ವಿಧಾನ ಪರಿಷತ್ ಚುನಾವಣೆ: ಕರ್ನಾಟಕದಲ್ಲಿ ಚುನಾವಣೆಯ 48 ಗಂಟೆ ಮುನ್ನ ಮದ್ಯ ಮಾರಾಟಕ್ಕೆ ಹೈಕೋರ್ಟ್ ಬ್ರೇಕ್
ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಮದ್ಯ ಮಾರಾಟಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಮತದಾನ, ಎಣಿಕೆಯ ದಿನ ಮಾತ್ರ ಮದ್ಯ ಮಾರಾಟ ನಿರ್ಬಂಧಿಸಿತ್ತು. ಈ ಬಗ್ಗೆ ಏಕಸದಸ್ಯ ಪೀಠ ಆದೇಶ ಹೊರಡಿಸಿತ್ತು. ಇದನ್ನು ರಾಜ್ಯ ಸರ್ಕಾರ ಪ್ರಶ್ನಿಸಿತ್ತು. ತದಾನ ಮುಕ್ತಾಯದ 48 ಗಂಟೆ ಮುನ್ನ ಮದ್ಯ ಮಾರಾಟ ನಿರ್ಬಂಧಿಸಬಹುದು ಎಂದು ಎಎಜಿ ಪ್ರತಿಮಾ ಹೊನ್ನಾಪುರ ಸರ್ಕಾರದ ಪರ ವಾದ ಮಂಡಿಸಿದರು.
ಬೆಂಗಳೂರು, ಫೆ.15: ವಿಧಾನ ಪರಿಷತ್ ಚುನಾವಣೆ (Karnataka Legislative Council Elections) ಹಿನ್ನೆಲೆ ಮದ್ಯ ಮಾರಾಟಕ್ಕೆ ಹೈಕೋರ್ಟ್ (Karnataka High Court) ವಿಭಾಗೀಯ ಪೀಠ ಬ್ರೇಕ್ ಹಾಕಿದೆ. ಮತದಾನ, ಎಣಿಕೆ ದಿನದಂದು ಮಾತ್ರ ಮದ್ಯ ಮಾರಾಟ ನಿರ್ಬಂಧ ಹೇರಿ ಹೊರಡಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದ್ದು, 48 ಗಂಟೆ ಮುನ್ನ ಮದ್ಯ ಮಾರಾಟ ನಿರ್ಬಂಧ ಮುಂದುವರಿಯಲಿದೆ ಎಂದು ಆದೇಶಿಸಿದೆ.
ಮತದಾನ ಮುಕ್ತಾಯದ 48 ಗಂಟೆ ಮುನ್ನ ಮದ್ಯ ಮಾರಾಟ ನಿರ್ಬಂಧಿಸಬಹುದು ಎಂದು ಸರ್ಕಾರದ ಹಕ್ಕು ಪ್ರತಿಪಾದಿಸಿ ಎಎಜಿ ಪ್ರತಿಮಾ ಹೊನ್ನಾಪುರ ವಾದ ಮಂಡಿಸಿದರು. ಆಹಾರ ಪೂರೈಕೆ ಹೊರತುಪಡಿಸಿ ಮದ್ಯ ಮಾರಾಟ ಮಾಡುವಂತಿಲ್ಲ. 48 ಗಂಟೆಗಳ ಮುನ್ನ ಮದ್ಯ ಮಾರಾಟ ನಿರ್ಬಂಧ ಪಾಲಿಸಬೇಕು ಎಂದು ವಿಭಾಗೀಯ ಪೀಠ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ 2024ರ ವಿಭಾಸಭಾ ಚುನಾವಣೆ ಫೆಬ್ರವರಿ 16 ರಂದು ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಗೂ ಒಂದು ದಿನ ಮುನ್ನ ಸೇರಿ ಒಟ್ಟು 48 ಗಂಟೆಗಳ ಕಾಲ ಬೆಂಗಳೂರು ನಗರದಲ್ಲಿ ಮದ್ಯ ಮಾರಾಟಕ್ಕೆ ನಿಷೇಧಿಸಿರುವುದಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಹೋಟೆಲ್‌ಗಳ ಸಂಘಟನೆ ಹೈಕೋರ್ಟ್ ಮೆಟ್ಟಿಲೇರಿತ್ತು. 48 ಗಂಟೆಗಳ ಅವಧಿಗೆ ಮದ್ಯ ಮಾರಾಟ ನಿಷೇಧ ಅನಗತ್ಯವೆಂದು ವಾದ ಮಂಡಿಸಲಾಗಿತ್ತು.
ಇದನ್ನೂ ಓದಿ; ಸರ್ಕಾರಿ ವಸತಿ ಶಾಲೆ, ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬ ಆಚರಣೆಗೆ ಬ್ರೇಕ್: ರಾಜ್ಯ ಸರ್ಕಾರದಿಂದ ಸುತ್ತೋಲೆ
ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ.ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ಹೈಕೋರ್ಟ್ ಪೀಠ, ಮತದಾನ, ಎಣಿಕೆ ದಿನದಂದು ಮಾತ್ರ ಮದ್ಯ ಮಾರಾಟ ನಿರ್ಬಂಧ ಹೇರಿ ಆದೇಶ ಹೊರಡಿಸಿತ್ತು. ಆಹಾರ ಪೂರೈಸಲು ರೆಸ್ಟೋರೆಂಟ್‌ಗಳಿಗೆ ಯಾವುದೇ ನಿರ್ಬಂಧವಿಲ್ಲ. ಮತದಾರರು ಶಿಕ್ಷಕರಾಗಿರುವುದರಿಂದ ಮದ್ಯಪಾನದ ನಿರ್ಬಂಧ ಪರಿಶೀಲನೆ ಮಾಡಲಾಗಿದೆ. ಮದ್ಯಪಾನ ನಿರ್ಬಂಧಿಸದಿದ್ದರೆ ಶಿಕ್ಷಕರು ಮದ್ಯ ಸೇವಿಸುತ್ತಾರೆಂದು ಭಾವಿಸಬೇಕಿಲ್ಲ. ಮುಕ್ತ, ನ್ಯಾಯಸಮ್ಮತ ಮತದಾನಕ್ಕೆ ಇಷ್ಟು ದಿನದ ನಿರ್ಬಂಧ ಅಗತ್ಯವಿಲ್ಲ ಎಂದು ಪೀಠ ಆದೇಶದಲ್ಲಿ ಹೇಳಿತ್ತು.
ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ ಫೆ.1 ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘಟನೆಯ ಕಾರ್ಯದರ್ಶಿ ವೀರೇಂದ್ರ ಎನ್.ಕಾಮತ್ ಸೇರಿದಂತೆ ಒಟ್ಟು ನಾಲ್ವರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ಪೀಠ ಈ ಅಭಿಪ್ರಾಯ ತಿಳಿಸಿತ್ತು. ಸದ್ಯ, ಈ ಆದೇಶಕ್ಕೆ ತಡೆ ನೀಡಿದ ವಿಭಾಗೀಯ ಪೀಠ, 48 ಗಂಟೆಗಳ ಮುನ್ನ ಮದ್ಯ ಮಾರಾಟ ನಿರ್ಬಂಧ ಪಾಲಿಸಬೇಕು ಎಂದು ಆದೇಶಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ