ಕೊಪ್ಪಳ, ಡಿಸೆಂಬರ್ 09: ಅದು ರಾಮನ ಭಂಟ ಹನುಮನ ಜನ್ಮಸ್ಥಳ. ಪೌರಾಣಿಕವಾಗಿ, ಐತಿಹಾಸಿಕವಾಗಿ ಮಹತ್ವ ಪಡೆದಿರುವ ಅಂಜನಾದ್ರಿಗೆ (Anjanadri hill) ಡಿಸೆಂಬರ್ 13 ರಂದು ಹನುಮ ಮಾಲೆ ವಿಸರ್ಜಿಸುವುದಕ್ಕೆ ದೇಶದ ವಿವಿಧ ಮೂಲೆಗಳಿಂದ ಸಾವಿರಾರು ಹನುಮ ಭಕ್ತರು ಆಗಮಿಸಲಿದ್ದಾರೆ. ಈ ಹಿನ್ನೆಲೆ ಸಿದ್ದತೆಗಳು ಜೋರಾಗಿ ನಡೆದಿವೆ. ಇದರ ಜೊತೆಗೆ ಸ್ವತಃ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಕೂಡ ಈ ವರ್ಷ ಹನುಮ ಮಾಲೆ ಧರಿಸಿ ವೃತ ಆರಂಭಿಸಿದ್ದಾರೆ.
ಜಿಲ್ಲೆಯ ಅಂಜನಾದ್ರಿ, ರಾಮನ ಭಂಟ ಹನುಮನ ಜನ್ಮಸ್ಥಳ ಅಂತಲೇ ನಂಬಲಾಗಿದೆ. ಅದಕ್ಕೆ ಅನೇಕ ಐತಿಹಾಸಿಕ ಸಾಕ್ಷಿಗಳು ಕೂಡ ಇವೆ. ಇನ್ನು ಸೀತಾ ಮಾತೆಯನ್ನು ಹುಡುಕಿಕೊಂಡು ಹೊರಟಿದ್ದ ಶ್ರೀರಾಮ, ಇದೇ ಅಂಜನಾದ್ರಿ ಮತ್ತು ಸುತ್ತಮುತ್ತಲಿನ ಸ್ಥಳವಾಗಿರುವ ಕಿಷ್ಕಿಂದೆಯಲ್ಲಿ ಅನೇಕ ತಿಂಗಳ ಕಾಲ ವಾಸವಾಗಿದ್ದರು. ಇದು ರಾಮಾಯಣದಲ್ಲಿ ಉಲ್ಲೇಖವಾಗಿದೆ.
ಅಂಜನಾದ್ರಿ ಬೆಟ್ಟದ ಮೇಲಿರುವ ಆಂಜನೇಯ ದೇವಸ್ಥಾನ, ಹನುಮ ಭಕ್ತರ ಆರಾಧ್ಯ ಕೇಂದ್ರವಾಗಿದೆ. ಹೀಗಾಗಿ ಪ್ರತಿದಿನ ಸಾವಿರಾರು ಭಕ್ತರು ಅಂಜನಾದ್ರಿಗೆ ಆಗಮಿಸುತ್ತಾರೆ. 575 ಮೆಟ್ಟಿಲುಗಳನ್ನು ಹತ್ತಿ ಆಂಜನೇಯನ ದರ್ಶನ ಪಡೆದು ಪುನಿತರಾಗುತ್ತಾರೆ. ಇನ್ನು ಪ್ರತಿವರ್ಷ ಹನುಮ ಮಾಲೆ ವಿಸರ್ಜನೆಗೆ ನಾಡಿನ ವಿವಿಧೆಡೆಯಿಂದ ಸಾವಿರಾರು ಹನುಮ ಭಕ್ತರು ಅಂಜನಾದ್ರಿಗೆ ಬರುತ್ತಾರೆ. ಮಾರ್ಗಶಿರ ಶುದ್ದ ತ್ರಯೋದಶಿ ಸಮಯದಲ್ಲಿ ಸಂಕಲ್ಪ ಮಾಡಿ ಮಾಲೆಯನ್ನು ಧರಿಸಿ ವೃತವನ್ನು ಆಚರಿಸಿದರೆ, ಇಷ್ಟಾರ್ಥಗಳು ಈಡೇರುತ್ತವೆ ಅನ್ನೋ ನಂಬಿಕೆ ಆಂಜನೇಯನ ಭಕ್ತರಲ್ಲಿದೆ. ಹೀಗಾಗಿ ಈಗಾಗಲೇ ಸಾವಿರಾರು ಹನುಮ ಭಕ್ತರು ಮಾಲೆ ಧರಿಸಿದ್ದಾರೆ. ಇಂದು ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಕೂಡ ಹನುಮ ಮಾಲೆ ಧರಿಸಿ, ಐದು ದಿನಗಳ ವೃತವನ್ನು ಆರಂಭಿಸಿದ್ದಾರೆ. ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿರುವ ಪಂಪಾ ಸರೋವರದಲ್ಲಿ ಹನುಮ ಮೂರ್ತಿಗೆ ಪೂಜೆ ಸಲ್ಲಿಸಿದ ಜನಾರ್ಧನ ರೆಡ್ಡಿ, ತಮ್ಮ ಬೆಂಬಲಿಗರ ಜೊತೆ ಹನುಮಮಾಲೆ ಧರಿಸಿದ್ದಾರೆ.
ಡಿಸೆಂಬರ್ 13 ರಂದು ಹನುಮ ಮಾಲೆ ವಿಸರ್ಜನೆಗೆ ಬೇಕಾದ ಸಿದ್ದತೆಗಳನ್ನು ಕೂಡ ಈಗಾಗಲೇ ಜಿಲ್ಲಾಡಳಿತ ಆರಂಭಿಸಿದೆ. ಮಲಾಧಾರಿಗಳು ಬಂದಾಗ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆ ಆರಂಭಿಸಿದೆ. ಇನ್ನು ಪ್ರತಿವರ್ಷ ಒಂದು ದಿನ ಮಾತ್ರ ಊಟದ ವ್ಯವಸ್ಥೆ ಮಾಡಲಾಗತ್ತಿತ್ತು. ಆದರೆ ಈ ವರ್ಷ ಡಿಸೆಂಬರ್ 11 ರಿಂದ 13 ರವರಗೆ ಅಂಜನಾದ್ರಿಯಲ್ಲಿ ಭಕ್ತರಿಗಾಗಿ ಊಟದ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ರಾಮ ಜಪ, ಹನುಮ ಜಪ ಕೇಳುವಂತಹ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಈ ಬಾರಿ ಕೂಡ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತಿದ್ದು, ರಾತ್ರಿ ಸಮಯದಲ್ಲಿ ಬಂಡೆಗಳ ನಡುವೆ ಅಂಜನಾದ್ರಿಯ ವೈಭವವನ್ನು ನೋಡುವುದು ಕಣ್ಣಿಗೆ ಹಬ್ಬದಂತೆ ಕಾಣಲಿದೆ.
ಇದನ್ನೂ ಓದಿ: ಐತಿಹಾಸಿಕ ಅಂಜನಾದ್ರಿ ಆಂಜನೇಯ ದೇವಸ್ಥಾನದ ಹುಂಡಿ ಎಣಿಕೆ; 22 ದಿನಗಳಲ್ಲಿ ಸಂಗ್ರಹವಾದ ಹಣವೆಷ್ಟು ಗೊತ್ತಾ?
ಒಂದಡೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿರುವ ಅಂಜನಾದ್ರಿಯ ಅಭಿವೃದ್ದಿಗೆ ಸರ್ಕಾರ ಹಣ ಕೂಡ ಬಿಡುಗಡೆ ಮಾಡಿದ್ದು, ಆದಷ್ಟು ಬೇಗನೆ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಬೇಕಿದೆ. ಇದರ ಜೊತೆಗೆ ಹನುಮ ಮಾಲಾಧಾರಿಗಳಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.