ಕೋಲಾರ: ಜಿಲ್ಲೆಯ ಕೆಜಿಎಫ್ನ ಚಿನ್ನದ ಗಣಿ ಆಸ್ಪತ್ರೆ ಬಡವರ ಆಸ್ಪತ್ರೆ ಎಂದೇ ಹೆಸರುವಾಸಿ, ಈ ಆಸ್ಪತ್ರೆಗೆ ತನ್ನದೆ ಆದ ದೊಡ್ಡ ಇತಿಹಾಸ ಇದೆ, 1880 ರಲ್ಲಿ ಚಿನ್ನದ ಗಣಿ ಕಂಪನಿ ನಡೆಸಲು ಬಂದ ಬ್ರಿಟೀಷ್ ಅಧಿಕಾರಿ ಜಾನ್ ಟೆಲರ್ನಿಂದ ನಿರ್ಮಾಣವಾಗಿದ್ದ ಈ ಆಸ್ಪತ್ರೆ ಇಲ್ಲಿನ ಕಾರ್ಮಿಕರಿಗೆ ಸಂಜೀವಿನಿಯಾಗಿತ್ತು. ಆದರೆ ಕಳೆದ ಇಪ್ಪತ್ತು ವರ್ಷಗಳ ಹಿಂದೆ ಚಿನ್ನದ ಗಣಿಗೆ ಬೀಗ ಹಾಕಿದಾಗ ಈ ಆಸ್ಪತ್ರೆಗೆ ಕೂಡಾ ಬೀಗ ಹಾಕಲಾಗಿತ್ತು. ಅದರ ಪುನರಾರಂಭ ಮಾಡಬೇಕೆಂದು ಎಷ್ಟೇ ಪ್ರಯತ್ನ ಮಾಡಿದರೂ ಸಾಧ್ಯವಾಗಿರಲಿಲ್ಲ. ಆದರೆ ಈಗ ಕೊರೊನಾ ಸಂಕಷ್ಟದ ಕಾಲದಲ್ಲಿ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಸಂಸದ ಮುನಿಸ್ವಾಮಿ ಕೊವಿಡ್ ಆಸ್ಪತ್ರೆಯನ್ನಾಗಿ ಮಾಡಲು ಮತ್ತು ಅದನ್ನು ಪುನರಾರಂಭ ಮಾಡಲು ಅನುಮತಿ ಕೇಳಿದ್ದಾರೆ ಇದಕ್ಕೆ ಸಮ್ಮತಿ ಸೂಚಿಸಿದ್ದು, ಸದ್ಯ ಈ ಭಾಗದ ಜನರ ಸಂತೋಷಕ್ಕೆ ಕಾರಣವಾಗಿದೆ.
ಈ ಆಸ್ಪತ್ರೆಯ ಪುನರಾರಂಭಕ್ಕೆ ಅನುಮತಿ ನೀಡಿದ್ದೇ ತಡ, ಕೆಜಿಎಫ್ ಭಾಗದ ನೂರಾರು ಜನರು, ಬಿಜೆಪಿ ಕಾರ್ಯಕರ್ತರು ಹಾಗೂ ಯುವಕರು ಸ್ವಯಂ ಪ್ರೇರಿತರಾಗಿ ಪಾಳು ಬಂಗಲೆಯಂತಾಗಿದ್ದ ಆಸ್ಪತ್ರೆಯನ್ನು ಶುಚಿಗೊಳಿಸಿ ಸುಣ್ಣ ಬಣ್ಣ ಬಳಿದು ಆಸ್ಪತ್ರೆಯ ಚಿತ್ರಣವನ್ನೇ ಬದಲಿಸಿದ್ದಾರೆ.
ಕೆಲವೇ ದಿನಗಳಲ್ಲಿ ಜನರ ಸೇವೆಗೆ ಸಿದ್ಧವಾಗಲಿದೆ ಆಸ್ಪತ್ರೆ!
ಕೆಜಿಎಫ್ನಲ್ಲಿ ಕೊವಿಡ್ ಸೋಂಕಿರಿಗೆ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಅದರ ಜೊತೆಗೆ ಚಿನ್ನದ ಗಣಿ ಆಸ್ಪತ್ರೆಯನ್ನು ಸಿದ್ಧ ಮಾಡಿ ಕೊವಿಡ್ ಕೇರ್ ಸೆಂಟರ್ ಆಗಿ ಮಾಡುವ ಕೆಲಸ ನಡೆಯುತ್ತಿದೆ. ಆ ಕಾಲದಲ್ಲಿ 800 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದ ಈ ಆಸ್ಪತ್ರೆಯಲ್ಲಿ ಈಗ 200 ರಿಂದ 300 ಜನ ರೋಗಿಗಳಿಗೆ ಅನುಕೂಲವಾಗುವಷ್ಟು ಹಾಸಿಗೆ ವ್ಯವಸ್ಥೆ ಮಾಡಿ ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರ್ಧಾರಿಸಲಾಗಿದೆ.
ಇನ್ನು ಹತ್ತರಿಂದ ಹದಿನೈದು ದಿನಗಳಲ್ಲಿ ಇಡೀ ಆಸ್ಪತ್ರೆಯಲ್ಲಿ ಬಾಕಿ ಇರುವ ಕೆಲಸ ಕಾರ್ಯಗಳು ಮುಗಿಯುತ್ತವೆ. ಇದಾದ ನಂತರ ಈ ಆಸ್ಪತ್ರೆಗೆ ಬೇಕಾದ ವೈದ್ಯರು ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಿ ಆಸ್ಪತ್ರೆಯ ಕಾರ್ಯಾರಂಭ ಮಾಡವ ಸಾಧ್ಯತೆ ಇದೆ.
ಕೊರೊನಾ ಸಂಕಷ್ಟದ ಕಾಲದಲ್ಲಿ ಇಂಥಾದೊಂದು ಬೆಳವಣಿಗೆಯಿಂದ ಕೆಜಿಎಫ್ ಭಾಗದ ಜನರು ಸಂತಸಗೊಂಡಿದ್ದಾರೆ ಅಷ್ಟೇ ಅಲ್ಲ, ಇಂಥಾದೊಂದು ಅದ್ಭುತ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಒಂದು ಕಾಲದಲ್ಲಿ ಕಾರ್ಮಿಕರ ಪಾಲಿನ ಸಂಜೀವಿನಿಯಂತಿದ್ದ ಚಿನ್ನದ ಗಣಿ ಆಸ್ಪತ್ರೆಗೆ ಈಗ ಮತ್ತೆ ಹೊಸ ಜೀವಕಳೆ ಬಂದಿದ್ದು, ಇನ್ನು ಮುಂದೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂಜೀವಿನಿ ಆಸ್ಪತ್ರೆಯಾಗಲಿದೆ ಸಂತೋಷದ ವಿಷಯ.
ಇದನ್ನೂ ಓದಿ:
ಆಕ್ಸಿಜನ್ ಸಿಗದೆ ಕೊರೊನಾ ಸೋಂಕಿತ ವೃದ್ಧ ಸಾವು; ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯ ವಿರುದ್ಧ ಮೊಮ್ಮಗಳಿಂದ ಗಂಭೀರ ಆರೋಪ
ಆಕ್ಸಿಜನ್ ಸಿಗದೆ ಕೊರೊನಾ ಸೋಂಕಿತ ವೃದ್ಧ ಸಾವು; ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯ ವಿರುದ್ಧ ಮೊಮ್ಮಗಳಿಂದ ಗಂಭೀರ ಆರೋಪ