AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿದ್ದ ಆರೋಪಿ ಪತ್ತೆ: ಸಿಸಿಬಿ ವಿಚಾರಣೆ ವೇಳೆ ಸ್ಪೋಟಕ ಅಂಶ ಬಯಲು

ಪ್ರೊ. ಕೆ. ಮರುಳಸಿದ್ದಪ್ಪ, ಪ್ರೊ. ಎಸ್.ಜಿ. ಸಿದ್ದರಾಮಯ್ಯ,ಬಂಜಗೆರೆ ಜಯಪ್ರಕಾಶ್, ವಸುಂದರಾ ಭೂಪತಿ, ಕುಂ.ವೀರಭದ್ರಪ್ಪ ಸೇರಿದಂತೆ 15ಕ್ಕೂ ಹೆಚ್ಚು ಲೇಖಕರಿಗೆ ಒಂದು ವರ್ಷದಿಂದ ಬೆದರಿಕೆ ಪತ್ರಗಳು ಬಂದಿವೆ. ಈ ಎಲ್ಲಾ ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದಿದ್ದು, ದಾವಣಗೆರೆ ಮೂಲದ ವ್ಯಕ್ತಿ.

ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿದ್ದ ಆರೋಪಿ ಪತ್ತೆ: ಸಿಸಿಬಿ ವಿಚಾರಣೆ ವೇಳೆ ಸ್ಪೋಟಕ ಅಂಶ ಬಯಲು
ಸಿಸಿಬಿ
ಪ್ರಜ್ವಲ್ ಅಮೀನ್​, ಉಡುಪಿ
| Updated By: ವಿವೇಕ ಬಿರಾದಾರ|

Updated on:Sep 30, 2023 | 8:38 AM

Share

ಬೆಂಗಳೂರು ಸೆ.30: ಕೋಮುವಾದಿ, ಜಾತಿವಾದ ವಿರುದ್ಧದ ನಿಲುವುಳ್ಳ ಲೇಖಕರು, ಚಿಂತಕರು, ಸಾಹಿತಿಗಳಿಗೆ (Literature) ಬೆದರಿಕೆ ಪತ್ರಗಳನ್ನು ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೂವರೆ ವರ್ಷದ ಬಳಿಕ ಸಿಸಿಬಿ (CCB) ಪೊಲೀಸರು ಆರೋಪಿಯ ಸುಳಿವು ಪತ್ತೆ ಹಚ್ಚಿದ್ದಾರೆ. ದಾವಣಗೆರೆ ಮೂಲದ ಶಿವಾಜಿರಾವ್ ಎಂಬಾತನನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಶಿವಾಜಿರಾವ್ ಹಿಂದೂ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದು, ಸಿಸಿಬಿ ವಿಚಾರಣೆ ವೇಳೆ ಬೆದರಿಕೆ ಪತ್ರ ಬರೆದಿದ್ದು ಯಾಕೆ ಎಂಬುವುದನ್ನು ಬಾಯಿಬಿಟ್ಟಿದ್ದಾನೆ.

ಕೆಲ ಸಾಹಿತಿಗಳು ಹಿಂದೂ ಧರ್ಮದ ವಿರೋಧಿಗಳು ಹೀಗಾಗಿ ಬೆದರಿಕೆ ಪತ್ರ ಬರೆದೆ ಎಂದು ಶಿವಾಜಿರಾವ್ ಹೇಳಿದ್ದಾನೆ. ಸದ್ಯ ಸಿಸಿಬಿ ಪೊಲೀಸರು ಶಿವಾಜಿರಾವ್​ ಅವರ ಹಿನ್ನೆಲೆ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಶಿವಾಜಿರಾವ್​ ಇದುವರೆಗೂ ಏಳು ಪತ್ರಗಳನ್ನು ಬರೆದಿದ್ದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಸಿಸಿಬಿ ಪೊಲೀಸರು ಆರೋಪಿಯನ್ನ 10 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.

ಹಾಗಾದರೆ ಯಾವೆಲ್ಲ ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದಿದ್ದರು..?

  1. ಕುಂ.ವೀರಭದ್ರಪ್ಪ (ಕೊಟ್ಟೂರು ಪೊಲೀಸ್ ಠಾಣೆ- 2022)
  2. ಬಿ ಎಲ್ ವೇಣು – (ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆ-2022)
  3. ಬಂಜಗೇರಿ ಜಯಪ್ರಕಾಶ್ – (ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಕೇಸ್ 2022 ಹಾಗೂ 2023)
  4. ಬಿ.ಟಿ ಲಲಿತಾ ನಾಯಕ್ – (ಸಂಜಯನಗರ ಪೊಲೀಸ್ ಠಾಣೆ 2022)
  5. ವಸುಂಧರ ಭೂಪತಿ – (ಬಸವೇಶ್ವರ ನಗರ ಪೊಲೀಸ್ ಠಾಣೆ ಎರಡು ಕೇಸ್ 2022-2023)

ಪೊಲೀಸರು ಈ ಎಲ್ಲಾ ಬೆದರಿಕೆ ಪತ್ರಗಳನ್ನು ಎಫ್​ಎಸ್​ಎಲ್​ಗೆ ರವಾನೆ ಮಾಡಿದ್ದರು. ಎಫ್​ಎಸ್​ಎಲ್ ವರದಿಯಲ್ಲಿ ಎಲ್ಲಾ ಪತ್ರಗಳನ್ನು ಒಬ್ಬರೇ ಬರೆದಿರುವುದು ದೃಢವಾಗಿತ್ತು. ಹೀಗಾಗಿ 2023 ರ ಆಗಸ್ಟ್​​ನಲ್ಲಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು.

ಇದನ್ನೂ ಓದಿ: ಸಾಹಿತಿಗಳಿಗೆ ಬೆದರಿಕೆ ಪತ್ರ ಪ್ರಕರಣ: ತನಿಖೆ ವೇಳೆ ಮಹತ್ವದ ಅಂಶ ಬೆಳಕಿಗೆ, ಪತ್ರಗಳನ್ನ ಎಫ್ಎಸ್ಎಲ್​ಗೆ ರವಾನಿಸಿದ ಸಿಸಿಬಿ

ಗೃಹ ಸಚಿವರ ಗಮನಕ್ಕೆ ತಂದಿದ್ದ ಸಾಹಿತಿಗಳು

ಪ್ರೊ. ಕೆ. ಮರುಳಸಿದ್ದಪ್ಪ, ಪ್ರೊ. ಎಸ್.ಜಿ. ಸಿದ್ದರಾಮಯ್ಯ,ಬಂಜಗೆರೆ ಜಯಪ್ರಕಾಶ್, ವಸುಂದರಾ ಭೂಪತಿ, ಕುಂ.ವೀರಭದ್ರಪ್ಪ ಸೇರಿದಂತೆ 15ಕ್ಕೂ ಹೆಚ್ಚು ಲೇಖಕರಿಗೆ ಒಂದು ವರ್ಷದಿಂದ ಬೆದರಿಕೆ ಪತ್ರಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಬೆದರಿಕೆ ಪತ್ರ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಸಾಹಿತಿಗಳು ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರನ್ನು ಭೇಟಿಯಾಗಿ ಮಾಡಿದ್ದರು.

ಕೋಮುವಾದಿ ಗುಂಪಿನಿಂದಲೇ ಈ ಪತ್ರಗಳು ಬರುತ್ತಿವೆ. ಜಾತಿವಾದ, ಕೋಮುವಾದ ವಿರುದ್ಧ ಮಾತನಾಡಿದಾಗಲೆಲ್ಲ ನಿಮ್ಮನ್ನು ಮುಗಿಸಿ ಬಿಡುತ್ತೇವೆ ಎಂದು ಒಂದೇ ರೀತಿಯಲ್ಲಿ ಎಲ್ಲರಿಗೂ ಪತ್ರ ಬರುತ್ತಿವೆ. ಗೌರಿ ಲಂಕೇಶ್, ಎಂಎಂ ಕಲಬುರಗಿಯವರ ಹತ್ಯೆ ಮಾಡಿದ ಗುಂಪು ನಮ್ಮನ್ನು ಹತ್ಯೆ ಮಾಡಬಹುದು. ಅದಕ್ಕಾಗಿ ಸರ್ಕಾರದ ಗಮನಕ್ಕೆ ತರುತ್ತಿದ್ದೇವೆ ಎಂದು ಲೇಖಕ ಕೆ. ಮರುಳಸಿದ್ದಪ್ಪ ಮಾಹಿತಿ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:23 am, Sat, 30 September 23