ಬೆಂಗಳೂರು: ‘ಕಾಳಿ’ ಸಾಕ್ಷ್ಯಚಿತ್ರದ ವಿವಾದಾತ್ಮಕ ಪೋಸ್ಟರ್‌ನಲ್ಲಿ (Kali Poster) ದೇವಿಯು ಧೂಮಪಾನ ಮಾಡುವ ಮತ್ತು ಎಲ್‌ಜಿಬಿಟಿಕ್ಯು ಧ್ವಜವನ್ನು (LGBTQ flag) ಹಿಡಿದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಬಿಜೆಪಿ ನಾಯಕ, ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಅವರು ಹಿಂದೂಗಳನ್ನು ಅವಮಾನಿಸುವವರನ್ನು ಗಲ್ಲಿಗೇರಿಸಬೇಕು ಅಥವಾ ಗುಂಡು ಹೊಡೆದು ಸಾಯಿಸಬೇಕು ಎಂದು ಮಂಗಳವಾರ ಹೇಳಿದ್ದಾರೆ. ಕಾಳಿ ದೇವಿಗೆ ಅವಮಾನ ಮಾಡಿರುವ ಸಿನಿಮಾ ನಿರ್ಮಾಪಕಿ ಲೀನಾ ಮಣಿಮೇಕಲೈ (Leena Manimekalai) ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಈಶ್ವರಪ್ಪ ಇದೇ ವೇಳೆ ಆಗ್ರಹಿಸಿದ್ದಾರೆ.
ಕಾಳಿ ಮಾತೆ ನಮ್ಮೆಲ್ಲರ ಪೂಜ್ಯತೆಯ ಕೇಂದ್ರ. ಮತ್ತು ಅವಳು ಸರ್ವಶಕ್ತಿಯೂ ಹೌದು. ಕಾಳಿ ಮಾತೆ ಭಾರತೀಯ ಸಂಸ್ಕೃತಿಯ ಪ್ರತಿನಿಧಿ. ಆದರೆ ಸಾಕ್ಷ್ಯ ಚಿತ್ರಕ್ಕಾಗಿ ವ್ಯಕ್ತಿಯೊಬ್ಬರು ಸಿಗರೇಟ್ ಸೇದುತ್ತಿರುವ ಕಾಳಿ ಮಾತೆಯ ಪೋಸ್ಟರ್ ಹಾಕಿದ್ದಾರೆ. ಇದ್ರಿಂದ ದೇಶಾದ್ಯಂತ ಇರುವ ಹಿಂದೂಗಳು ಕೋಪಗೊಂಡಿದ್ದಾರೆ ಎಂದು ಕರ್ನಾಟಕ ಬಿಜೆಪಿ ನಾಯಕ ಹೇಳಿದ್ದಾರೆ.
ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ವಿರುದ್ಧ ಕೆಲವು ಟೀಕೆಗಳನ್ನು ಮಾಡಿದಾಗ, ಪ್ರಪಂಚದಾದ್ಯಂತದ ಮುಸ್ಲಿಮರು ಅದರ ವಿರುದ್ಧ ಪ್ರತಿಭಟಿಸಿದರು. ಅದೇ ರೀತಿ ಹಿಂದೂಗಳು ಕೂಡ ಪ್ರತಿಭಟನೆ ಮಾಡುತ್ತಾರೆ. ನಮ್ಮ ದೇವ-ದೇವತೆಗಳಿಗೆ ಆಗುತ್ತಿರುವ ಅವಮಾನದ ವಿರುದ್ಧ ಧ್ವನಿ ಎತ್ತಬೇಕು ಎಂದು ಈಶ್ವರಪ್ಪ ಎಚ್ಚರಿಸಿದರು.
ಮಣಿಮೇಕಲೈ ಅವರು ತಮ್ಮ ಸಾಕ್ಷ್ಯಚಿತ್ರ ‘ಕಾಳಿ’ಯ ಪೋಸ್ಟರ್ ನಿಂದಾಗಿ ಭಾರಿ ಪ್ರತಿಭಟನೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಈ ಟೀಕೆಗಳಿಗೆ ಪ್ರತಿಕ್ರಿಯಿಸಿದ ಚಲನಚಿತ್ರ ನಿರ್ಮಾಪಕಿ ಲೀನಾ, ಅದಕ್ಕಾಗಿ ತಮ್ಮ ಜೀವನವನ್ನು ತೆರಲು ಸಹ ಸಿದ್ಧ ಎಂದಿದ್ದಾರೆ. “ನನಗೆ ಕಳೆದುಕೊಳ್ಳಲು ಏನೂ ಇಲ್ಲ, ನಾನು ಬದುಕುವವರೆಗೂ, ನಾನು ನಂಬಿದ್ದನ್ನು ನಿರ್ಭಯವಾಗಿ ಮಾತನಾಡುವ ಧ್ವನಿಶಕ್ತಿಯೊಂದಿಗೆ ಬದುಕಲು ಬಯಸುತ್ತೇನೆ. ಅದಕ್ಕೆ ನನ್ನ ಜೀವ ಬೇಕಾದರೂ ಕೊಡಲು ಸಿದ್ಧ ಎಂದು ಮಣಿಮೇಕಲೈ ಟ್ವೀಟ್ ಮಾಡಿ ಹೇಳಿದ್ದಾರೆ.
“ಒಂದು ಸಂಜೆ ಟೊರೊಂಟೊ ನಗರದ ಬೀದಿಗಳಲ್ಲಿ ಕಾಳಿಯು ವಿಹರಿಸುವಾಗ ನಡೆದ ಘಟನೆಗಳ ಕುರಿತಾದ ಪೋಸ್ಟರ್ ಚಿತ್ರ ಅದಾಗಿದೆ. ಯಾರಾದರೂ ಆ ಸಿನಿಮಾವನ್ನು ವೀಕ್ಷಿಸಿದರೆ, “ಲೀನಾ ಮಣಿಮೇಕಲೈಯನ್ನು ಬಂಧಿಸಿ” ಎನ್ನುವುದರ ಬದಲಿಗೆ “ಲವ್ ಯು ಲೀನಾ ಮಣಿಮೇಕಲೈ” ಎಂಬ ಹ್ಯಾಶ್‌ಟ್ಯಾಗ್ ಅನ್ನು ಹಾಕುತ್ತಾರೆ” ಎಂದೂ ನಿರ್ಮಾಪಕಿ ಲೀನಾ ಪ್ರತಿಕ್ರಿಯಿಸಿದ್ದಾರೆ.
ಏತನ್ಮಧ್ಯೆ, ಬಿಜೆಪಿ ನಾಯಕ ಶಿವಂ ಛಾಬ್ರಾ ಅವರು ‘ಕಾಳಿ’ ಯ ಪೋಸ್ಟರ್ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ವಕೀಲರಾದ ವಿನೀತ್ ಜಿಂದಾಲ್ ಕೂಡ ಲೀನಾ ವಿರುದ್ಧ ದೂರು ದಾಖಲಿಸಿದ್ದಾರೆ. ಜೊತೆಗೆ, ಸಾಕ್ಷ್ಯಚಿತ್ರದ ಆಕ್ಷೇಪಾರ್ಹ ಪೋಸ್ಟರ್ ಮತ್ತು ಕ್ಲಿಪ್ ಅನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ.