ಬೆಂಗಳೂರು: ಸಿದ್ದರಾಮಯ್ಯ, ನನ್ನ ಮಧ್ಯೆ ಶತ್ರುತ್ವ ಇದೆ ಎಂದು ಬಿಂಬಿಸೋದು ಸರಿಯಲ್ಲ. ಯಾರೋ ಬೇಕಂತಲೇ ಇದನ್ನು ಮಾಡ್ತಿದ್ದಾರೆ. ರಾಜ್ಯದಲ್ಲಿ ನಾನು, ಸಿದ್ದರಾಮಯ್ಯ ಚೆನ್ನಾಗಿದ್ರೆ ಕಾಂಗ್ರೆಸ್ ಬಲಿಷ್ಠವಾಗುತ್ತೆ. ನನ್ನ, ಅವರ ಅಭಿಪ್ರಾಯಗಳು ಬೇರೆ ಬೇರೆ ಇರಬಹುದು, ಅದನ್ನ ಸಿದ್ದರಾಮಯ್ಯ ಜತೆಗಿನ ಶತ್ರುತ್ವ ಎನ್ನಲು ಆಗಲ್ಲ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪರಮೇಶ್ವರ್, ರಾಜ್ಯ ರಾಜಕಾರಣದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಳಿ ಚರ್ಚೆ ಮಾಡಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ನೆಲೆ ಇದೆ, ಕಾಂಗ್ರೆಸ್ ಪಕ್ಷವನ್ನು ಕಟ್ಟಬೇಕೆಂಬ ಬಗ್ಗೆ ಚರ್ಚೆ ಮಾಡಿದ್ದೇನೆ. ಪ್ರತಿಪಕ್ಷ ಸ್ಥಾನದ ಬಗ್ಗೆಯೂ ನಾವು ಚರ್ಚೆ ಮಾಡಿದ್ದೇವೆ. ಡಿಸೆಂಬರ್ನಲ್ಲಿ ಚುನಾವಣೆ ಮಾಡ್ತಾರೆ ಎಂಬ ಮಾಹಿತಿ ಇದೆ ಈ ಬಗ್ಗೆಯೂ ಸೋನಿಯಾ ಗಾಂಧಿಗೆ ಬಳಿ ಮಾತನಾಡಿದ್ದೇನೆ ಎಂದರು.
ನಾನೇನೂ ಚಾಡಿ ಹೇಳಿಲ್ಲ, ಅದು ನನ್ನ ಜಾಯಮಾನ ಅಲ್ಲ:
ಸೋನಿಯಾ ಗಾಂಧಿ ಭೇಟಿಗೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಅಪಾಯಿಂಟ್ಮೆಂಟ್ ಸಿಗಲಿಲ್ಲ ಎನ್ನುವುದು ಸರಿಯಿಲ್ಲ. ನನಗೂ ಅನೇಕ ಬಾರಿ ಅಪಾಯಿಂಟ್ಮೆಂಟ್ ಸಿಕ್ಕಿಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಕಿಲ್ಲ ಎಂದರು. ಪಕ್ಷದಲ್ಲಿ ಮೂಲ ಮತ್ತು ವಲಸೆ ಕಾಂಗ್ರೆಸ್ಸಿಗರು ಎಂದು ಇಲ್ಲ, ನಮ್ಮ ಸಿದ್ಧಾಂತ ಒಪ್ಪಿ ಅವರು ನಮ್ಮ ಪಕ್ಷಕ್ಕೆ ಬಂದ ಮೇಲೆ ಅವರು ಹೊರಗಿನಿಂದ ಬಂದವರು ಎಂದು ಎನಿಸಿಕೊಳ್ಳಲ್ಲ. ನನಗೆ ಒಬ್ಬರ ಬಗ್ಗೆ ಚಾಡಿ ಹೇಳೋ ಅಭ್ಯಾಸ ಇಲ್ಲ. ಇದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಗೊತ್ತು ಅಂತ ಪರಮೇಶ್ವರ್ ಹೇಳಿದರು.
ಸಿಎಲ್ಪಿ ಸಭೆ ಇರೋದು ನನಗೆ ಗೊತ್ತಿರಲಿಲ್ಲ:
ಕಾಂಗ್ರೆಸ್ ಶಾಸಕಾಂಗ ಪಕ್ಷದ(ಸಿಎಲ್ಪಿ) ಸಭೆ ಇರೋದು ನನಗೆ ಗೊತ್ತಿರಲಿಲ್ಲ. ಮೊನ್ನೆ ನನಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕರೆ ಮಾಡಿ ಹೇಳಿದ್ರು. ಅದರೆ ನಾನು ದೆಹಲಿಯಲ್ಲಿದ್ದ ಕಾರಣ ಸಭೆಗೆ ಬರೋಕೆ ಆಗಲ್ಲ ಅಂತ ಹೇಳಿದ್ದೇನೆ. ಒಬ್ಬರನ್ನ ದೂರ ಇಟ್ಟು ಪಕ್ಷ ಕಟ್ತೀನಿ ಅಂದ್ರೆ ಆಗೋದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಶಕ್ತಿ ಇರುತ್ತೆ. ಸಾಮೂಹಿಕ ನಾಯಕತ್ವದಲ್ಲಿ ಕೆಲಸ ಮಾಡಬೇಕು ಅಂತ ಪರಮೇಶ್ವರ್ ಹೇಳಿದರು.
Published On - 3:38 pm, Thu, 19 September 19