ಗ್ಯಾರಂಟಿ ಯೋಜನೆಯಿಂದ ರಾಜ್ಯದ ಖಜಾನೆ ಖಾಲಿ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಸಿಎಂ ಸಿದ್ಧರಾಮಯ್ಯ ಹೇಳಿದ್ದಿಷ್ಟು

ಸ್ವಾರ್ಥಕ್ಕಾಗಿ ಘೋಷಿಸಿದ ಗ್ಯಾರಂಟಿ ಯೋಜನೆ ಜಾರಿಯಿಂದ ಕರ್ನಾಟಕ ಸರ್ಕಾರದ ಬಳಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದಂತಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ದೆಹಲಿಯಲ್ಲಿ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ಗ್ಯಾರಂಟಿ ಯೋಜನೆಯಿಂದ ರಾಜ್ಯದ ಖಜಾನೆ ಖಾಲಿ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಸಿಎಂ ಸಿದ್ಧರಾಮಯ್ಯ ಹೇಳಿದ್ದಿಷ್ಟು
ರಾಕೇಶ್ ಟಿಕಾಯತ್ ಹಾಗೂ ಡಾ.ಸುನಿಲಂ ಅವರೊಂದಿಗೆ ಸಿಎಂ ಸಿದ್ದರಾಮಯ್ಯ
Edited By:

Updated on: Aug 02, 2023 | 5:41 PM

ದೆಹಲಿ, ಆಗಸ್ಟ್​​ 02: ಕರ್ನಾಟಕದ ಉಚಿತ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಖಜಾನೆ ಬರಿದಾಗುವುದರೊಂದಿಗೆ ಅಭಿವೃದ್ದಿಗೆ ಹಣ ಇಲ್ಲದಂತಾಗಿದೆ ಎಂದು ಕಾಳಜಿ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದು ಸಿಎಂ ಸಿದ್ಧರಾಮಯ್ಯ (Siddaramaiah) ಹೇಳಿದ್ದಾರೆ. ಸ್ವಾರ್ಥಕ್ಕಾಗಿ ಘೋಷಿಸಿದ ಗ್ಯಾರಂಟಿ ಯೋಜನೆ ಜಾರಿಯಿಂದ ಕರ್ನಾಟಕ ಸರ್ಕಾರದ ಬಳಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂಬ ಪ್ರಧಾನಿ ಮೋದಿ ಟೀಕೆಗೆ ಅವರ ಪ್ರತಿಕ್ರಿಯಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರೇ, ಇದು ನಿಮ್ಮ ವೈಯಕ್ತಿಕ ಅಭಿಪ್ರಾಯವೇ, ಪ್ರಧಾನಿಯವರ ಅಭಿಪ್ರಾಯವೇ? ಇಲ್ಲವೆ ಪಕ್ಷದ ಅಭಿಪ್ರಾಯವೇ? ಎನ್ನುವುದನ್ನು ದಯವಿಟ್ಟು ಸ್ಪಷ್ಟಪಡಿಸಬೇಕೆಂದು ಎಂದಿದ್ದಾರೆ.

ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವುದಾದರೆ ನಿಮ್ಮ ಮತ್ತು ನಿಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿ. ಕರ್ನಾಟಕದ ಬಿಜೆಪಿ ನಾಯಕರಿಗೂ ನಮ್ಮ ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕವಾಗಿ ವಿರೋಧಿಸಲು ನಿರ್ದೇಶನ ನೀಡಿ. ಮುಂದಿನ ಲೋಕಸಭಾ ಚುನಾವಣೆಯನ್ನು ಗ್ಯಾರಂಟಿ ಯೋಜನೆಗಳ ವಿಷಯವನ್ನೇ ಮುಂದಿಟ್ಟುಕೊಂಡು ಎದುರಿಸಲು ನಾವು ಸಿದ್ಧರಿದ್ದೇವೆ, ನೀವು ಸಿದ್ಧರಿದ್ದರೆ ಹಾಗೆಂದು ಘೋಷಿಸಿಬಿಡಿ ಎಂದು ಹೇಳಿದರು.

ಇದನ್ನೂ ಓದಿ: ನನ್ನ ಹಿಂದೆ ಓಡಾಡಿದವರೆಲ್ಲಾ ಮಂತ್ರಿಯಾಗಿದ್ದಾರೆ, ಅವರಪ್ಪಂದಿರ ಜೊತೆ ಕೆಲಸ ಮಾಡಿದವ ನಾನು; ಬಸವರಾಜ ರಾಯರೆಡ್ಡಿ ಕಿಡಿ

ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ತಕ್ಷಣ ಜಾರಿಗೊಳಿಸಬೇಕೆಂದು ಕರ್ನಾಟಕದ ಬಿಜೆಪಿ ನಾಯಕರು ಒಂದೇ ಸಮನೆ ನಮ್ಮ ಬೆನ್ನು ಹತ್ತಿದ್ದಾರೆ. ಬಡವರಿಗೆ ನೀಡುವ ಹೆಚ್ಚುವರಿ ಅಕ್ಕಿಯಲ್ಲಿ ಒಂದು ಕಾಳು ಕಡಿಮೆಮಾಡಿದರೂ ಹೋರಾಟ ನಡೆಸುವುದಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಗುಡುಗುತ್ತಲೇ ಇದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಪ್ರಶ್ನಿಸಿದ್ದಾರೆ.

ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿ ಹಬ್ಬಗಳ ಸಮಯದಲ್ಲಿ ವರ್ಷಕ್ಕೆ ಮೂರು ಗ್ಯಾಸ್ ಸಿಲಿಂಡರ್ ಮತ್ತು ಬಿಪಿಎಲ್ ಕುಟುಂಬಗಳಿಗೆ ಅರ್ಧ ಲೀಟರ್ ನಂದಿನ ಹಾಲು ಉಚಿತವಾಗಿ ನೀಡುತ್ತೇವೆ ಎಂದು ಇತ್ತೀಚಿನ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಿಡುಗಡೆಗೊಳಿಸಿದ್ದ ಪ್ರಣಾಳಿಕೆಯಲ್ಲಿ ಕರ್ನಾಟಕದ ಬಿಜೆಪಿ ಭರವಸೆ ನೀಡಿತ್ತು. ಇದು ಫ್ರೀಬಿ, ರೇವ್ಡಿ ಯೋಜನೆಗಳಲ್ಲವೇ ಎಂದಿದ್ದಾರೆ.

ವಿಧಾನಸಭಾ ಚುನಾವಣೆ ಎದುರಿಸಲಿರುವ ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಹೆಣ್ಣುಮಕ್ಕಳ ಖಾತೆಗೆ ಮಾಸಿಕ 1000 ರೂಪಾಯಿ ಜಮೆ ಮಾಡುವ ಲಾಡ್ಲಿ-ಬೆಹನಾ ಯೋಜನೆಯ ಘೋಷಣೆ ಮಾಡಿದ್ದಾರೆ. ಇದನ್ನು 3000 ರೂಪಾಯಿಗೆ ಹೆಚ್ಚಿಸುವ ಭರವಸೆ ನೀಡಿದ್ದಾರೆ. ಇದು ಉಚಿತ ಯೋಜನೆ ಅಲ್ಲವೇ?

ಕೇಂದ್ರ ಸರ್ಕಾರದ್ದೇ ಯೋಜನೆಯಾಗಿರುವ ರೈತರ ಖಾತೆಗೆ ವಾರ್ಷಿಕ ಆರು ಸಾವಿರ ರೂಪಾಯಿಗಳನ್ನು ಜಮೆ ಮಾಡುವ ಕಿಸಾನ್ ಸಮ್ಮಾನ್ ಯೋಜನೆಯನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ? ನಾನು ಐದು ಕಿಲೋ ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡಿದರೆ ಅದರಿಂದ ರಾಜ್ಯದ ಖಜಾನೆ ಬರಿದಾಗಲಿದೆ ಎನ್ನುವುದು ನಿಮ್ಮ ಅಭಿಪ್ರಾಯವಾಗಿದ್ದರೆ, ಐದು ಕಿಲೋ ಅಕ್ಕಿಯನ್ನು ಉಚಿತವಾಗಿ ನೀಡುವ ಪಿಎಂ ಗರೀಬ್ ಅನ್ನ ಕಲ್ಯಾಣ ಯೋಜನೆಯನ್ನು ಯಾವ ಗುಂಪಿಗೆ ಸೇರಿಸುತ್ತೀರಿ?

ಇದನ್ನೂ ಓದಿ: ಎಐಸಿಸಿ ಹೈಕಮಾಂಡ್ ಮೀಟಿಂಗ್ ಹಿನ್ನೆಲೆ ದೆಹಲಿಗೆ ಹೊರಟ ಸಿಎಂ ಸಿದ್ದರಾಮಯ್ಯ

ಉಚಿತ ಸ್ವರೂಪದ ಎಂಟು ಯೋಜನೆಗಳನ್ನು ಕೇಂದ್ರ ಸರ್ಕಾರ ಅಂದಾಜು 1.25 ಲಕ್ಷ ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸುತ್ತಿದೆ. ಉಚಿತ ಯೋಜನೆಗಳನ್ನು ವಿರೋಧಿಸುತ್ತಿರುವ ನೀವು ಈ ಯೋಜನೆಗಳನ್ನು ಹೇಗೆ ಸಮರ್ಥಿಸುತ್ತೀರಿ ಎಂದು ಕಿಡಿಕಾರಿದ್ದಾರೆ.

ಡಬಲ್ ಎಂಜಿನ್ ಸರ್ಕಾರದ ಜನವಿರೋಧಿ ಆಡಳಿತದಿಂದ ಬೇಸತ್ತು ಹೋಗಿರುವ ಕರ್ನಾಟಕದ ಜನತೆ ನಮ್ಮ ಗ್ಯಾರಂಟಿ ಯೋಜನೆಗಳಿಗೆ ಜನಾದೇಶವನ್ನು ನೀಡಿ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ನುಡಿದಂತೆ ನಡೆಯುವ ಬದ್ಧತೆ ಹೊಂದಿರುವ ನಾವು ಕೊಟ್ಟ ಭಾಷೆಯನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ.

ಬೆಲೆ ಏರಿಕೆ ಮತ್ತು ನಿರುದ್ಯೋಗಗಳಿಂದಾಗಿ ವಿಪರೀತ ಆರ್ಥಿಕ ಒತ್ತಡಕ್ಕೆ ಸಿಕ್ಕಿ ಕೈಖಾಲಿ ಮಾಡಿಕೊಂಡಿರುವ ಜನಸಾಮಾನ್ಯರನ್ನು ಆರ್ಥಿಕ ಹೊರೆಯಿಂದ ಪಾರು ಮಾಡಲು, ಸಾಲದ ಶೂಲದಿಂದ ಕೆಳಗಿಳಿಸಲು ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಲು ಇಡೀ ದೇಶಕ್ಕೆ ಕರ್ನಾಟಕ ಮಾದರಿಯ ಆಡಳಿತದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Web contact

TV9 Kannada

Read More
Follow Us