ಯುವಕರಲ್ಲೇ ಕೊರೊನಾ ಸೋಂಕು ಹೆಚ್ಚು; ಕಲಬುರಗಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಆರೋಗ್ಯಾಧಿಕಾರಿಗಳಿಂದ ಸೂಚನೆ

ಯುವಕರಲ್ಲೇ ಕೊರೊನಾ ಸೋಂಕು ಹೆಚ್ಚು; ಕಲಬುರಗಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಆರೋಗ್ಯಾಧಿಕಾರಿಗಳಿಂದ ಸೂಚನೆ
ಪ್ರಾತಿನಿಧಿಕ ಚಿತ್ರ

ಅಂಕಿ ಸಂಖ್ಯೆಗಳಿಂದ 21 ರಿಂದ 30 ವರ್ಷದೊಳಗಿನ 9205 ಜನರಿಗೆ ಸೋಂಕು ತಗುಲಿದ್ದು ಒಟ್ಟು ಸೋಂಕಿತರಲ್ಲಿ ಯುವ ಸಮುದಾಯದವರೇ ಹೆಚ್ಚಾಗಿರುವುದು ತಿಳಿದುಬಂದಿದೆ. ಇನ್ನು 9205 ಸೋಂಕಿತರ ಪೈಕಿ 5326 ಯುವಕರಿದ್ದರೆ, 3879 ಯುವತಿಯರಿದ್ದಾರೆ.

preethi shettigar

| Edited By: sandhya thejappa

Apr 18, 2021 | 12:48 PM


ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಕೊರೊನಾದ ಎರಡನೇ ಅಲೆಗೆ ಜಿಲ್ಲೆಯ ಜನರು ಕಂಗಾಲಾಗಿದ್ದಾರೆ. ಇದರ ನಡುವೆ ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕು ಪತ್ತೆಯಾಗುತ್ತಿರುವುದು ಯುವಕರಲ್ಲಿಯೇ ಎನ್ನುವುದು ಮತ್ತಷ್ಟು ಅತಂಕಕ್ಕೆ ಕಾರಣವಾಗಿದೆ. ಯುವ ಜನಾಂಗದಲ್ಲಿಯೇ ಸೋಂಕು ಹೆಚ್ಚಾಗಿ ಹರಡುತ್ತಿದೆ ಎಂಬ ಬಗ್ಗೆ ಅಂಕಿ ಸಂಖ್ಯೆಗಳಿಂದ ಮಾಹಿತಿ ಹೊರಬಂದಿದೆ.

ಕಲಬುರಗಿ ಜಿಲ್ಲೆಯಲ್ಲಿ ಬರೋಬ್ಬರಿ 28317 ಜನರಿಗೆ ಸೋಂಕು ತಗುಲಿದೆ. ಅದರಲ್ಲಿ ಹೆಚ್ಚಿನ ಸೋಂಕಿತರು ಯುವಕರೇ ಆಗಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿಸಂಖ್ಯೆಗಳಲ್ಲಿ ಯುವಕ- ಯುವತಿಯರೇ ಹೆಚ್ಚಿನ ಸೋಂಕಿತರಾಗಿದ್ದು ಬಯಲಾಗಿದೆ.

ವಯಸ್ಸು                        ಸೋಂಕಿತರು
01 ರಿಂದ 10 ವರ್ಷ            1229
11 ರಿಂದ 20 ವರ್ಷ            3101
21 ರಿಂದ 30 ವರ್ಷ           9205
31 ರಿಂದ 40 ವರ್ಷ           2668
41 ರಿಂದ 50 ವರ್ಷ           3802
60 ಮೇಲ್ಪಟ್ಟು                   2843

ಅಂಕಿ ಸಂಖ್ಯೆಗಳಿಂದ 21 ರಿಂದ 30 ವರ್ಷದೊಳಗಿನ 9205 ಜನರಿಗೆ ಸೋಂಕು ತಗುಲಿದ್ದು ಒಟ್ಟು ಸೋಂಕಿತರಲ್ಲಿ ಯುವ ಸಮುದಾಯದವರೇ ಹೆಚ್ಚಾಗಿರುವುದು ತಿಳಿದುಬಂದಿದೆ. ಇನ್ನು 9205 ಸೋಂಕಿತರ ಪೈಕಿ 5326 ಯುವಕರಿದ್ದರೆ, 3879 ಯುವತಿಯರಿದ್ದಾರೆ. ಒಟ್ಟಾರೆಯಾಗಿ ಕೂಡ ಮಹಿಳೆಯರಿಗಿಂತ ಪುರಷರೇ ಹೆಚ್ಚು ಸೋಂಕಿತರಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಇಲ್ಲಿವರಗೆ 375 ಜನ ಮೃತಪಟ್ಟಿದ್ದು, ಅದರಲ್ಲಿ 21 ರಿಂದ 30 ವರ್ಷದೊಳಗಿನ 11 ಜನರು ಮೃತಪಟ್ಟಿದ್ದಾರೆ.

ಯುವಕರ ಮೂಲಕ ಮನೆಯವರಿಗೆ ಸೋಂಕು
ಯುವಕ- ಯುವತಿಯರು ಹೆಚ್ಚಾಗಿ ಮನೆಯ ಹೊರಗಡೆ ಓಡಾಡುತ್ತಿರುವುದರಿಂದ ಅವರಿಗೆ ಮಾತ್ರ ಸೋಂಕು ತಗುಲುತ್ತಿಲ್ಲ. ಅವರಿಂದ ಅವರ ಮನೆಯವರಿಗೆ ಕೂಡಾ ಸೋಂಕು ತಗುಲುತ್ತಿದೆ. ನಗರದ ಬ್ರಹ್ಮಪುರ ಬಡಾವಣೆಯಲ್ಲಿ ಮನೆಯಿಂದ ಹೊರಗೆ ಕಾಲಿಡದ ವೃದ್ಧರೊಬ್ಬರಿಗೆ ಕೊರೊನಾ ಸೋಂಕು ತಗುಲಿತ್ತು. ಜೊತೆಗೆ ಸೋಂಕಿನಿಂದ ಆ ವೃದ್ಧ ಮೃತಪಟ್ಟಿದ್ದರು. ಇವರಿಗೆ ಸೋಂಕು ಹೇಗೆ ಬಂತು ಎಂದು ಆರೋಗ್ಯ ಇಲಾಖೆಯವರು ಸೋಂಕಿನ ಮೂಲ ಪತ್ತೆ ಮಾಡಿದಾಗ, ಮೊಮ್ಮಗ ಅನೇಕ ಕಡೆ ಓಡಾಡಿದ್ದು, ಯುವಕನಿಗೆ ಕೊರೊನಾ ಲಕ್ಷಣಗಳು ಇರಲಿಲ್ಲ. ಆದರೆ ಆತನಿಂದ ಮನೆಯಲ್ಲಿದ್ದ ವೃದ್ಧನಿಗೆ ಸೋಂಕು ತಗುಲಿತ್ತು. ಹೀಗಾಗಿ ಮನೆಯವರ ಬಗ್ಗೆ ಕಾಳಜಿ ಅಗತ್ಯ.

ಸೋಂಕು ಪಸರಿಸಲು ಕಾರಣವಾಗುತ್ತಿರುವ ಯುವ ಜನಾಂಗ
ಜಿಲ್ಲೆಯಲ್ಲಿ ಯುವ ಸಮೂಹಕ್ಕೆ ಕೊರೊನಾ ಆಘಾತ ನೀಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ಹೆಚ್ಚಿನ ಯುವಕ ಯುವತಿಯರು ಹೊರಗೆ ಓಡಾಡುತ್ತಿರುವುದು. ಕೆಲವರು ತಮ್ಮ ದೈನಂದಿನ ಕೆಲಸದ ಮೇಲೆ ಅಡ್ಡಾಡಿದರೆ, ಇನ್ನು ಕೆಲವರು ಪಾರ್ಟಿ, ಮೋಜಿಗಾಗಿ ಓಡಾಡುತ್ತಾರೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಪೊಲೀಸರು ಪ್ರತಿನಿತ್ಯ ನೂರಾರು ಬಾರಿ ಅನವಶ್ಯಕವಾಗಿ ಮನೆಯಿಂದ ಹೊರಬರಬೇಡಿ ಎಂದು ಮನವಿ ಮಾಡಿದರು ಕೂಡಾ, ಅನೇಕರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸೋಂಕು ತಗುಲಿದ 11 ಜನರು ಸಾವಿಗೀಡಾಗಿದ್ದರು ಕೂಡ ಈ ಬಗ್ಗೆ ಇನ್ನು ಕೂಡ ಯುವಕರಲ್ಲಿ ಗಂಭೀರತೆ ಬಂದಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ.

ಜಿಲ್ಲೆಯಲ್ಲಿ ಯುವ ಸಮುದಾಯದಲ್ಲಿ ಹೆಚ್ಚಿನ ಸೋಂಕು ಕಂಡುಬಂದಿದೆ. ಯುವಕ -ಯುವತಿಯರು ಹೆಚ್ಚು ಹೊರಗಡೆ ಓಡಾಡುತ್ತಿರುವುದರಿಂದ ಅವರಲ್ಲಿಯೇ ಸೋಂಕು ಹೆಚ್ಚಾಗುತ್ತಿದೆ. ಅವರ ಮೂಲಕ ಅವರ ಮನೆಯಲ್ಲಿನ ಅನೇಕರಿಗೆ ಕೂಡಾ ಸೋಂಕು ತಗಲುತ್ತಿದೆ. ಹೀಗಾಗಿ ಯುವ ಸಮುದಾಯ ಇನ್ನಷ್ಟು ಜಾಗೃತಿ ವಹಿಸಬೇಕಿದೆ. ಅನವಶ್ಯಕವಾಗಿ ಮನೆಯಿಂದ ಹೊರಬರಬಾರದು. ಬಂದರು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಶರಣಬಸಪ್ಪ ಗಣಜಲಖೇಡ ಹೇಳಿದ್ದಾರೆ.

ಇದನ್ನೂ ಓದಿ:

ಕೊರೊನಾ ಶಂಕಿತ ರೋಗಿಗಳಿಗೆ ಸಂಭಾವ್ಯ ಕೊವಿಡ್ ರೋಗಿಗಳು ಎಂದು ಪರಿಗಣಿಸಿ ಚಿಕಿತ್ಸೆ ನೀಡಲಿದೆ ಉತ್ತರ ಪ್ರದೇಶ ಸರ್ಕಾರ

ಪ್ರಧಾನಿಯಿಂದ ಕೊರೊನಾ ಸ್ಥಿತಿ ಪರಿಶೀಲನಾ ಸಭೆ; ಮತ್ತೆ ತ್ರಿಬಲ್​ ಟಿ ಸೂತ್ರ ನೆನಪಿಸಿದ ನರೇಂದ್ರ ಮೋದಿ, ಔಷಧ, ಆಕ್ಸಿಜನ್ ಕೊರತೆ ಬಗ್ಗೆ ಚರ್ಚೆ

(Coronavirus infection is more prevalent to youth in kalburgi)

Follow us on

Related Stories

Most Read Stories

Click on your DTH Provider to Add TV9 Kannada