ಕೋಲಾರದ ಸರ್ಕಾರಿ ಶಾಲೆಯ ಚಿತ್ರಣವನ್ನು ಬದಲಾಯಿಸಿದ ಶಿಕ್ಷಕರು; ಲಾಕ್​ಡೌನ್​ನಲ್ಲಿ ಬೆಳೆದು ನಿಂತಿದೆ ಹಸಿರು ವಾತಾವರಣ

| Updated By: sandhya thejappa

Updated on: Apr 18, 2021 | 12:11 PM

ಗುಲ್ಲಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುವ ಶಿಕ್ಷಕರು ಮತ್ತು ಅಡುಗೆ ಸಹಾಯಕರು ಇಡೀ ಶಾಲೆಯನ್ನು ತಮ್ಮ ಶ್ರಮದ ಮೂಲಕ ಹಸಿರು ಶಾಲೆಯನ್ನಾಗಿ ಬದಲಾಯಿಸಿದ್ದಾರೆ. ಶಾಲೆಯ ಆವರಣದಲ್ಲಿ ತರಕಾರಿ ಗಿಡಗಳು, ಹತ್ತಾರು ಬಗೆಯ ಹೂವಿನ ಗಿಡಗಳು, ಸುಮಾರು 20ಕ್ಕೂ ಹೆಚ್ಚು ಬಗೆಯ ಔಷಧೀಯ ಗಿಡಗಳನ್ನು ಬೆಳೆಸಿದ್ದಾರೆ.

ಕೋಲಾರದ ಸರ್ಕಾರಿ ಶಾಲೆಯ ಚಿತ್ರಣವನ್ನು ಬದಲಾಯಿಸಿದ ಶಿಕ್ಷಕರು; ಲಾಕ್​ಡೌನ್​ನಲ್ಲಿ ಬೆಳೆದು ನಿಂತಿದೆ ಹಸಿರು ವಾತಾವರಣ
ಗುಲ್ಲಹಳ್ಳಿಯ ಸರ್ಕಾರಿ ಶಾಲೆ
Follow us on

ಕೋಲಾರ: ರಾಜ್ಯದ ಗಡಿಭಾಗದಲ್ಲಿ ಸಾಕಷ್ಟು ನಿರ್ಲ್ಯಕ್ಷಕ್ಕೆ ಒಳಗಾಗಿದ್ದ ಸರ್ಕಾರಿ ಶಾಲೆಗಳು ಕೊರೊನಾದಿಂದ ಜಾರಿಗೊಳಿಸಿದ ಲಾಕ್​ಡೌನ್​ ಕಾಲದಲ್ಲಿ ಬದಲಾವಣೆ ಕಂಡಿದೆ. ಈಗ ಸದ್ಯ ಕೋಲಾರ ಜಿಲ್ಲೆಯ ಸರ್ಕಾರಿ ಶಾಲೆಯ ಚಿತ್ರಣ ಬದಲಾಗಿದ್ದು, ಖಾಸಗಿ ಶಾಲೆಯನ್ನು ನಾಚಿಸುವಂತೆ ಶಾಲೆಯ ಆವರಣ ನಿರ್ಮಾಣಗೊಂಡಿದೆ. ಕೊರೊನಾ ಕಾಲದಲ್ಲಿ ಸರ್ಕಾರಿ ಶಾಲೆಯನ್ನು ಚೆಂದಗಾಣುವಂತೆ ಮಾಡುವಲ್ಲಿ ಶಿಕ್ಷಕರು ಪ್ರಯತ್ನಪಟ್ಟಿದ್ದು, ಹಸಿರು ಶಾಲೆಯಾಗಿ ಕಂಗೊಳಿಸುತ್ತಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ಗುಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಕೊರೊನಾ ಲಾಕ್​ಡೌನ್​ನಿಂದಾಗಿ ಕಳೆದ ಒಂದು ವರ್ಷದಿಂದ ಶಾಲೆಗೆ ಮಕ್ಕಳು ಬರುತ್ತಿರಲಿಲ್ಲ. ಆದರೆ ಶಾಲೆಗೆ ಶಿಕ್ಷಕರು ಬರುತ್ತಿದ್ದಾರೆ. ಮಕ್ಕಳಿಲ್ಲದ ಮೇಲೆ ಶಾಲೆಗೆ ಬಂದ ಶಿಕ್ಷಕರು ಶಾಲೆಯಲ್ಲಿ ಏನು ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಈ ಶಾಲೆಯ ಶಿಕ್ಷಕರು ಉತ್ತರ ಕೊಟ್ಟಿದ್ದಾರೆ.

ಗುಲ್ಲಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುವ ಶಿಕ್ಷಕರು ಮತ್ತು ಅಡುಗೆ ಸಹಾಯಕರು ಇಡೀ ಶಾಲೆಯನ್ನು ತಮ್ಮ ಶ್ರಮದ ಮೂಲಕ ಹಸಿರು ಶಾಲೆಯನ್ನಾಗಿ ಬದಲಾಯಿಸಿದ್ದಾರೆ. ಶಾಲೆಯ ಆವರಣದಲ್ಲಿ ತರಕಾರಿ ಗಿಡಗಳು, ಹತ್ತಾರು ಬಗೆಯ ಹೂವಿನ ಗಿಡಗಳು, ಸುಮಾರು 20ಕ್ಕೂ ಹೆಚ್ಚು ಬಗೆಯ ಔಷಧೀಯ ಗಿಡಗಳನ್ನು ಬೆಳೆಸಿದ್ದಾರೆ. ಪರಿಣಾಮ ಇಂದು ಶಾಲೆಯ ಚಿತ್ರಣವೇ ಬದಲಾಗಿದ್ದು, ಶಾಲೆಯಲ್ಲಿ ಸುಂದರವಾದ ವಾತಾವರಣ ನಿರ್ಮಾಣವಾಗಿದೆ. ಲಾಕ್​ಡೌನ್​ ಸಂದರ್ಭದಲ್ಲಿ ಶಿಕ್ಷಕರು ಮಾಡಿದ ಈ ಕೆಲಸಕ್ಕೆ ಶಾಲೆಗೆ ಜಿಲ್ಲೆಯ ಪರಿಸರ ಸ್ನೇಹಿ ಶಾಲೆ, ಗ್ರೀನ್ ಸ್ಕೂಲ್​ ಎನ್ನುವ ಪ್ರಶಸ್ತಿ ಸಿಕ್ಕಿದೆ.

ಲಾಕ್​ಡೌನ್​ನಲ್ಲಿ ಶಾಲೆಯ ಚಿತ್ರಣ ಬದಲಾಯಿಸಿದ ಶಿಕ್ಷಕರು

ಶಾಲೆಯ ಆವರಣದಲ್ಲಿ ಕಸ ನಿರ್ವಹಣೆ, ನೀರಿನ ನಿರ್ವಹಣೆ, ಜೊತೆಗೆ ಪ್ರಕೃತಿಯಲ್ಲಿ ಸಿಗುವ ನೀರಿನ ಬಾಟಲ್​ ನಂತಹ ತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ಅದರಲ್ಲಿ ಸಣ್ಣ ಸಣ್ಣ ಔಷಧಿಯ ಗಿಡಗಳಾದ, ತುಳಸಿ, ಒಂದೆಲಗ, ಗರ್ಗ, ಆಲೋವೇರದಂತಹ ಗಿಡಗಳನ್ನು ಬೆಳೆಸುವುದು ಅಷ್ಟೇ ಅಲ್ಲದೆ ಶಾಲೆಯ ಗೋಡೆಗಳ ಮೇಲೆ ಉಪಯುಕ್ತ ಮಾಹಿತಿಗಳನ್ನು ಬರೆಯುವ ಕೆಲಸ ಮಾಡಿದ್ದೇವೆ ಎಂದು ಶಾಲೆಯ ಮುಖ್ಯ ಶಿಕ್ಷಕರಾದ ಮುನಿನಾರಾಯಣ ಹೇಳಿದ್ದಾರೆ.

ಮಕ್ಕಳಿಗೆ ನಲಿ ಕಲಿ ಪಾಠಕ್ಕೆ ಬೇಕಾದ ಉಪಯುಕ್ತ ಪಾಠ ಪ್ರವಚನ ಮಾಡಲು ಬೇಕಾದ ಸಲಕರಣೆಗಳನ್ನು ಸಿದ್ಧಮಾಡಿಕೊಂಡಿದ್ದಾರೆ. ಈ ಮೂಲಕ ಕೊರೊನಾ ಎನ್ನುವ ಆತಂಕದಲ್ಲಿ ಗುಲ್ಲಹಳ್ಳಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ಕೈಕಟ್ಟಿ ಕೂರದೆ ಈ ಸಮಯವನ್ನು ಉಪಯುಕ್ತವಾಗಿ ಬಳಸಿಕೊಳ್ಳುವ ಮೂಲಕ ಇತರ ಶಾಲೆಗಳಿಗೆ ಮಾದರಿಯಾಗಿದ್ದಾರೆ. ಅಷ್ಟೇ ಅಲ್ಲದೆ ಇವರ ಶ್ರಮಕ್ಕೆ ತಕ್ಕಂತೆ ಹಸಿರು ಶಾಲೆ ಪ್ರಶಸ್ತಿಗೆ ಆಯ್ಕೆಯಾಗಿರುವುದು ಇಲ್ಲಿನ ಶಿಕ್ಷಕರಿಗೆ ಸಂತಸ ತಂದಿದೆ.

ಬಾಟಲಿಗಳಲ್ಲಿ ಗೀಡ ನೆಟ್ಟು ಆರೈಕೆ ಮಾಡುತ್ತಿರುವ ಶಿಕ್ಷಕರು

ಒಟ್ಟಾರೆ ಕೊರೊನಾ ಎಂದು ಹೆದರಿಕೊಂಡು ಮನೆ ಬಿಟ್ಟು ಹೊರ ಬಾರದೆ ಇದ್ದ ಜನರ ನಡುವೆ, ಲಾಕ್​ಡೌನ್​ ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡ ಗುಲ್ಲಹಳ್ಳಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗಳು ನಿಜಕ್ಕೂ ಇತರ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿದೆ.


ಇದನ್ನೂ ಓದಿ:

ಮಾದರಿ ಸರ್ಕಾರಿ ಶಾಲೆ: ಕೊಡಗಿನಲ್ಲಿ ತಲೆ ಎತ್ತಿದೆ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ

ದೇವಸ್ಥಾನಕ್ಕೆ ಕೂಡಿಟ್ಟ ಹಣವನ್ನೂ ಸರ್ಕಾರಿ ಶಾಲೆಗೆ ಕೊಟ್ಟ ಗ್ರಾಮಸ್ಥರು; ಶಿಥಿಲಗೊಂಡಿದ್ದ ಶಾಲೆಗೆ ಮರುಜೀವ

(Teachers who changed the environment of government school in Kolar)