ಮೈಸೂರು: ಮಹಾಮಾರಿ ಕೊರೊನಾ ಮತ್ತಷ್ಟು ಬಲಿಷ್ಟವಾಗಿ ಮುನ್ನುಗ್ಗುತ್ತಿದೆ. ಸಾವಿನ ಸಂಖ್ಯೆ ಮತ್ತು ಸೋಂಕಿತರ ಸಂಖ್ಯೆಯಲ್ಲಿ ಒಟ್ಟು ಪ್ರಮಾಣ ಕಡಿಮೆಯಾಗುತ್ತಿಲ್ಲ. ಈಗ ಕೊರೊನಾ ಎರಡನೇ ಅಲೆ ಮೈಸೂರಿಗೆ ಶಾಪವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಮೇ ಒಂದೇ ತಿಂಗಳಲ್ಲಿ 320 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. 62,922 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಇದುವರೆಗೂ 1,640 ಸೋಂಕಿತರು ಮೃತಪಟ್ಟಿದ್ದಾರೆ. ಮೇ ತಿಂಗಳಲ್ಲೇ ಸಾವಿನ ಸಂಖ್ಯೆ ಸಹಾ ಅಧಿಕವಾಗಿದೆ. ಇನ್ನು ಜೂನ್ ತಿಂಗಳ ಮೊದಲ ದಿನವೇ 15 ಸೋಂಕಿಯರು ಕೊರೊನಾಗೆ ಬಲಿಯಾಗಿದ್ದಾರೆ. ಮೈಸೂರಿನಲ್ಲಿ ಸಂಭವಿಸುತ್ತಿರುವ ಸಾವಿನ ಸಂಖ್ಯೆಯಿಂದ ಆತಂಕ ಸೃಷ್ಟಿಯಾಗಿದೆ.
ಒಂದೇ ಕುಟುಂಬದ ಮೂವರು ಕೊವಿಡ್‌ಗೆ ಬಲಿ
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಣಗಲ್‌ನ ಗ್ರಾಮವೊಂದರಲ್ಲಿ ಒಂದೇ ಕುಟುಂಬದ ಮೂವರು ಕೊವಿಡ್‌ಗೆ ಬಲಿಯಾಗಿದ್ದಾರೆ. 5 ದಿನದ ಅಂತರದಲ್ಲಿ ಕೊವಿಡ್‌ನಿಂದ ತಂದೆ ಅಣ್ಣಯ್ಯ(75) ಮಗ ತಮ್ಮೇಗೌಡ(50), ಸೊಸೆ ಸುಮಾ(38) ಮೃತಪಟ್ಟಿದ್ದಾರೆ.
ನಾಲ್ಕು ದಿನದ ಹಿಂದೆ ಅಣ್ಣಯ್ಯರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಹೀಗಾಗಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು. ಆದರೆ ಅಣ್ಣಯ್ಯ ಮೊದಲು ಮೃತಪಟ್ಟಿದ್ದಾರೆ. ಇನ್ನು ತಮ್ಮೇಗೌಡ ಮತ್ತು ಸುಮ ಇಬ್ಬರೂ ಹಾಸನದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ದಂಪತಿ ಮೃತಪಟ್ಟಿದ್ದಾರೆ. ಸದ್ಯ ಮನೆಯಲ್ಲಿ 22 ವರ್ಷದ ಮಗಳು ಮತ್ತು 20 ವರ್ಷದ ಮಗ ಇದ್ದಾರೆ. ತಂದೆ-ತಾಯಿಯನ್ನು ಕಳೆದುಕೊಂಡು ಇಬ್ಬರು ಮಕ್ಕಳು ತಬ್ಬಲಿಗಳಾಗಿದ್ದಾರೆ.
ಇದನ್ನೂ ಓದಿ: ಭಾರತದ ಪಾಲಿಗೆ ಮೇ ತಿಂಗಳು ಕರಾಳ; ಕೊರೊನಾ ಸೋಂಕಿತರ ಪ್ರಮಾಣ ಹಾಗೂ ಸಾವು ಎರಡರಲ್ಲೂ ವಿಶ್ವ ದಾಖಲೆ