ಬೆಂಗಳೂರು: ಮೂವರು ದುಷ್ಕರ್ಮಿಗಳು ಪೊಲೀಸರಂತೆ (Police) ನಟಿಸಿ ಪ್ರಯಾಣಿಕನ ಚಿನ್ನಾಭರಣ (Gold) ದರೋಡೆ (Theft) ಮಾಡಿರುವ ಘಟನೆ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ (Bengaluru-Mysore Expressway) ನಡೆದಿದೆ. ಕೊಡಗಿನ ವಿರಾಜಪೇಟೆ ತಾಲೂಕಿನ ಅರಪಟ್ಟು ನಿವಾಸಿ ಕೆಕೆ ಮುತ್ತಪ್ಪ ಅವರ 3.5 ಲಕ್ಷ ಮೌಲ್ಯದ ಚಿನ್ನದ ಸರವನ್ನು ಆರೋಪಿಗಳು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಕೆ ಮುತ್ತಪ್ಪ ಅವರು ಜೂನ್ 29 ರಂದು ಬೆಂಗಳೂರಿನಲ್ಲಿ ವೈದ್ಯರನ್ನು ಸಂಪರ್ಕಿಸಿ ನಂತರ ಅಂದು ರಾತ್ರಿಯೇ ವಿರಾಜಪೇಟೆಗೆ ಹಿಂತಿರುಗುತ್ತಿದ್ದರು. ಆಸ್ಪತ್ರೆಯಿಂದ ಹೊರಡುವಾಗಲೇ ಕತ್ತಲಾಗಿತ್ತು. ಹೀಗಾಗಿ ಬೆಂಗಳೂರಿನಲ್ಲಿ ರಾತ್ರಿ ಊಟ ಮಾಡಿಕೊಂಡು, ಎಕ್ಸ್‌ಪ್ರೆಸ್‌ವೇನಲ್ಲಿ ಪ್ರಯಾಣ ಆರಂಭಿಸಿದರು.
ಅದು ಜೂ. 30ರ ಮಧ್ಯರಾತ್ರಿ 2:30 ನಿಮಿಷ. ಪ್ರಯಾಣದ ವೇಳೆ ನಿದ್ದೆ ಬಂದ ಹಿನ್ನೆಲೆ ಮದ್ದೂರಿನ ಐಶ್ವರ್ಯ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನ ನಿರ್ಗಮನ ದ್ವಾರದಲ್ಲಿ ಕಾರು ನಿಲ್ಲಿಸಿ, ಕಾರಿನಲ್ಲಿಯೇ ನಿದ್ರೆಗೆ ಜಾರಿದರು. ಸ್ವಲ್ಪ ಸಮಯದ ನಂತರ ಓರ್ವ ಕಿಟಕಿ ಬಡಿದು ಎಬ್ಬಿಸಿ, ತಾನು ಪೊಲೀಸ್ ಅಧಿಕಾರಿ ಎಂದು ಹೇಳಿದನು. ನಂತರ ಕುಡಿದು ವಾಹನ ಚಲಾಯಿಸಿದ್ದಿ, ಪರಿಶೀಲಿಸಬೇಕು ಕೆಳಗೆ ಇಳಿ ಎಂದನು. ಇದಕ್ಕೆ ಮುತ್ತಪ್ಪ ಅವರು ಬಾಗಿಲು ತೆರೆದಾಗ ದುಷ್ಕರ್ಮಿ ಚಾಕು ತೋರಿಸಿ ಬೆದರಿಕೆ ಹಾಕಿದನು.
ಇದನ್ನೂ ಓದಿ: ಕೆಟ್ಟು ನಿಂತ ಕಾರು: ಚಾಲಕನ ಸಹಾಯಕ್ಕೆ ಹೋಗಿದ್ದ ಕಾನ್ಸ್ಟೇಬಲ್ ದುರಂತ ಅಂತ್ಯ
ಈ ವೇಳೆ ಮುತ್ತಪ್ಪ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಮತ್ತೊಂದು ಬದಿಯಲ್ಲಿ ನಿಂತಿದ್ದ ದುಷ್ಕರ್ಮಿ ಚಾಕು ತೋರಿಸಿದನು. ನಂತರ ಮುತ್ತಪ್ಪ ಅವರನ್ನು ಕಾರಿನಿಂದ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿ ಚಿನ್ನದ ಸರವನ್ನು ಕಸಿದುಕೊಂಡರು.
ನಂತರ ಮುತ್ತಪ್ಪ ಅವರನ್ನು ಅಲ್ಲಿಯೇ ಬಿಟ್ಟು ಪರಾರಿಯಾದರು. ಕೂಡಲೆ ಮುತ್ತಪ್ಪ ಅವರು 112 ತುರ್ತು ಸಂಖ್ಯೆಗೆ ಕರೆ ಮಾಡಿದರು. ಕೂಡಲೆ ಹೆದ್ದಾರಿ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಸ್ಥಳ ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಈ ಬಗ್ಗೆ ಮಂಡ್ಯ ಎಸ್ಪಿ ಯತೀಶ್ ಮಾತನಾಡಿ, ನಾಲ್ಕು ಹೆದ್ದಾರಿ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ ಮತ್ತು ಎಕ್ಸ್‌ಪ್ರೆಸ್‌ವೇಯಲ್ಲಿ ನಿಯಮಿತವಾಗಿ ಬೀಟ್‌ನಲ್ಲಿ ಹೋಗಲು ಪೊಲೀಸರಿಗೆ ಸೂಚಿಸಲಾಗಿದೆ. ನಿರ್ಜನ ಸ್ಥಳಗಳಲ್ಲಿ ನಿಲ್ಲದಿರುವಂತೆ ಪ್ರಯಾಣಿಕರಿಗೆ ಸೂಚಿಸಿದರು.
ಇನ್ನಷ್ಟು ಅಪರಾಧ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:43 am, Mon, 3 July 23