ಊರ ತುಂಬಾ ಕೊರೊನಾ ಸೋಂಕು ಇದ್ರೂ ಮಕ್ಕಳು ಬಚಾವಾಗ್ತಿರೋದು ಹೇಗೆ?

| Updated By: ರಾಜೇಶ್ ದುಗ್ಗುಮನೆ

Updated on: Jan 09, 2021 | 7:16 PM

ಮಕ್ಕಳಲ್ಲಿ ಸುಮಾರು 15 ವರ್ಷದವರೆಗೆ ಇರುವ ಥೈಮಸ್​ ಗ್ರಂಥಿ ಟಿ-ಲಿಂಪೋಸೈಟ್ಸ್​ ಎಂಬ ಅಂಶವನ್ನು ಉತ್ಪಾದಿಸುತ್ತದೆ. ಅದು ವೈರಸ್​ ವಿರುದ್ಧ ಹೋರಾಡಲು ಸಹಕರಿಸುವುದರಿಂದ ಕೊರೊನಾ ವೈರಾಣು ಮಕ್ಕಳ ದೇಹ ಪ್ರವೇಶಿಸುವ ಸಾಧ್ಯತೆ ಕಡಿಮೆ ಇರುತ್ತದೆ. ಅಂತೆಯೇ ಚಿಕ್ಕಮಕ್ಕಳಿಗೆ ಬಿಸಿಜಿ ಮತ್ತು ಎಂಎಂಆರ್​ ಲಸಿಕೆಗಳನ್ನು ನೀಡುವುದು ಸಹ ಸೋಂಕು ತಡೆಗಟ್ಟಲು ಕಾರಣವಿರಬಹುದು ಎಂಬ ಊಹೆ ಇದೆ.

ಊರ ತುಂಬಾ ಕೊರೊನಾ ಸೋಂಕು ಇದ್ರೂ ಮಕ್ಕಳು ಬಚಾವಾಗ್ತಿರೋದು ಹೇಗೆ?
ಸಾಂದರ್ಭಿಕ ಚಿತ್ರ
Follow us on

ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆಗೆ ದಿನಾಂಕ ನಿಗದಿಯಾಗಿದೆ. ಜನವರಿ 16ರಂದು ದೇಶಾದ್ಯಂತ ಲಸಿಕೆ ವಿತರಣೆ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ವೈದ್ಯರು, ಫ್ರಂಟ್​ಲೈನ್​ ವಾರಿಯರ್ಸ್​ ಲಸಿಕೆ ಪಡೆಯಲಿದ್ದಾರೆ. ನಂತರ 50 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಸಿಗಲಿದೆ. ಆದರೆ, ಸಾರ್ವಜನಿಕರೆಲ್ಲರಿಗೆ ಮುಕ್ತವಾಗಿ ಲಸಿಕೆ ಸಿಗುವುದು ಸದ್ಯಕ್ಕೆ ಕಷ್ಟದ ಮಾತು.

ಈ ನಡುವೆಯೇ ಶಾಲಾ, ಕಾಲೇಜುಗಳು ಆರಂಭವಾಗಿದ್ದು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಕರ್ನಾಟಕದಲ್ಲಿ ಶಾಲೆ ಆರಂಭವಾದ ಮೊದಲ ದಿನದಿಂದಲೇ ಶಿಕ್ಷಕರಿಗೆ ಸೋಂಕು ಎಂಬ ವರದಿಗಳು ಹರಿದಾಡಲು ಆರಂಭಿಸಿವೆ. ಆದರೆ, ಶಿಕ್ಷಕರನ್ನು ಅಟಕಾಯಿಸಿಕೊಳ್ಳುತ್ತಿರುವ ಸೋಂಕು ವಿದ್ಯಾರ್ಥಿಗಳಿಂದ ದೂರ ಉಳಿದಿರುವುದು ಹೇಗೆ? ಮನೆಯಲ್ಲಿ ಹಿರಿಯರಿಗೆ ಸೋಂಕು ತಗುಲಿದರೂ ಮಕ್ಕಳು ಅದು ಬಚಾವಾಗುತ್ತಿರುವುದು ಹೇಗೆ? ಒಟ್ಟಾರೆ ಅಂಕಿ ಅಂಶಗಳನ್ನು ಗಮನಿಸಿದಾಗ ಮಕ್ಕಳು ಸೋಂಕಿತರಾದ ಪ್ರಮಾಣ ಬಹಳ ಕಡಿಮೆ ಇದೆ. ಇದಕ್ಕೆ ಕಾರಣವೇನು ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಇನ್ನೂ ಉಳಿದಿದೆ.

ಕುತೂಹಲಕಾರಿ ಸಂಗತಿಯೆಂದರೆ ಮಕ್ಕಳಿಗೆ ಸೋಂಕು ತಗುಲದೇ ಇರುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಈ ಕುರಿತು ಟಿವಿ9 ಕನ್ನಡ ಡಿಜಿಟಲ್​ಗೆ ಮಾಹಿತಿ ನೀಡಿರುವ ಸಾಂಕ್ರಾಮಿಕ ರೋಗಗಳ ತಜ್ಞ ಡಾ.ಸುನಿಲ್​, ಮಕ್ಕಳಲ್ಲಿ ಎಸಿಇ-2 ಪ್ರೋಟೀನ್​ ಅಂಶ ಕಡಿಮೆ ಇರುತ್ತದೆ. ಆ ಕಾರಣದಿಂದಾಗಿ ಕೊರೊನಾ ವೈರಾಣು ದೇಹ ಪ್ರವೇಶಿಸುವುದು ಕಷ್ಟವಾಗುತ್ತದೆ. ಆದರೆ, ವಯಸ್ಕರಲ್ಲಿ ಈ ಪ್ರೋಟೀನ್​ ಅಂಶ ಹೆಚ್ಚಾಗಿರುವುದರಿಂದ ವೈರಾಣು ಸಲೀಸಾಗಿ ಹಬ್ಬುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ತಿಳಿಸಿದರು.

ಇದರೊಂದಿಗೆ ಮಕ್ಕಳಲ್ಲಿ ಸುಮಾರು 15 ವರ್ಷದವರೆಗೆ ಇರುವ ಥೈಮಸ್​ ಗ್ರಂಥಿ ಟಿ-ಲಿಂಪೋಸೈಟ್ಸ್​ ಎಂಬ ಅಂಶವನ್ನು ಉತ್ಪಾದಿಸುತ್ತದೆ. ಅದು ವೈರಸ್​ ವಿರುದ್ಧ ಹೋರಾಡಲು ಸಹಕರಿಸುವುದರಿಂದ ಕೊರೊನಾ ವೈರಾಣು ಮಕ್ಕಳ ದೇಹ ಪ್ರವೇಶಿಸುವ ಸಾಧ್ಯತೆ ಕಡಿಮೆ ಇರುತ್ತದೆ. ಅಂತೆಯೇ ಚಿಕ್ಕಮಕ್ಕಳಿಗೆ ಬಿಸಿಜಿ ಮತ್ತು ಎಂಎಂಆರ್​ ಲಸಿಕೆಗಳನ್ನು ನೀಡುವುದು ಸಹ ಸೋಂಕು ತಡೆಗಟ್ಟಲು ಕಾರಣವಿರಬಹುದು ಎಂಬ ಊಹೆ ಅನೇಕರಲ್ಲಿ ಇದೆ ಎಂದು ಮಾಹಿತಿ ನೀಡಿದರು.

ಈ ಎಲ್ಲಾ ಕಾರಣಗಳಿಂದಾಗಿ ಮಕ್ಕಳಲ್ಲಿ ಕೊರೊನಾ ಸೋಂಕು ಹರಡುವ ಪ್ರಮಾಣ ಕಡಿಮೆ ಆಗಿರುವ ಸಾಧ್ಯತೆ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಇನ್ನೊಂದೆಡೆ ಕೊರೊನಾ ಲಸಿಕೆ ಸಾರ್ವಜನಿಕರಿಗೆ ಲಭ್ಯವಾದ ನಂತರವೂ 12 ವರ್ಷದೊಳಗಿನ ಮಕ್ಕಳಿಗೆ ಅದನ್ನು ವಿತರಿಸುವ ಸಾಧ್ಯತೆ ತೀರಾ ಕಡಿಮೆ ಇದೆ. ಸೆರಮ್​ ಸಂಸ್ಥೆಯ ಕೊವಿಶೀಲ್ಡ್ ಲಸಿಕೆಯನ್ನು 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಬೇಕೆಂದು ಹಾಗೂ ಭಾರತ್​ ಬಯೋಟೆಕ್​ನ ಕೊವ್ಯಾಕ್ಸಿನ್ ಲಸಿಕೆಯನ್ನು 12 ವರ್ಷ ಮೇಲ್ಪಟ್ಟವರಿಗೆ ನೀಡಬೇಕೆಂದು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಮಾಹಿತಿ ನೀಡಿದೆ.

ಆಸ್ಪತ್ರೆಯಲ್ಲಿ ಅಗ್ನಿ ಅವಘಡಕ್ಕೆ 10 ಶಿಶುಗಳ ಮರಣ: ಮೋದಿ ಸಹಿತ ಹಲವು ನಾಯಕರ ಸಂತಾಪ, 5 ಲಕ್ಷ ರೂ. ಪರಿಹಾರ ಘೋಷಿಸಿದ ಮಹಾರಾಷ್ಟ್ರ ಸರ್ಕಾರ