವಿ, ಬಾಗಲಕೋಟೆಯಲ್ಲಿ ಹಲವು ಶಿಕ್ಷಕರು ಸೋಂಕಿನಿಂತ ಮೃತಪಡುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ ಬಿಬಿಎಂಪಿ ಅಧಿಕಾರಿಗಳು ಕೊನೆಯುಸಿರೆಳೆಯುತ್ತಿದ್ದಾರೆ. ಒಂದೇ ಕುಟುಂಬದ ಮೂರ್ನಾಲ್ಕು ಜನರ ಜೀವವನ್ನೂ ಕಸಿದುಕೊಂಡಿರುವ ಕೊರೊನಾ ಹಲವರಿಗೆ ದಿಕ್ಕಿಲ್ಲದಂತೆ ಮಾಡಿದೆ.
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ತೋಪಿನಕಟ್ಟಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಸಹೋದರರಿಬ್ಬರೂ ಕೊರೊನಾ ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ. 4 ದಿನಗಳ ಹಿಂದೆ ಅಣ್ಣ ಪಿ.ಕೆ.ಕುಂಬಾರ್ ಸಾವಿಗೀಡಾಗಿದ್ದು, 2 ದಿನಗಳ ಹಿಂದೆ ತಮ್ಮ ನಾರಾಯಣ್ ಕುಂಬಾರ್ ಮೃತಪಟ್ಟಿದ್ದಾರೆ. ಹತ್ತು ದಿನಗಳ ಹಿಂದೆ ನಾರಾಯಣ್ ಕುಂಬಾರ್ ಅವರಿಗೆ ಕೊರೊನಾ ದೃಢವಾಗಿದ್ದು, ನಂತರ ಪಿ.ಕೆ.ಕಂಬಾರ್ ಅವರಿಗೂ ತಗುಲಿದೆ. ಸೋಂಕು ತಗುಲಿರುವುದು ಖಾತ್ರಿಯಾಗುತ್ತಿದ್ದಂತೆಯೇ ಇಬ್ಬರನ್ನೂ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಇದೀಗ ಕುಟುಂಬಕ್ಕೆ ಆಧಾರವಾಗಿದ್ದ ಸಹೋದರರಿಬ್ಬರ ಸಾವು ಮನೆಯವರನ್ನು ದುಃಖದ ಮಡುವಿಗೆ ನೂಕಿದೆ.
ಇತ್ತ ಬಾಗಲಕೋಟೆ ಜಿಲ್ಲೆಯಲ್ಲಿ ಮೇ 1ರಿಂದ16ರವರೆಗೆ 13 ಶಿಕ್ಷಕರು ಕೊವಿಡ್ ಸೋಂಕಿನಿಂದಾಗಿ ಕಣ್ಮುಚ್ಚಿದ್ದಾರೆ. ಇದೀಗ ಮತ್ತಿಬ್ಬರು ಶಿಕ್ಷಕರು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದು, ಮೃತರು ಬಿ.ಎಂ.ಪಾಟೀಲ ಹಾಗೂ ಬಿ.ಹೆಚ್.ಬಾಲರೆಡ್ಡಿ ಎಂದು ತಿಳಿದುಬಂದಿದೆ. ಕೇವಲ 16 ದಿನಗಳ ಅಂತರದಲ್ಲಿ 13 ಶಿಕ್ಷಕರು ಮೃತಪಟ್ಟಿದ್ದು, ಮೊದಲ ಅಲೆಯಲ್ಲೂ ಜಿಲ್ಲೆಯಲ್ಲಿ 17 ಜನ ಶಿಕ್ಷಕರು ಸಾವನ್ನಪ್ಪಿದ್ದ ಕಾರಣ ಜಿಲ್ಲೆಯ ಇಡೀ ಶಿಕ್ಷಕ ಸಮುದಾಯವೇ ಆತಂಕದಲ್ಲಿ ದಿನದೂಡುವಂತಾಗಿದೆ.
ಏಪ್ರಿಲ್ 1ರಿಂದ ಮೇ 15ರವರಗೆ 14 ಜನ ಬಿಬಿಎಂಪಿ ಅಧಿಕಾರಿಗಳು ಸಾವು
ಬೆಂಗಳೂರು: ಕೊರೊನಾದ ರಾಜಧಾನಿ ಎಂಬಂತಾಗಿರುವ ಬೆಂಗಳೂರಿನಲ್ಲಿ ಏಪ್ರಿಲ್ 1ರಿಂದ ಮೇ 15ರವರಗೆ ಕೊರೊನಾ ನಿರ್ವಹಣೆ ಕರ್ತವ್ಯದಲ್ಲಿದ್ದ ಬಿಬಿಎಂಪಿಯ 14 ಜನ ಅಧಿಕಾರಿಗಳು ಸಾವಿಗೀಡಾಗಿದ್ದಾರೆ. ಎಲ್ಲಾ ಅಧಿಕಾರಿಗಳೂ ಕೊವಿಡ್ ಡ್ಯೂಟಿಯಲ್ಲಿ ನಿರತರಾಗಿದ್ದು, ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ 14 ಜನ ನಿಧನರಾಗಿರುವುದು ಬಿಬಿಎಂಪಿ ಸಿಬ್ಬಂದಿಯಲ್ಲೇ ಆತಂಕ ಸೃಷ್ಟಿಸಿದೆ.
ಮೃತಪಟ್ಟ 14 ಅಧಿಕಾರಿಗಳ ಹೆಸರು ಈ ಕೆಳಗಿನಂತಿದೆ
1. ಮುನಿಯಪ್ಪ, ಕಂದಾಯ ಅಧಿಕಾರಿ
2. ಜಿ ಸೀತಾರಾಮಯ್ಯ, ಹಿರಿಯ ಅರೋಗ್ಯ ಪರಿವೀಕ್ಷಕರು
3. ಶ್ರೀನಿವಾಸ ಮೂರ್ತಿ, ದ್ವಿತೀಯ ದರ್ಜೆ ಸಹಾಯಕರು, ಎಡಿಟಿಪಿ ಪೂರ್ವ
4. ಮಂಜುನಾಥ್.ಎಂ, ನಾಲ್ಕನೇ ದರ್ಜೆ ನೌಕರರು, ಮುಖ್ಯ ಲೆಕ್ಕ ಪರಿಶೋಧಕರ ಕಛೇರಿ
5. ವೆಂಕಟರಾಯಪ್ಪ, ವ್ಯವಸ್ಥಾಪಕರು, ಸಹಾಯಕ ಕಂದಾಯ ಅಧಿಕಾರಿ, ಕಲ್ಯಾಣ, ದಾಸರಹಳ್ಳಿ
6. ಸಿ.ಕೆ ರಾಮಚಂದ್ರ, ಕೆಲಸ ಪರಿವೀಕ್ಷಕರು, ವಾರ್ಡ್ 77
7. ವಿನಾಯಕ್, ಮಾನ್ಯ ವಿಶೇಷ ಆಯುಕ್ತರ ಆಪ್ತ ಸಹಾಯಕ
8. ಎಂ. ಎಸ್.ನರಸಿಂಹಮೂರ್ತಿ, ಚಾಲಕರು
9. ಮಂಜಣ್ಣ
10. ಕೆಂಚಯ್ಯ, ಕಂದಾಯ ವಸೂಲಿಗಾರರು
11. ಸ್ವಾಮಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು
12. ಕೃಷ್ಣೇಗೌಡ, ಕಂದಾಯ ವಸೂಲಿಗಾರರು, ಕೊಡಿಗೇಹಳ್ಳಿ
13. ಪುಟ್ಟರಾಜು, ಕೆಲಸ ಪರಿವೀಕ್ಷಕರು, ವಾರ್ಡ್ 169 ಭೈರಸಂದ್ರ
14. ಡಿ. ಧನರಾಜ್, ನಾಲ್ಕನೇ ದರ್ಜೆ ನೌಕರರು, ಅರೋಗ್ಯ ವೈದ್ಯಾಧಿಕಾರಿ ಪುಲಿಕೇಶಿನಗರ
ಇದನ್ನೂ ಓದಿ:
ಕೊವಿಡ್ ಭಯ; ಕೊರೊನಾ ಸೋಂಕಿತ ಶಿಕ್ಷಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ