ಆಂಧ್ರದಲ್ಲಿ ಆರೋಗ್ಯ ಕ್ಷೇತ್ರ ಬಲವರ್ಧನೆ ಕ್ರಮ; ಶೀಘ್ರದಲ್ಲೇ 14 ಮೆಡಿಕಲ್ ಕಾಲೇಜುಗಳ ನಿರ್ಮಾಣ, 7880 ಕೋಟಿ ರೂ. ಮೀಸಲು
ರಾಜ್ಯದಲ್ಲಿರುವ ಆರೋಗ್ಯ ಸೌಲಭ್ಯವನ್ನು ಮತ್ತಷ್ಟು ಬಲಪಡಿಸಲು 16,000 ಕೋಟಿ ರೂಪಾಯಿಯನ್ನು ಸಿಎಂ ಜಗನ್ ರೆಡ್ಡಿ ಬಿಡುಗಡೆ ಮಾಡಿದ್ದಾರೆ.
ದೆಹಲಿ: ಆಂಧ್ರಪ್ರದೇಶದಾದ್ಯಂತ ಒಟ್ಟು 14 ಹೊಸ ವೈದ್ಯಕೀಯ ಕಾಲೇಜುಗಳಿಗೆ ಅಲ್ಲಿನ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಸೋಮವಾರ ಅಡಿಗಲ್ಲು ಸ್ಥಾಪನೆ ಮಾಡಿದರು. ಈ ಮೂಲಕ ಅಲ್ಲಿನ ರಾಜಸರ್ಕಾರ ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಶೇ.150ಕ್ಕೆ ಹೆಚ್ಚಿಸಲು ಮುಂದಾಗಿದೆ.
ಆಂಧ್ರಪ್ರದೇಶದ ಪುಲಿವೆಂಡುಲ, ಪಡೇರು, ಮಚಿಲಿಪಟ್ನಂ, ವಿಜಯನಗರಂ, ಅನಕಪಲ್ಲಿ, ರಾಜಮಂಡ್ರಿ, ಅಮಲಾಪುರಂ, ಪಾಲಕೊಲ್ಲು, ಎಲೂರು, ಬಾಪಟ್ಲಾ, ಮಾರ್ಕಪುರಂ, ಮದನಪಲ್ಲಿ, ಪೆನುಕೋನಾ, ನಂದ್ಯಾಲ್ ಮತ್ತು ಅಡೋನಿಗಳಲ್ಲಿ ಈ ಹೊಸ ಕಾಲೇಜುಗಳು ನಿರ್ಮಾಣವಾಗಲಿದ್ದು, ಈ ಕಾರ್ಯಕ್ಕಾಗಿ ಒಟ್ಟು 7880 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಇದರೊಂದಿಗೆ ರಾಜ್ಯದಲ್ಲಿರುವ ಆರೋಗ್ಯ ಸೌಲಭ್ಯವನ್ನು ಮತ್ತಷ್ಟು ಬಲಪಡಿಸಲು 16,000 ಕೋಟಿ ರೂಪಾಯಿಯನ್ನು ಸಿಎಂ ಜಗನ್ ರೆಡ್ಡಿ ಬಿಡುಗಡೆ ಮಾಡಿದ್ದಾರೆ. ಇನ್ನು ಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ವಲಯವನ್ನೂ ಪ್ರೋತ್ಸಾಹಿಸಲು ನಿರ್ಧರಿಸಿರಿವು ಜಗನ್ ರೆಡ್ಡಿ, ಯಾರೇ ಸ್ಪೆಶಾಲಿಟಿ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದರೂ ಅವರಿಗೆ ಉಚಿತ ಭೂಮಿ ನೀಡಿ ಪ್ರೋತ್ಸಾಹಿಸಲಾಗುವುದು. ಇದಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂ.ಹೂಡಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
Published On - 9:23 am, Tue, 1 June 21