
ಕೋಲಾರ: ಸಾಮಾನ್ಯವಾಗಿ ಒಂದು ಸೀಬೇ ಹಣ್ಣಿನ ತೂಕ ನೂರು ಗ್ರಾಂ ನಿಂದ 250 ಗ್ರಾಂ ವರೆಗೆ ತೂಗಿದರೆ ಹೆಚ್ಚು, ಆದರೆ ಈ ಸೀಬೆಹಣ್ಣಿನ ಕಥೆಯೇ ಬೇರೆ. ಇಲ್ಲಿ ಒಂದು ಸೀಬೆಹಣ್ಣು ಸಣ್ಣ ಸಣ್ಣ ಕುಂಬಳ ಕಾಯಿಯಂತೆ ಕಾಣುತ್ತದೆ. ತೂಕ ಕನಿಷ್ಠ ಅಂದರೆ 800 ಗ್ರಾಂ ನಿಂದ ಒಂದೂ ಕಾಲು ಕೆ.ಜಿ. ಬೆಳೆಯುತ್ತದೆ. ಇದು ಕೇಳುವುದಕ್ಕೆ ಆಶ್ಚರ್ಯವಾದರೂ ಇದೇ ಸತ್ಯ.
ಸೀಬೆ ಹಣ್ಣಿನಿಂದ ಲಕ್ಷ ಲಕ್ಷ ಸಂಪಾನೆ ಇದು ತೈವಾನ್ ಪಿಂಕ್ ಮೋಡಿ!
ಕೋಲಾರ ಅಂದರೆ ಬರಪೀಡಿತ ಜಿಲ್ಲೆ ಎನ್ನುವ ಮಾತಿದೆ. ಅದೇ ರೀತಿ ಇಲ್ಲಿನ ರೈತರು ಕೃಷಿ ಪ್ರಯೋಗಗಳನ್ನು ಮಾಡುವುದರಲ್ಲಿ ಅಷ್ಟೇ ಹೆಸರುವಾಸಿಯಾಗಿದ್ದಾರೆ. ಹೀಗಿರುವಾಗ ಕೋಲಾರ ಜಿಲ್ಲೆಯ ತೊಟ್ಲಿ ಗ್ರಾಮದ ಅಂಬರೀಶ್ ಎಂಬವವರು ಬರದ ನಾಡಿನಲ್ಲಿ ಹೊಸದೊಂದು ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.
ಕೋಲಾರದ ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವ ಬೆಳೆಗಳನ್ನು ಬೆಳೆಯುತ್ತಾ ತಮ್ಮ ಆದಾಯ ಗಳಿಕೆಯಲ್ಲಿ ಸಾಧನೆ ಮಾಡಿದ್ದು, ಅದರಂತೆ ತೊಟ್ಲಿ ಗ್ರಾಮದ ಅಂಬರೀಶ್ ಮೊದಲು ತಮ್ಮ ಭೂಮಿಯಲ್ಲಿ ರೇಷ್ಮೆ ಬೆಳೆಯುತ್ತಿದ್ದರು.
ಆದರೆ ಇತ್ತೀಚೆಗೆ ರೇಷ್ಮೆ ಬೆಲೆ ತೀವ್ರ ಕುಸಿತ ಕಂಡ ಹಿನ್ನೆಲೆ ಸ್ನೇಹಿತರೊಬ್ಬರ ಸಲಹೆ ಮೇರೆಗೆ ತಮ್ಮ ಒಂದೂವರೆ ಎಕರೆ ಭೂಮಿಯಲ್ಲಿ ತೈವಾನ್ ಪಿಂಕ್ ಮತ್ತು ತೈವಾನ್ ವೈಟ್ ಎನ್ನುವ ತಳಿ ಸೀಬೆಯನ್ನು ಬೆಳೆದಿದ್ದಾರೆ. ಅವರ ಶ್ರಮಕ್ಕೆ ಸಿಕ್ಕ ಪ್ರತಿಫಲವೆಂಬಂತೆ ನಿರೀಕ್ಷೆಗೂ ಮೀರಿ ಆದಾಯ ಬಂದಿದೆ.
ಕುಂಬಳಕಾಯಿ ಗಾತ್ರದ ಸೀಬೆಹಣ್ಣುಗಳು
ಒಂದು ಸೀಬೆಹಣ್ಣಿನ ತೂಕ 1 ಕೆ.ಜಿ:
ಒಂದು ಸೀಬೆಹಣ್ಣಿನ ತೂಕ 800 ಗ್ರಾಂ ನಿಂದ ಒಂದೂ ಕಾಲು ಕೆ.ಜಿ ತೂಕ ತೂಗುತ್ತದೆ. ಅದೇ ರೀತಿ 1 ಸೀಬೆ ಹಣ್ಣಿಗೆ ಬೆಲೆಯೂ ಅಷ್ಟೇ ಇದೆ. ಒಂದು ಸೀಬೆ ಹಣ್ಣಿಗೆ 80 ರಿಂದ 100 ರೂಪಾಯಿ ಸಿಗುತ್ತಿದೆ. ಈ ಸೀಬೆಹಣ್ಣಿಗೆ ಹೆಚ್ಚಾಗಿ ಮಾಲ್ಗಳು ಹಾಗೂ ಬೆಂಗಳೂರಿನಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಇದು ರೈತರಿಗೆ ಒಳ್ಳೆಯ ಆದಾಯದ ಮೂಲ ಎಂದು ಸೀಬೆ ಬೆಳೆದ ರೈತ ಅಂಬರೀಶ್ ಹೇಳಿದ್ದಾರೆ.
ಸೀಬೆಹಣ್ಣಿನ ಆರೈಕೆಯಲ್ಲಿ ನಿರತರಾಗಿರುವ ರೈತ ಅಂಬರೀಶ್
ಆಯಾಸವಿಲ್ಲದೆ ಬೆಳೆಯುವ ಬೆಳೆಗೆ ಲಕ್ಷ ಲಕ್ಷ ಆದಾಯ:
ಒಂದುವರೆ ಎಕರೆಯಲ್ಲಿ 1500 ಗಿಡಗಳನ್ನು ನಾಟಿ ಮಾಡಲಾಗಿದ್ದು, ಇದಕ್ಕೆ 2 ಲಕ್ಷ ರೂಪಾಯಿ ಖರ್ಚಾಗಿದೆ. ಗಿಡಗಳನ್ನು ನಾಟಿ ಮಾಡುವಾಗ ಕೊಟ್ಟಿಗೆಯ ಗೊಬ್ಬರವನ್ನೇ ಹಾಕಲಾಗಿದ್ದು, ಜೊತೆಗೆ ವಾರಕ್ಕೆ ಎರಡು ಬಾರಿ ನೀರು ಹಾಯಿಸುವುದು, ಗಿಡಗಳನ್ನು ಒಳ್ಳೆಯ ಆರೈಕೆ ಮಾಡುವುದನ್ನು ಹೊರತು ಪಡಿಸಿದರೆ ಹೆಚ್ಚು ಶ್ರಮವಿಲ್ಲದೆ ಅಧಿಕ ಆದಾಯ ಗಳಿಸುವುದಕ್ಕೆ ಈ ಸೀಬೆ ತಳಿ ಸಹಕಾರಿಯಾಗಿದೆ. ಒಮ್ಮೆ ಗಿಡಗಳನ್ನು ನಾಟಿ ಮಾಡಿದರೆ ವರ್ಷಕ್ಕೆ ಎರಡು ಫಸಲು ಕೊಡುತ್ತದೆ. ಅಷ್ಟೇ ಅಲ್ಲದೆ ಸುಮಾರು 8ರಿಂದ 9 ವರ್ಷಗಳ ಕಾಲ ಫಸಲು ಕೊಡುತ್ತದೆ.
ಸೀಬೆಹಣ್ಣಿನ ತೋಟದ ಚಿತ್ರಣ
ಇನ್ನು ಆರೋಗ್ಯದ ದೃಷ್ಟಿಯಿಂದಲೂ ಕೂಡ ಇದು ಹೆಚ್ಚು ಸಕ್ಕರೆ ಅಂಶವಿಲ್ಲದೆ ಆರೋಗ್ಯಕ್ಕೂ ಉತ್ತಮ ಎನ್ನುವ ಕಾರಣಕ್ಕೆ ತೈವಾನ್ ಪಿಂಕ್ ತಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಹಾಗಾಗಿ ಹಲವು ಬೇರೆ ಬೇರೆ ಬೆಳೆಗಳನ್ನು ಬೆಳೆದು ರೈತರು ಸಂಕಷ್ಟಕ್ಕೆ ಸಿಲುಕುವ ಬದಲು ಈ ರೀತಿಯ ದೀರ್ಘಕಾಲದ ಆದಾಯ ತರುವ ಬೆಳೆಗಳನ್ನು ಬೆಳೆಯುವುದು ಉತ್ತಮ ಎನ್ನುವುದು ರೈತ ಅಂಬರೀಶ್ ಅವರ ಅಭಿಪ್ರಾಯ.
ರೈತ ಅಂಬರೀಶ್
ಸೀಬೆ ತಿಂದವರಿಗೂ ಆರೋಗ್ಯ, ಬೆಳೆದರಿಗೂ ಲಾಭ!
ಸೀಬೆಹಣ್ಣು ಅದು ಬಡವರ ಸೇಬು ಎನ್ನುವ ಮಾತಿದೆ, ಆದರೆ ಉತ್ತಮ ಕೊಬ್ಬಿನಾಂಶ, ಹಲವು ವಿಟಮಿನ್ಗಳನ್ನು ಹೊಂದಿರುವ ಸೀಬೆ ನಿಜಕ್ಕೂ ಆರೋಗ್ಯದ ದೃಷ್ಟಿಯಿಂದಲೂ ಕೂಡ ಉಪಯುಕ್ತ, ಅಷ್ಟೇ ಏಕೆ ಅದನ್ನು ಬೆಳೆಯುವ ರೈತರಿಗೂ ಕೂಡ ಒಳ್ಳೆಯ ಆದಾಯದ ಮೂಲ ಅನ್ನುದರಲ್ಲಿ ಅನುಮಾನವಿಲ್ಲ.
ಆಪೂಸ್ ನಾಡಿಗೆ ಎಂಟ್ರಿ ಕೊಟ್ಟ ವಿಭಿನ್ನ ಹಣ್ಣು..; ಕೆಂಪುಬಣ್ಣದ ಪುಟ್ಟ ಹಣ್ಣಿನ ಕೃಷಿಯಿಂದ ಬದುಕು ಬಂಗಾರ