AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳಾಧಿಕಾರಿಗೆ ಧಮ್ಕಿ: ಕಾಂಗ್ರೆಸ್ ನಾಯಕನಿಗೆ ಶಾಕ್ ಮೇಲೆ ಶಾಕ್, ಕೋರ್ಟ್​​ ಬಳಿಕ ಪಕ್ಷದಿಂದ ಶಾಸ್ತಿ

ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ನಗರಸಭೆ ಪಾರಾಯುಕ್ತೆ ಅಮೃತಾ ಅವರಿಗೆ ಕಾಂಗ್ರೆಸ್ ಮುಖಂಡ ಧಮ್ಕಿ ಹಾಕಿದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಸದ್ಯ ಪೊಲೀಸರಿಂದ ತಲೆಮರೆಸಿಕೊಂಡಿರುವ ರಾಜೀವ್ ಗೌಡಗೆ ಸಂಕಷ್ಟ ಮೇಲೆ ಸಂಕಷ್ಟು ಎದುರಾಗುತ್ತಿವೆ. ಕೇಸ್ ರದ್ದುಕೋರಿದ್ದ ರಾಜೀವ್​​​ಗೆ ಹೈಕೋಟ್ ಶಾಕ್ ಕೊಟ್ಟಿತ್ತು. ಇದೀಗ ಕಾಂಗ್ರೆಸ್ ಪಕ್ಷ ಸಹ ಬಿಗ್ ಶಾಕ್ ಕೊಟ್ಟಿದೆ.

ಮಹಿಳಾಧಿಕಾರಿಗೆ ಧಮ್ಕಿ: ಕಾಂಗ್ರೆಸ್ ನಾಯಕನಿಗೆ ಶಾಕ್ ಮೇಲೆ ಶಾಕ್, ಕೋರ್ಟ್​​ ಬಳಿಕ ಪಕ್ಷದಿಂದ ಶಾಸ್ತಿ
Rajeev Gowda
ಪ್ರಸನ್ನ ಗಾಂವ್ಕರ್​
| Edited By: |

Updated on: Jan 23, 2026 | 4:54 PM

Share

ಬೆಂಗಳೂರು/ಚಿಕ್ಕಬಳ್ಳಾಪುರ, (ಜನವರಿ 23): ಶಿಡ್ಲಘಟ್ಟ ನಗರಸಭೆ ಪಾರಾಯುಕ್ತೆ ಅಮೃತಾ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೀವ್ ಗೌಡನನ್ನು  (Rajeev Gowda)  ಕಾಂಗ್ರೆಸ್​​ (Congress) ಪಕ್ಷದಿಂದ ಅಮಾನತು ಮಾಡಿದೆ. ಇಂದು (ಜನವರಿ 23) ನಡೆದ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜೀವ್ ಗೌಡ ಶಿಡ್ಲಘಟ್ಟ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಬಂದಿರುವ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಪ್ರಕರಣದ ಗಂಭೀರತೆ ಮನವರಿಕೆಯಾದ ಹಿನ್ನಲೆಯಲ್ಲಿ ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯ ಶಿಫಾರಸ್ಸಿನ ಮೇರೆಗೆ ರಾಜೀವ್ ಗೌಡ ಅವರನ್ನು ಪಕ್ಷದಿಂದ ಸಸ್ಪೆಂಡ್ ಮಾಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಖಡಕ್ ಮಾತು

ಈ ಬಗ್ಗೆ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್ ಮಾತನಾಡಿದ್ದು, ಜನವರಿ 12ರಂದು ಸಂಜೆ ನಡೆದ ದೂರವಾಣಿ ಸಂಭಾಷಣೆಯಿಂದ ಅಧಿಕಾರಿಗಳಲ್ಲಿ ಆತಂಕ ಉಂಟಾಗಿತ್ತು. ಅವರು ದೂರು ಕೊಟ್ಟ ತಕ್ಷಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಅವರ ಮೇಲೆ ದೂರು ಕೂಡ ದಾಖಲಾಗಿದೆ. ಈಗ ಉತ್ತರ ಕೊಡದ ಕಾರಣ ಪಕ್ಷದಿಂದ ಅಮಾನತು ಮಾಡಲಾಗಿದೆ. ಅಧಿಕಾರಿಗಳ ಗೌರವ ಉಳಿಸುವ ಕಾರ್ಯ ನಾವು ಮಾಡಿದ್ದೇವೆ. ಅವರು ತಲೆ ಮರೆಸಿಕೊಂಡಿದ್ದಾರೆ. ಅವರನ್ನು ಬಂಧಿಸುವ ಕೆಲಸ ಆಗುತ್ತದೆ. ಮುನಿಯಪ್ಪ ಅವರಿಗೆ ಆತ್ಮೀಯತೆ ಇರಬಹುದು. ಆದ್ರೆ ಆಡಿಯೋ‌‌ ಕೇಳಿದ್ರೆ ನಾಗರಿಕ ಸಮಾಜ ಮೆಚ್ಚುವಂತದಲ್ಲ. ಆತ್ಮೀಯತೆ ಇದೆ ಎಂದರೆ ಅವರ ಪರವಾಗಿ ಮುನಿಯಪ್ಪ ಇದಾರೆ ಅಂತಲ್ಲ. ಸಿಎಂ, ಡಿಸಿಎಂ, ಗೃಹ ಸಚಿವರು ಸೂಚನೆ ಕೊಟ್ಟಿದ್ದಾರೆ. ಕೂಡಲೇ ಅವರನ್ನು ಬಂಧಿಸುವ ಕೆಲಸ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.

ಬ್ಯಾನರ್ ವಿಚಾರಕ್ಕೆ ಮಹಿಳಾ ಅಧಿಕಾರಿಗೆ ಕರೆ ಮಾಡಿ ಬಾಯಿಗೆ ಬಂದಂತೆ ಬೈದು ಧಮ್ಕಿ ಹಾಕಿದ್ದು, ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ಪ್ರಕರಣ ಇಟ್ಟುಕೊಂಡು ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಅಸ್ತ್ರವನ್ನಾಗಿ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ವಿರುದ್ಧ ಟೀಕೆಗಳನ್ನು ಮಾಡುತ್ತಿವೆ. ಹೀಗಾಗಿ ಪಕ್ಷಕ್ಕೆ ಮಜುಗರವಾಗಿರುವುದಿರಂದ ಕಾಂಗ್ರೆಸ್ ಈ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.

ಇದನ್ನೂ ಓದಿ: ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಕೇಸ್​: ರಾಜೀವ್​​ ಗೌಡಗೆ ಶಾಕ್​​ ಕೊಟ್ಟ ಹೈಕೋರ್ಟ್​​

ಅಮಾನತಿಗೆ ಶಿಫಾರಸ್ಸು ಮಾಡಿದ್ದ ಕಾರ್ಯಾಧ್ಯಕ್ಷ

ಪ್ರಕರಣ ನಡೆದ ಸಂಬಂಧ ಆರೋಪಿ ರಾಜೀವ್​ಗೌಡಗೆ ಕೆಪಿಸಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಆದ್ರೆ, ನೋಟಿಸ್​​ಗೆ ಯಾವುದೇ ಉತ್ತರ, ಪ್ರತಿಕ್ರಿಯೆ ನೀಡಿರಲಿಲ್ಲ. ಇದರ ಬೆನ್ನಲ್ಲೇ ರಾಜೀವ್ ಗೌಡನನ್ನು ಪಕ್ಷದಿಂದ ಅಮಾನತು ಮಾಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ಅವರು ನಿನ್ನೆ (ಜನವರಿ 22) ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷರಿಗೆ ಶಿಫಾರಸ್ಸು ಮಾಡಿದ್ದರು.

ರಾಜೀವ್ ಗೌಡ ಅವರ ನಡೆ ಮಾಧ್ಯಮಗಳಲ್ಲಿ ಪ್ರಚಾರಗೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ್ತು ರಾಜ್ಯ ಮಟ್ಟದ ನಾಯಕರಿಗೆ ತೀವ್ರ ಮುಜುಗರ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಸಿ. ಚಂದ್ರಶೇಖರ್ ಅವರು ಶಿಸ್ತು ಸಮಿತಿಗೆ ಪತ್ರ ಬರೆದಿದ್ದರು. ‘ಪಕ್ಷದ ಘನತೆಗೆ ಧಕ್ಕೆ ತಂದಿರುವ ರಾಜೀವ್ ಗೌಡ ಅವರನ್ನು ತಕ್ಷಣವೇ ಪಕ್ಷದಿಂದ ಅಮಾನತುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಇಂದಿನ ಸಭೆಯಲ್ಲಿ ರಾಜೀವ್ ಗೌಡನನನ್ನು ಪಕ್ಷದಿಂದ ಸಸ್ಪೆಂಡ್ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.

ಇದುವರೆಗೂ ರಾಜೀವ್ ಗೌಡನ ಬಂಧನವಾಗಿಲ್ಲ

ಬ್ಯಾನರ್ ತೆರವು ಮಾಡಿರುವ ಸಂಬಂಧ ರಾಜೀವ್ ಗೌಡ, ಶಿಡ್ಲಘಟ್ಟ ಮಹಿಳಾ ಪೌರಾಯುಕ್ತೆ ಅಮೃತಾ ಅವರಿಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಅಮೃತಾ ಅವರು ರಾಜೀವ್ ಗೌಡ ವಿರುದ್ಧ ದೂರು ದಾಖಲಿಸಿದ್ದು, ಈ ದೂರಿನ ಮೇರೆಗೆ ಪೊಲೀಸರು ಸಹ ಎಫ್​​ಐಆರ್ ದಾಖಲಿಸಿದ್ದಾರೆ. ಆದ್ರೆ, ಇದುವರೆಗೂ ರಾಜೀವ್ ಗೌಡನನ್ನು ಬಂಧಿಸಲು ಆಗಿಲ್ಲ. ಇನ್ನು ರಾಜೀವ್ ಗೌಡ ಎಲ್ಲಿದ್ದಾನೆ ಎನ್ನುವ ಸುಳಿವು ಸಹ ಸಿಕ್ಕಿಲ್ಲ. ಇನ್ನೊಂದೆಡೆ ಸಚಿವ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು ಬೇಕಂತಲೇ ರಾಜೀವ್ ಗೌಡನನ್ನು ಬಂಧಿಸುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ಹೈಕೋರ್ಟ್​​​ನಲ್ಲೂ ಅರ್ಜಿ ವಜಾ

ಇನ್ನು ತಮ್ಮ ವಿರುದ್ಧದ ಪ್ರಕರಣ ರದ್ದುಕೋರಿ ಅಜ್ಞಾತ ಸ್ಥಳದಿಂದಲೇ ರಾಜೀವ್ ಗೌಡ ಅವರು ಹೈಕೋರ್ಟ್​ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್​​ ಸಹ ರಾಜೀವ್​​​​ ಗೌಡನನ್ನು ತರಾಟೆಗೆ ತೆಗೆದುಕೊಂಡು ಅರ್ಜಿ ವಜಾ ಮಾಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.