ಬೆಂಗಳೂರು: ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದೊಂದನ್ನೇ ಈಡೇರಿಸುತ್ತಾ ಬರುತ್ತಿದೆ. ಅದರಂತೆ ಅನ್ನಭಾಗ್ಯ ಯೋಜನೆ(Anna Bhagya Scheme)ಜಾರಿಗೆ ಅಕ್ಕಿ ಇಲ್ಲವೆಂದು ದಿನಗಳನ್ನು ಮುಂದೂಡುತ್ತಾ ಬಂದಿತ್ತು. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತೆವೆಂದು ಹೇಳಿ ಮೋಸ ಮಾಡಿದ್ದಾರೆಂದು ಆರೋಪಿಸಿ ಪ್ರತಿಭಟನೆ ಕೂಡ ಮಾಡಿದ್ದರು. ಇದೀಗ ಅಕ್ಕಿ ಸಿಗದ ಕಾರಣ, ಅಕ್ಕಿ ಬದಲು ಹಣ ನೀಡಲು ಸರ್ಕಾರ ನಿರ್ಧಾರ ಮಾಡಿರುವ ವಿಚಾರ ಕುರಿತು ರಾಜ್ಯದೆಲ್ಲೆಡೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಈ ಕುರಿತು ಕುಂದಾನಗರಿ ಬೆಳಗಾವಿಯಲ್ಲಿ ಸಾರ್ವಜನಿಕರು ‘ನಮಗೆ ಹಣ ಬೇಡ, ಅಕ್ಕಿ ನೀಡಿ ಎನ್ನುತ್ತಾ ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಹಣ ನೀಡುವುದು ಒಳ್ಳೆ ನಿರ್ಧಾರವೆಂದಿದ್ದಾರೆ.
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಅಕ್ಕಿ ಬದಲು ಹಣ ನೀಡುವ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಹಣವನ್ನ ತಿನ್ನೋಕಾಗುತ್ತಾ? 170 ರೂ. ಒಂದು ದಿನದಲ್ಲಿ ಖರ್ಚಾಗುತ್ತೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಅಕ್ಕಿಗೆ 50 ರಿಂದ 70 ರೂಪಾಯಿವರೆಗೂ ಇದೆ. ಅಕ್ಕಿ ಬದಲು ಹಣ ನೀಡಿದ್ರೆ, ಸಾರಾಯಿ ಕುಡಿದು ಹಾಳು ಮಾಡುತ್ತಾರೆ. ಕೊಟ್ಟ ಮಾತಿನಂತೆ ತಲಾ 10ಕೆಜಿ ಅಕ್ಕಿ ನೀಡುವಂತೆ ಜನರ ಆಗ್ರಹಿಸಿದರೆ, ಮತ್ತೊಂದೆಡೆ ಏನೂ ಫ್ರೀ ಕೊಡೋದೇ ಬೇಡ,
ಮೊದಲು ಐದು ಕೆಜಿ ಅಕ್ಕಿ ನೀಡುತ್ತಿದ್ದರು ಅದು ಒಳ್ಳೆಯದಿತ್ತು. ಹೆಚ್ಚುವರಿ ಐದು ಕೆಜಿ ಅಕ್ಕಿ ಕೊಡುವ ಅವಶ್ಯಕತೆ ಇಲ್ಲ, ಜೊತೆಗೆ ಹಣ ನೀಡುವ ಅವಶ್ಯಕತೆಯೂ ಇಲ್ಲ ಎಂದೂ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮಂಗಳೂರು: ಒಂದು ವಿರೋಧಗಳು ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಮಂಗಳೂರಿನಲ್ಲಿ ಸರ್ಕಾರದ ನಿರ್ಧಾರಕ್ಕೆ ಫಲಾನುಭವಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಹಣ ನೀಡಿದ್ರೆ, ಅದೇ ಹಣದಲ್ಲಿ ಬೇರೆ ದಿನಸಿ ಖರೀದಿಸಬಹುದು. ಕರಾವಳಿಯಲ್ಲಿ ಹೆಚ್ಚಾಗಿ ಕುಚ್ಚಲಕ್ಕಿ ಬಳಕೆ ಮಾಡುತ್ತೇವೆ. ಈ ಹಣದಲ್ಲಿ ಸ್ವಲ್ಪ ಆದ್ರೂ, ಕುಚ್ಚಲಕ್ಕಿ ಖರೀದಿ ಮಾಡಬಹುದು. ಹೆಚ್ಚಿನವರು ಬಡತನದಲ್ಲಿ ಇರ್ತಾರೆ. ಈ ಹಣ ಬಡವರಿಗೆ ತುಂಬಾ ಸಹಾಯವಾಗುತ್ತೆ ಎಂದಿದ್ದಾರೆ.
ಮೈಸೂರು: ಇತ್ತ ಅಕ್ಕಿ ಬದಲು ಹಣ ನೀಡುವ ಸರ್ಕಾರದ ವಿಚಾರ ಕುರಿತು‘ ನಮಗೆ ಹಣ ಬೇಡ ಅಕ್ಕಿಯನ್ನೇ ಕೊಡಿ, ಹಣ ಇದ್ದರೆ ಖರ್ಚಾಗುತ್ತದೆ, ಅಕ್ಕಿ ಆದರೆ ಊಟ ಮಾಡಬಹುದು. ಹಣ ಇದ್ದರೆ ಮಕ್ಕಳು ಗಂಡ ಕಿತ್ತುಕೊಳ್ಳುತ್ತಾರೆ. ಜೊತೆಗೆ ಕುಡಿತ ಸೇರಿ ಬೇರೆ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ. ಅಕ್ಕಿ ಇದ್ದರೆ ಗಂಜಿಯನ್ನಾದರೂ ಮಾಡಿಕೊಂಡು ಕುಡಿಯಬಹುದು. ಅವರು ಕೊಡುವ ಹಣದಲ್ಲಿ ಅಕ್ಕಿ ಖರೀದಿಸಲು ಸಾಧ್ಯವಿಲ್ಲ. ತಡವಾದರೂ ಪರ್ವಾಗಿಲ್ಲ, ನಮಗೆ ಅಕ್ಕಿಯೇ ಬೇಕು ಎಂದು ಜನರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ