ಕರ್ನಾಟಕದ ದೇವಸ್ಥಾನಗಳ ಜೀರ್ಣೋದ್ದಾರ ಅನುದಾನ ತಡೆ ಹಿಡಿದ ಸರ್ಕಾರ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಎಲ್ಲಾ ಕಾಮಗಾರಿ ಹಾಗೂ ಅನುದಾನಕ್ಕೆ ತಡೆ ಹಿಡಿದಿದೆ. ಅಲ್ಲದೇ ಕೆಲ ಯೋಜನೆಗಳಲ್ಲಿ ಅಕ್ರಮ ಆರೋಪ ಕೇಳಿಬಂದಿದ್ದರಿಂದ ತನಿಖೆಗೆ ಆದೇಶಿಸಿದೆ. ಇದೀಗ ದೇವಸ್ಥಾನಗಳ ಜೀರ್ಣೋದ್ದಾರ ಅನುದಾನಕ್ಕೆ ರಾಜ್ಯ ಸರ್ಕಾರ ತಡೆ ಹಿಡಿದಿದೆ.
ಬೆಂಗಳೂರು, (ಆಗಸ್ಟ್ 18): ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸಿರುವ ಶಕ್ತಿ ಯೋಜನೆ (shakti yojana) ಭಾರೀ ಯಶಸ್ಸು ಕಂಡಿದೆ. ಈ ಮಹತ್ವದ ಯೋಜನೆಯಿಂದಾಗಿ ರಾಜ್ಯದ ದೇವಸ್ಥಾನಗಳಿಗೆ (Temples) ಅಪಾರ ಲಾಭ ತಂದುಕೊಟ್ಟಿದೆ. ಮುಜರಾಯಿ ಇಲಾಖೆಗೆ ಸೇರಿದ ಬಹುತೇಕ ದೇವಸ್ಥಾನಗಳಲ್ಲಿ ಕಾಣಿಕೆ ಹರಿವು ದುಪ್ಪಟ್ಟಾಗಿದೆ. ಆದ್ರೆ, ಇದೀಗ ದೇವಸ್ಥಾನಗಳ ಜೀರ್ಣೋದ್ದಾರ ಅನುದಾನಕ್ಕೆ ರಾಜ್ಯ ಸರ್ಕಾರ ತಡೆ ಹಿಡಿದಿದೆ. ಮೂರು ವಿಷಯ ಪ್ರಸ್ತಾಪಿಸಿ ದೇವಸ್ಥಾನ ಜೀರ್ಣೋದ್ಧಾರ ಅನುದಾನ ಬಿಡುಗಡೆಗೆ ತಡೆ ಹಿಡಿದು ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.
ದೇವಸ್ಥಾನ ಜೀರ್ಣೋದ್ದಾರ ಕಾಮಗಾರಿ ಇನ್ನೂ ಪ್ರಾರಂಭ ಆಗದಿದ್ದರೆ ಹಣ ಬಿಡುಗಡೆ ಮಾಡದಂತೆ ಧಾರ್ಮಿಕ ದತ್ತಿ ಇಲಾಖೆ ಆದೇಶದಲ್ಲಿ ಸೂಚಿಸಿದೆ. ಇನ್ನು ಶೇ.50 ರಷ್ಟು ಹಣ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರೆ ಅದನ್ನು ತಕ್ಷಣ ತಡೆ ಹಿಡಿದು ಅನುದಾನ ಬಿಡುಗಡೆ ಮಾಡದಂತೆ ಸೂಚನೆ ನೀಡಲಾಗಿದೆ. ಅನುದಾನದ ಆಡಳಿತಾತ್ಮಕ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಕೆ ಆಗಿದ್ದರೆ ಆಡಳಿತಾತ್ಮಕ ಮಂಜೂರಾತಿಯನ್ನು ತಡೆಹಿಡಿಯುವುದು. ಹೀಗೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಮೂರು ನಿರ್ದೇಶನಗಳನ್ನು ಎಲ್ಲಾ ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ. ಇದರಿಂದ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಪ್ರತಿಭಟನೆ ಎಚ್ಚರಿಕೆ ನೀಡಿದ ಮಾಜಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ
ದೇವಸ್ಥಾನಗಳ ಅನುದಾನ ಬಿಡುಗಡೆಗೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಬಹಳಷ್ಟು ಮಹತ್ವ ಇದೆ. ನಮ್ಮ ಸರ್ಕಾರದಲ್ಲಿ ದೇವಸ್ಥಾನಗಳ, ಮಂದಿರಗಳ ಜೀರ್ಣೋದ್ಧಾರಕ್ಕಾಗಿ ಅನುದಾನ ಬಿಡುಗಡೆ ಮಾಡಿದ್ದೆವು. ಚುನಾವಣಾ ನೀತಿ ಸಂಹಿತೆ ಬಂದಿದ್ದ ಕಾರಣ ಎರಡನೇ ಕಂತು ಬಿಡುಗಡೆ ಆಗಿರಲಿಲ್ಲ. ಅನುದಾನ ತಡೆ ಹಿಡಿದಿರುವುದನ್ನು ಖಂಡಿಸುತ್ತೇನೆ. ಇದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದರು.
ದೇವಸ್ಥಾನ ಅಂದಾಗ ಯಾವುದೇ ಪಕ್ಷಪಾತ ಅಥವಾ ಬೇರೆ ರೀತಿಯಿಂದ ನೋಡುವ ಕೆಲಸ ಸರ್ಕಾರದಿಂದ ಆಗಬಾರದು. ನಾವು ಮಂಜೂರಾತಿ ಮಾಡಿರುವುದನ್ನು ಬಿಡುಗಡೆ ಮಾಡುವುದು ಸರ್ಕಾರ ಮತ್ತು ಸಚಿವರ ಜವಾಬ್ದಾರಿ. ಈ ಆದೇಶವನ್ನು ಸರ್ಕಾರ ಹಿಂಪಡೆಯಬೇಕು. ರಾಜ್ಯದಲ್ಲಿರುವ ದೇವಾಲಯಗಳ ಜೀರ್ಣೋದ್ಧಾರ ಆಗಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಜರಾಯಿ ಇಲಾಖೆ ದೇವಸ್ಥಾನಗಳಿಗೆ ಹರಿದುಬಂದ ಕಾಣಿಕೆ
ಮುಜರಾಯಿ ಇಲಾಖೆಗೆ ಸೇರಿದ ಬಹುತೇಕ ದೇವಸ್ಥಾನಗಳಲ್ಲಿ ಕಾಣಿಕೆ ಹರಿವು ದುಪ್ಪಟ್ಟಾಗಿದೆ. 2022ರ ಜೂನ್ 11ರಿಂದ ಜುಲೈ 15ರವರೆಗೆ 58 ದೇವಾಲಯಗಳಲ್ಲಿ ಇ-ಹುಂಡಿಗಳ ಮೂಲಕ 19 ಕೋಟಿ ರೂ. ಸಂಗ್ರಹವಾಗಿತ್ತು. ಈ ವರ್ಷ ಬರೋಬ್ಬರಿ 24 ಕೋಟಿ 47 ಲಕ್ಷ ರೂಪಾಯಿ ಆದಾಯ ಬಂದಿದೆ.
ರಾಜ್ಯದ ಪ್ರಸಿದ್ಧ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಇ-ಹುಂಡಿಯಲ್ಲಿ ಈ ವರ್ಷ ಜೂನ್11 ರಿಂದ ಜುಲೈ 15 ವರೆಗೆ 11 ಕೋಟಿ 16 ಲಕ್ಷ ರೂ. ಸಂಗ್ರಹವಾಗಿದೆ. ಕಳೆದ ವರ್ಷ 11 ಕೋಟಿ 13 ಲಕ್ಷ ರೂ. ಸಂಗ್ರಹವಾಗಿತ್ತು. ಯಡಿಯೂರು ಸಿದ್ದಲಿಂಗೇಶ್ವರ ದೇಗುಲದ ಇ-ಹುಂಡಿಯಲ್ಲಿ ಈ ವರ್ಷ 1.48 ಕೋಟಿ ಸಂಗ್ರಹವಾಗಿದ್ರೆ, ಕಳೆದ ವರ್ಷ 1.20ಕೋಟಿ ರೂ. ಸಂಗ್ರಹವಾಗಿತ್ತು. ಇನ್ನೂ ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸನ್ನಿಧಿಯ ಇ -ಹುಂಡಿಯಲ್ಲಿ ಈ ವರ್ಷ 1.27 ಕೋಟಿ ರೂ. ಸಂಗ್ರಹವಾಗಿದ್ದು, ಕಳೆದ ವರ್ಷ 1 ಕೋಟಿ 5 ಲಕ್ಷ ರೂ. ಬಂದಿತ್ತು.
ಇನ್ನು ಬೆಂಗಳೂರಿನ ಬನಶಂಕರಿ ದೇಗುಲದಲ್ಲೂ ಈ ವರ್ಷ 83.64 ಲಕ್ಷ ರೂ. ಸಂಗ್ರಹವಾಗಿದ್ದು, ಕಳೆದ ವರ್ಷ 65.82 ಲಕ್ಷ ಸಂಗ್ರಹವಾಗಿತ್ತು. ಬಳ್ಳಾರಿಯ ಕನಕದುರ್ಗಮ್ಮ ದೇವಿ, ಕೊಪ್ಪಳದ ಹುಲಿಗೆಮ್ಮ, ಕನಕಪುರದ ಕಬ್ಬಾಳಮ್ಮ, ಶ್ರೀರಂಗಪಟ್ಟಣದ ನಿಮಿಷಾಂಬ, ಬೆಂಗಳೂರಿನ ಬನಶಂಕರಿ ದೇವಿ ಸೇರಿ ದೇವಿ ದೇವಾಲಯಗಳಿಗೆ ಭಕ್ತರ ದಂಡಿನ ಜೊತೆ ಕೋಟ್ಯಂತರ ರೂ. ಆದಾಯ ಬಂದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:48 am, Fri, 18 August 23