ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ಕೊವಿಡ್ನಿಂದಾಗಿ ಬಂದ್ ಮಾಡಲಾಗಿದ್ದ ಅಂಗನವಾಡಿ ಮರು ಆರಂಭಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತಂತೆ ಗ್ರಾಮ ಪಂಚಾಯತಿ ಮೂಲಕ ಅಂಗನವಾಡಿ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡುವಂತೆ ಮಾರ್ಗಸೂಚಿ ಹೊರಡಿಸಿದೆ.
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಕೊರೊನಾ ಟೆಸ್ಟ್ ಮಾಡಿಸುವುದು, ಅಂಗನವಾಡಿ ಕೇಂದ್ರದ ಆವರಣವನ್ನು, ಶೌಚಾಲಯ ಹಾಗೂ ಪೀಠೋಪಕರಣ ಸ್ವಚ್ಛಗೊಳಿಸುವುದು, 3-6 ವರ್ಷದ ಮಕ್ಕಳಿಗೆ ಮಧ್ಯಾಹ್ನ 12ರವರೆಗೆ ಚಟುವಟಿಕೆ, 3 ವರ್ಷದೊಳಗಿನ ಮಕ್ಕಳು, ಗರ್ಭಿಣಿ, ಬಾಣಂತಿಯರು ಅಂಗನವಾಡಿ ಒಳಗೆ ಭೇಟಿ ನೀಡದಂತೆ ನೋಡಿಕೊಳ್ಳುವುದು, ಕನಿಷ್ಠ 5 ಮಕ್ಕಳು ಹಾಜರಾಗುವಂತೆ ನೋಡಿಕೊಳ್ಳುವುದು, ಮಕ್ಕಳಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯ, ಹಾಗೂ ಎಲ್ಲ ಮಕ್ಕಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ರಾಜ್ಯ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಈ ಕುರಿತಂತೆ, ಮಕ್ಕಳು ದೈಹಿಕ ಅಂತರ ಪಾಲಿಸುವಂತೆ ನೋಡಿಕೊಳ್ಳವುದು, ಮಕ್ಕಳಲ್ಲಿ ಕೆಮ್ಮು, ಜ್ವರ, ಗಂಟಲು ನೋವಿನ ಲಕ್ಷಣ ಇದ್ದರೆ ಹತ್ತಿರದ ಸರ್ಕಾರಿ ವೈದ್ಯರಿಗೆ ತೋರಿಸುವುದು, ತಾಂತ್ರಿಕ ಸಲಹಾ ಸಮಿತಿ ಮಾರ್ಗಸೂಚಿ ಪರಿಶೀಲಿಸುವುದು ಈ ರೀತಿಯ ಕೆಲ ನಿಯಮಗಳ ಕುರಿತು ಸರ್ಕಾರ ಆದೇಶ ಹೊರಡಿಸಿದೆ.