ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಆಗಬೇಕೆಂದ ಆದಿತ್ಯ ಠಾಕ್ರೆ: ಭುಗಿಲೆದ್ದ ಆಕ್ರೋಶ
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ಮಹಾರಾಷ್ಟ್ರ ಗಡಿ ವಿವಾದ ಕ್ಯಾತೆ ಮತ್ತೆ ಶುರು ಮಾಡಿದೆ. ಆದಿತ್ಯ ಠಾಕ್ರೆ ಅವರು ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಈ ವಿಚಾರವಾಗಿ ಸಚಿವ ತಂಗಡಗಿ ಮಾತನಾಡಿ, ಬೆಳಗಾವಿಯ ಸುದ್ದಿಗೆ ಮತ್ತೊಮ್ಮೆ ಬರದಂತೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು, ಡಿಸೆಂಬರ್ 09: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭಗೊಂಡಿದೆ. ಮೊದಲ ದಿನವೇ ಸದನದಲ್ಲಿ ಸದ್ದು ಗದ್ದಲ ಉಂಟಾಗಿದೆ. ಈ ನಡುವೆ ಮಹಾರಾಷ್ಟ್ರ (Maharashtra) ಮತ್ತೆ ಕ್ಯಾತೆ ಶುರು ಮಾಡಿದೆ. ಮಹಾರಾಷ್ಟ್ರ-ಕರ್ನಾಟಕ ಗಡಿ ಸಮಸ್ಯೆ ಮೊದಲಿನಿಂದಲೂ ಇದ್ದು, ಇದೀಗ ಮತ್ತೆ ಕಾವು ಪಡೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಆಗಬೇಕು ಎಂದು ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಸ್ಥಿತಿ ಚಿಂತಾಜನಕ ಎಂದ ಆದಿತ್ಯ ಠಾಕ್ರೆ
ಪುಣೆಯಲ್ಲಿ ಮಾತನಾಡಿರುವ ಅವರು, ಬೆಳಗಾವಿಯಲ್ಲಿ ಮರಾಠಿ ಭಾಷೆಯವರನ್ನು ತುಳಿಯಲಾಗುತ್ತಿದೆ. ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆರೋಪಿಸಿದ್ದಾರೆ. ಮಹಾರಾಷ್ಟ್ರ ನಾಯಕರನ್ನು ಕರ್ನಾಟಕ ಪ್ರವೇಶಕ್ಕೆ ಸರ್ಕಾರದಿಂದ ನಿರ್ಬಂಧಿಸಲಾಗಿದೆ ಎಂದಿದ್ದಾರೆ. ಮರಾಠಿ ಭಾಷಿಕರ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ನೀಡುವುದಾಗಿ ಹಿಂದಿನ ‘ಅಸಾಂವಿಧಾನಿಕ’ ಸಿಎಂ ಭರವಸೆ ಕೊಟ್ಟಿದ್ದರು. ಅಂದಿನ ಸಿಎಂ ನೀಡಿದ್ದ ಭರವಸೆ ಏನಾಯಿತು ಎಂದು ಪ್ರಶ್ನಿಸಿದ್ದಾರೆ.
ಆದಿತ್ಯ ಠಾಕ್ರೆಗೆ ತಂಗಡಗಿ ಎಚ್ಚರಿಕೆ
ಇನ್ನು ಈ ವಿಚಾರವಾಗಿ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ, ಬೆಳಗಾವಿಯನ್ನು ಕರ್ನಾಟಕದಿಂದ ಬೇರ್ಪಡಿಸುವ ಮಾತೇ ಇಲ್ಲ. ಬೆಳಗಾವಿ ಕರ್ನಾಟಕ ಕನ್ನಡಿಗರ ಆಸ್ತಿ. ಇದನ್ನ ಬಿಟ್ಟುಕೊಡುವ ಪ್ರಶ್ನೆ ಬರುವುದೇ ಇಲ್ಲ. ಇದೇ ರೀತಿ ಹೇಳಿಕೆಯನ್ನು ಪದೇ ಪದೇ ಕೊಟ್ಟರೆ ಕರ್ನಾಟಕ ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ. ರಾಜ್ಯ ಸರ್ಕಾರದ ಪರವಾಗಿ ಹೇಳುತ್ತಿದ್ದೇನೆ ಬೆಳಗಾವಿಯ ಸುದ್ದಿಗೆ ಮತ್ತೊಮ್ಮೆ ಬರಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನದ ವಿರುದ್ಧ ಪ್ರತಿಭಟನೆ: ಎಂಇಎಸ್ ಮುಖಂಡರು, ಕಾರ್ಯಕರ್ತರು ಪೊಲೀಸ್ ವಶಕ್ಕೆ
ಯಾವ ಕಾರಣಕ್ಕೆ ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂದು ಮಾಹಿತಿ ಇಲ್ಲ. ಮಾಜಿ ಸಚಿವ ಆದಿತ್ಯ ಠಾಕ್ರೆಗೆ ಸೂಕ್ತ ಮಾಹಿತಿ ಇಲ್ಲ ಅನಿಸುತ್ತೆ. ಬೆಳಗಾವಿಯಲ್ಲಿ ಕನ್ನಡಿಗರೇ ಅತಿ ಹೆಚ್ಚು ಇರುವುದು. ಬೆಳಗಾವಿಯಲ್ಲಿ ಸುವರ್ಣ ಸೌಧ ಕಟ್ಟಿಸಿ ಪ್ರತಿ ವರ್ಷ ಅಧಿವೇಶನವನ್ನು ಮಾಡುತ್ತೇವೆ. ಇವೆಲ್ಲವನ್ನ ನೋಡಿದರೂ ಕೂಡ ಮಾಹಿತಿ ಕೊರತೆಯಿಂದ ಈ ರೀತಿ ಹೇಳಿಕೆ ಕೊಟ್ಟಿರಬಹುದು. ಈ ಹಿಂದೆ ಕೂಡ ಮಹಾರಾಷ್ಟ್ರದ ಎಲ್ಲಾ ನಾಯಕರು ಈ ರೀತಿ ಹೇಳಿಕೆಗಳನ್ನು ಕೊಡುತ್ತಾ ಬಂದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬೆಳಗಾವಿ ತಂಟೆಗೆ ಬಂದರೆ ಹುಷಾರ್: ಲಕ್ಷಣ್ ಸವದಿ
ಟಿವಿ9ಗೆ ಶಾಸಕ ಲಕ್ಷಣ್ ಸವದಿ ಪ್ರತಿಕ್ರಿಯಿಸಿದ್ದು, ಮೊದಲು ಮುಂಬೈ ನಗರವನ್ನ ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡಿ. ಆ ಮೇಲೆ ಬೆಳಗಾವಿಯನ್ನ ಕೇಂದ್ರಾಡಳಿತ ಪ್ರದೇಶವೆಂದು ಘೋಷಣೆ ಮಾಡುವ ಬಗ್ಗೆ ಮಾತನಾಡೋಣ ಎಂದಿದ್ದಾರೆ.
ಹೆಸರು, ಪ್ರಚಾರಕ್ಕಾಗಿ ಆದಿತ್ಯ ಠಾಕ್ರೆ ಈ ರೀತಿ ಹೇಳಿಕೆಯನ್ನು ಕೊಟ್ಟಿದ್ದಾರೆ. ಬೆಳಗಾವಿ ನಮ್ಮದು ಎಂದು ಅವರು ಹೇಳುತ್ತಾರೆ, ಮುಂಬೈ ನಮ್ಮದು ಎಂದು ನಾವು ಹೇಳುತ್ತೇವೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಬ್ರಿಟಿಷರ ವಿರುದ್ಧ ಹೋರಾಡಿರುವ ಚೆನ್ನಮ್ಮ ನಾಡು ಬೆಳಗಾವಿ. ಬೆಳಗಾವಿ ತಂಟೆಗೆ ಬಂದರೆ ಹುಷಾರ್ ಎಂದು ನೂರು ಬಾರಿ ಹೇಳುತ್ತೇನೆ ಎಂದು ವಾಗ್ದಾಳಿ ಮಾಡಿದ್ದಾರೆ.
ಆದಿತ್ಯ ಠಾಕ್ರೆ ಒಬ್ಬ ಹುಚ್ಚ: ಆರ್ ಅಶೋಕ್
ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಆದಿತ್ಯ ಠಾಕ್ರೆ ಒಬ್ಬ ಹುಚ್ಚ. ಸೋಲಿನ ಹತಾಶೆಯಿಂದ ಹುಚ್ಚುಚ್ಚು ಹೇಳಿಕೆ ಕೊಟ್ಟಿದ್ದಾರೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಮಹಾರಾಷ್ಟ್ರ ಸೋಲನ್ನು ಮುಚ್ಚಿಕೊಳ್ಳಲು ಈ ರೀತಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:56 pm, Mon, 9 December 24