ಭಾರತದ ಪಾಲಿಗೆ ಮೇ ತಿಂಗಳು ಕರಾಳ; ಕೊರೊನಾ ಸೋಂಕಿತರ ಪ್ರಮಾಣ ಹಾಗೂ ಸಾವು ಎರಡರಲ್ಲೂ ವಿಶ್ವ ದಾಖಲೆ
ಮೇ ತಿಂಗಳಲ್ಲಿ ಭಾರತ 90.3 ಲಕ್ಷ ಕೊರೊನಾ ಪ್ರಕರಣಗಳನ್ನು ಹೊಸದಾಗಿ ದಾಖಲಿಸಿದೆ. ಇದು ಏಪ್ರಿಲ್ನಲ್ಲಿ ಭಾರತ ದಾಖಲಿಸಿಕೊಂಡ ಪ್ರಕರಣಗಳ ಪ್ರಮಾಣಕ್ಕಿಂತಲೂ ಶೇ.30ರಷ್ಟು ಹೆಚ್ಚಿದೆ. ಏಪ್ರಿಲ್ ತಿಂಗಳಲ್ಲಿ ದೇಶವು 69.4 ಲಕ್ಷ ಕೊರೊನಾ ಪ್ರಕರಣಗಳಿಗೆ ಸಾಕ್ಷಿಯಾಗಿತ್ತು.
ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಸೃಷ್ಟಿಸಿದ ಅವಾಂತರ ಅತ್ಯಂತ ಗಂಭೀರ ಹಾಗೂ ಅಪಾಯಕಾರಿ ಎನ್ನುವುದನ್ನು ಅಂಕಿ ಅಂಶಗಳು ಸಾಬೀತುಪಡಿಸಿವೆ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ತಿಂಗಳೊಂದರಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರು ಹಾಗೂ ಸೋಂಕಿತರ ಸಾವನ್ನು ಕಂಡ ದೇಶ ಎಂದು ಭಾರತ ಗುರುತಿಸಿಕೊಂಡಿದೆ. ಮೇ ತಿಂಗಳಲ್ಲಿ ಭಾರತದಲ್ಲಿ ಕೊರೊನಾ ಸೋಂಕು ಮಿತಿಮೀರಿ ವ್ಯಾಪಿಸಿದ ಪರಿಣಾಮ ವಿಶ್ವದಲ್ಲೇ ಯಾವ ದೇಶವೂ ಅನುಭವಿಸಿರದ ಆಘಾತವನ್ನು ಭಾರತ ಅನುಭವಿಸಿದೆ.
ಮೇ ತಿಂಗಳ ಕೊನೆಯ ದಿನದಂದು (ಮೇ 31) ದೇಶದಲ್ಲಿ 1.3ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗುವ ಮೂಲಕ ಏಪ್ರಿಲ್ 9ರಿಂದ ಇಲ್ಲಿಯ ತನಕದ 54 ದಿನಗಳಲ್ಲಿ ಹೊಸ ಸೋಂಕಿತರ ಸಂಖ್ಯೆ ಕಡಿಮೆ ದಾಖಲಾಗಿದೆ ಹಾಗೂ ಸಾವಿನ ಸಂಖ್ಯೆಯೂ ಏಪ್ರಿಲ್ 22 ರ ನಂತರದಲ್ಲಿ ಮೊದಲ ಬಾರಿಗೆ ಕಡಿಮೆ ದಾಖಲಾಗಿದೆ. ತಿಂಗಳದ ಕೊನೆ ದಿನದ ಈ ಲೆಕ್ಕಾಚಾರ ಕೊಂಚ ಸಮಾಧಾನಕರ ಸಂಗತಿಯಾದರೂ ಇಡೀ ತಿಂಗಳ ಒಟ್ಟು ಅಂಕಿ ಅಂಶಗಳನ್ನು ಗಮನಿಸಿದರೆ ಗಂಭೀರತೆಯ ದರ್ಶನವಾಗುತ್ತದೆ.
ಮೇ ತಿಂಗಳಲ್ಲಿ ಭಾರತ 90.3 ಲಕ್ಷ ಕೊರೊನಾ ಪ್ರಕರಣಗಳನ್ನು ಹೊಸದಾಗಿ ದಾಖಲಿಸಿದೆ. ಇದು ಏಪ್ರಿಲ್ನಲ್ಲಿ ಭಾರತ ದಾಖಲಿಸಿಕೊಂಡ ಪ್ರಕರಣಗಳ ಪ್ರಮಾಣಕ್ಕಿಂತಲೂ ಶೇ.30ರಷ್ಟು ಹೆಚ್ಚಿದೆ. ಏಪ್ರಿಲ್ ತಿಂಗಳಲ್ಲಿ ದೇಶವು 69.4 ಲಕ್ಷ ಕೊರೊನಾ ಪ್ರಕರಣಗಳಿಗೆ ಸಾಕ್ಷಿಯಾಗಿತ್ತು. ಇದಕ್ಕೂ ಮುನ್ನ 2020ರ ಡಿಸೆಂಬರ್ನಲ್ಲಿ ಅಮೆರಿಕಾ 65.3 ಲಕ್ಷ ಕೊರೊನಾ ಪ್ರಕರಣಗಳನ್ನು ದಾಖಲಿಸಿದ್ದೇ ಆವರೆಗೆ ದೇಶವೊಂದು ತಿಂಗಳಲ್ಲಿ ದಾಖಲಿಸಿದ ಅತಿ ಹೆಚ್ಚು ಪ್ರಕರಣಗಳಾಗಿತ್ತು.
ಇತ್ತ ಕೊರೊನಾ ಸೋಂಕಿತರ ಸಾವಿನ ಪ್ರಮಾಣದಲ್ಲೂ ಭಾರತದ ಪಾಲಿಗೆ ಮೇ ತಿಂಗಳು ದುಬಾರಿಯಾಗಿದ್ದು, ಸುಮಾರು 1.2ಲಕ್ಷ ಸೋಂಕಿತರು ಉಸಿರು ಚೆಲ್ಲಿದ್ದಾರೆ. ಏಪ್ರಿಲ್ ತಿಂಗಳಲ್ಲಿ 48,768 ಸೋಂಕಿತರು ಸಾವಿಗೀಡಾಗಿದ್ದು ಮೇ ತಿಂಗಳು ಅದಕ್ಕಿಂತ 2.5 ಪಟ್ಟು ಹೆಚ್ಚು ಸಾವಿಗೆ ಸಾಕ್ಷಿಯಾಗಿದೆ. ತಜ್ಞರ ಪ್ರಕಾರ ಅಂಕಿ ಅಂಶಗಳಿಗೆ ಸಿಕ್ಕಿರುವ ಸಾವಿಗಿಂತಲೂ ವಾಸ್ತವವಾಗಿ ಹೆಚ್ಚು ಸೋಂಕಿತರು ಸಾವಿಗೀಡಾಗಿರುವ ಸಾಧ್ಯತೆ ಇರುವುದರಿಂದ ಅಸಲಿ ಸಂಖ್ಯೆ ಇದಕ್ಕಿಂತ ಹೆಚ್ಚಿದೆ ಎಂದಿದ್ದಾರೆ.
ಇದಕ್ಕೂ ಮುನ್ನ ಜನವರಿಯಲ್ಲಿ ಅಮೆರಿಕಾ ದೇಶದಲ್ಲಿ ದಾಖಲಾದ 99,690 ಸೋಂಕಿತರ ಸಾವು ಈವರೆಗೆ ದೇಶವೊಂದು ತಿಂಗಳಲ್ಲಿ ಕಂಡ ಅತಿ ಹೆಚ್ಚು ಸಾವಿನ ಪ್ರಮಾಣವಾಗಿತ್ತು. ಆದರೆ, ಈಗ ಭಾರತವು ಎಲ್ಲಾ ಅಂಕಿ ಅಂಶಗಳನ್ನೂ ಮೀರಿಸಿ ಸಾವು ಹಾಗೂ ಸೋಂಕಿತರ ಪ್ರಮಾಣ ಎರಡರಲ್ಲೂ ದಾಖಲೆ ನಿರ್ಮಿಸಿದ್ದು, ಎರಡನೇ ಅಲೆ ದೇಶವನ್ನು ಎಷ್ಟು ಗಂಭೀರವಾಗಿ ಕಾಡಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ಭಾರತೀಯ ರೂಪಾಂತರಿ ಎನ್ನುವುದು ಅಸಮಂಜಸ; ಹೊಸ ಮಾದರಿಗೆ ಡೆಲ್ಟಾ ರೂಪಾಂತರಿ ಎಂದು ನಾಮಕರಣ ಮಾಡಿದ ವಿಶ್ವ ಆರೋಗ್ಯ ಸಂಸ್ಥೆ
ಕೊರೊನಾ ವೈರಾಣು ಕೃತಕವಾಗಿ ಸೃಷ್ಟಿಯಾಗಿದೆ ಎನ್ನಲು ಪುರಾವೆಗಳಿಲ್ಲ: ಐಸಿಎಂಆರ್ ಮಾಜಿ ಮುಖ್ಯ ವಿಜ್ಞಾನಿ
Published On - 9:18 am, Tue, 1 June 21