ಖಾಸಗಿ ಬಸ್​​- ಕ್ರೂಸರ್​ ನಡುವೆ ಮುಖಾಮುಖಿ ಡಿಕ್ಕಿ: ಮೂವರು ಸಾವು, 8 ಮಂದಿ ಗಂಭೀರ

ಉಡುಪಿ, ರಾಯಚೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ರಸ್ತೆ ಅಪಘಾತಗಳು ವರದಿಯಾಗಿವೆ. ಉಡುಪಿಯಲ್ಲಿ ಬಸ್-ಕ್ರೂಸರ್ ಡಿಕ್ಕಿಯಲ್ಲಿ ಮೂವರು ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದಾರೆ. ರಾಯಚೂರಿನಲ್ಲಿ ಐದು ವರ್ಷದ ಬಾಲಕಿಯೊಬ್ಬಳು ಬಸ್ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದರೆ, ಕೋಲಾರದಲ್ಲಿ ಬೈಕ್‌ಗೆ ಆಟೋ ಡಿಕ್ಕಿ ಹೊಡೆದಿದೆ. ಈ ಘಟನೆಗಳು ರಸ್ತೆ ಸುರಕ್ಷತೆಯ ಕುರಿತು ಆತಂಕ ಮೂಡಿಸಿವೆ.

ಖಾಸಗಿ ಬಸ್​​- ಕ್ರೂಸರ್​ ನಡುವೆ ಮುಖಾಮುಖಿ ಡಿಕ್ಕಿ: ಮೂವರು ಸಾವು, 8 ಮಂದಿ ಗಂಭೀರ
ಬಸ್​​ ಮತ್ತು ಕ್ರೂಸರ್​​ ವಾಹನದ ನಡುವೆ ಅಪಘಾತ

Updated on: Jan 23, 2026 | 4:45 PM

ಉಡುಪಿ/ ರಾಯಚೂರು, ಜನವರಿ 23: ಖಾಸಗಿ ಬಸ್​​ ಮತ್ತು ಕ್ರೂಸರ್​ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟರೆ, 8 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯಾರು ಬಳಿಯ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ನಡೆದಿದೆ. ಗಾಯಗೊಂಡ ಪ್ರಯಾಣಿಕರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಘಾತದ ರಭಸಕ್ಕೆ ಕ್ರೂಸರ್​​ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಕಾರ್ಕಳ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

KKRTC ಬಸ್​ ಚಕ್ರಕ್ಕೆ ಸಿಲುಕಿ ಬಾಲಕಿ ಸಾವು

KKRTC ಬಸ್​ ಚಕ್ರಕ್ಕೆ ಸಿಲುಕಿ ಬಾಲಕಿಯೋರ್ವಳು ಮೃತಪಟ್ಟ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ನಡೆದಿದೆ. ದಿವ್ಯಾಶ್ರೀ ದೇವರಾಜ(5) ಮೃತ ಬಾಲಕಿಯಾಗಿದ್ದು, ರಸ್ತೆ ಪಕ್ಕದ ಮನೆ ಮುಂದೆ ಆಟವಾಡುವಾಗ ಬಸ್ ಹರಿದು ಅವಘಡ ಸಂಭವಿಸಿದೆ. ಗಬ್ಬೂರಿನಿಂದ ಗೂಗಲ್ ಗ್ರಾಮಕ್ಕೆ ಬಸ್​​ ತೆರಳುತ್ತಿತ್ತು ಎನ್ನಲಾಗಿದ್ದು, ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ದೇಗುಲಕ್ಕೆಂದು ಹೋದ ಬಾಲಕ ಕೆರೆಯಲ್ಲಿ ಹೆಣವಾಗಿ ಪತ್ತೆ; ಪ್ರಾಣಿ ದಾಳಿಯೋ? ಕೊಲೆಯೋ?

ಬೈಕ್​​ಗೆ ಹಿಂಬದಿಯಿಂದ ಆಟೋ ಡಿಕ್ಕಿ

ಕೋಲಾರ ನಗರದ ಬಂಗಾರಪೇಟೆ ವೃತ್ತದಲ್ಲಿ ಹಿಂಬದಿಯಿಂದ ಆಟೋ ಡಿಕ್ಕಿಯಾದ ಪರಿಣಾಮ ಬೈಕ್​​ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್ ಸವಾರನ ನಿರ್ಲಕ್ಷ್ಯ ಹಾಗೂ ಆಟೋ ಚಾಲಕನ ವೇಗವೇ ಘಟನೆಗೆ ಕಾರಣ ಎನ್ನಲಾಗಿದ್ದು, ಬೈಕ್​​ಗೆ ಆಟೋ ಗುದ್ದುವ ದೃಶ್ಯ ಅಂಬೇಡ್ಕರ್ ವೃತ್ತದಲ್ಲಿರುವ ಅಂಗಡಿಯೊಂದರ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬೈಕ್​​ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಕಸ್ಮಿಕ ಬೆಂಕಿಗೆ ಟಿಪ್ಪರ್ ಸುಟ್ಟು ಕರಕಲು

ಸುಟ್ಟು ಕರಕಲಾಗಿರುವ ಟಿಪ್ಪರ್​​

ತುಮಕೂರು ಜಿಲ್ಲೆ ತುರುವೇಕರೆ ಸಮೀಪದ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಗೆ ಟಿಪ್ಪರ್ ಲಾರಿ ಸುಟ್ಟು ಕರಕಲಾಗಿದೆ. ಗುಬ್ಬಿ ಕಡೆಯಿಂದ ತುರುವೇಕೆರೆಗೆ ಸಾಗುತ್ತಿದ್ದ ಟಿಪ್ಪರ್​​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ತುರುವೇಕೆರೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:41 pm, Fri, 23 January 26