
ಬೆಂಗಳೂರು, ಫೆಬ್ರವರಿ 1: ದೇಶದಲ್ಲಿ ಹುಲಿಗಳ ಸಂಖ್ಯೆ ಮಾತ್ರವಲ್ಲ, ಅವುಗಳ ವಾಸ ಪ್ರದೇಶದ ವ್ಯಾಪ್ತಿಯೂ ಹೆಚ್ಚಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ವಿಜ್ಞಾನ ನಿಯತಕಾಲಿಕವೊಂದರಲ್ಲಿ ಪ್ರಕಟವಾದ ‘ಟೈಗರ್ ರಿಕವರಿ ಅಮಿಡ್ ಪೀಪಲ್ ಆ್ಯಂಡ್ ಪವರ್ಟಿ’ ಎಂಬ ವರದಿಯಲ್ಲಿ ಕಳೆದ 20 ವರ್ಷಗಳಲ್ಲಿ ಹುಲಿ ವಾಸ ಪ್ರದೇಶದ ವ್ಯಾಪ್ತಿ ಶೇ 30 ರಷ್ಟು ವಿಸ್ತರಣೆಯಾಗಿದೆ ಎಂದು ತಿಳಿಸಲಾಗಿದೆ.
ಹುಲಿಗಳು ದಟ್ಟಾರಣ್ಯ ಪ್ರದೇಶಗಳನ್ನು ಸಂತಾನೋತ್ಪತ್ತಿ ಸ್ಥಳಗಳಾಗಿ ಮಾಡಿಕೊಳ್ಳುತ್ತಿದ್ದು ತಮ್ಮ ವಾಸ ಪ್ರದೇಶವನ್ನು ವಿಸ್ತರಿಸುತ್ತಿವೆ ಎಂದು ಅಧ್ಯಯನ ತಿಳಿಸಿದೆ.
ಹುಲಿಗಳ ವಾಸ ಪ್ರದೇಶ ವ್ಯಾಪ್ತಿ ವಾರ್ಷಿಕವಾಗಿ 2,929 ಚದರ ಕಿಮೀಗಳಷ್ಟು ವಿಸ್ತರಣೆಯಾಗುತ್ತಿದೆ. ಹುಲಿಗಳು ನಿರಂತರವಾಗಿ ಮಾನವ ಮುಕ್ತ ಮತ್ತು ಬೇಟೆಗೆ ಅವಕಾಶ ಇರುವ ಸಮೃದ್ಧ ಸಂರಕ್ಷಿತ ಪ್ರದೇಶಗಳನ್ನು ಅತಿಕ್ರಮಿಸುವುದನ್ನು ಮುಂದುವರೆಸಿವೆ ಎಂದು ಅಧ್ಯಯನ ವರದಿ ತಿಳಿಸಿದೆ.
ಕರ್ನಾಟಕ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಮಹಾರಾಷ್ಟ್ರದಲ್ಲಿ ಹುಲಿ ವಾಸ ಪ್ರದೇಶದ ವ್ಯಾಪ್ತಿ ವಿಸ್ತರಣೆ ಅತಿ ಹೆಚ್ಚು ದಾಖಲಾಗಿದೆ ಎಂದು ಅಧ್ಯಯನ ಹೇಳಿದೆ. ಈ ರಾಜ್ಯಗಳಲ್ಲಿ 2018 ಕ್ಕೆ ಹೋಲಿಸಿದರೆ ಹುಲಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿರುವುದು 2023 ರಲ್ಲಿ ಬಿಡುಗಡೆಯಾದ ವರದಿಯಿಂದ ತಿಳಿದುಬಂದಿತ್ತು.
ಕುತೂಹಲಕಾರಿಯಾಗಿ, 2023 ರಲ್ಲಿ ಬಿಡುಗಡೆಯಾದ 2023 ಹುಲಿ ಅಂದಾಜು ವರದಿಯು 2018 ಕ್ಕೆ ಹೋಲಿಸಿದರೆ ಈ ರಾಜ್ಯಗಳಲ್ಲಿ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ತೋರಿಸಿದೆ. ವ್ಯಾಪಕವಾಗಿ ಕಾಡು ಪ್ರಾಣಿಗಳ ಮಾಂಸ ಸೇವನೆ ಮಾಡುವ, ವನ್ಯ ಪ್ರಾಣಿಗಳ ಬೇಟೆಯಾಡುವಿಕೆಯ ಪರಂಪರೆಯನ್ನು ಹೊಂದಿರುವ ರಾಜ್ಯಗಳಲ್ಲಿ ಹುಲಿಗಳು ಅಳಿವಿನಂಚಿನಲ್ಲಿವೆ ಎಂದು ಅಧ್ಯಯನ ತಿಳಿಸಿದೆ. ಉದಾಹರಣೆಗೆ ಒಡಿಶಾ, ಛತ್ತೀಸ್‌ಗಢ, ಜಾರ್ಖಂಡ್, ಈಶಾನ್ಯ ರಾಜ್ಯಗಳು ಮತ್ತು ಆಗ್ನೇಯ ಏಷ್ಯಾ ಭಾಗದಲ್ಲಿ ಹುಲಿಗಳ ಸಂಖ್ಯೆ ಕಡಿಮೆ ಇದೆ ಎನ್ನಲಾಗಿದೆ.
ಬಡತನ ಮತ್ತು ಹೆಚ್ಚಿನ ಸಶಸ್ತ್ರ ಸಂಘರ್ಷ ಇರುವ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚು ಸಮೃದ್ಧಿ ಇರುವ ರಾಜ್ಯಗಳಲ್ಲೇ ಹುಲಿ ವಾಸ ಪ್ರದೇಶ ವ್ಯಾಪ್ತಿ ಹೆಚ್ಚಾಗಿದೆ ಎಂದು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಅಧ್ಯಯನದ ಸಹ-ಲೇಖಕರಾದ ಯದುವೇದ್ರದೇವ್ ಝಾಲಾ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಳಿಗಿರಿರಂಗನ ಬನದಲ್ಲಿ ಜಾಂಬವಂತನ ಕಾದಾಟ, ವಿಡಿಯೋ ನೋಡಿ
ಅರಣ್ಯ ಪ್ರದೇಶ ಹೆಚ್ಚಾಗದಿದ್ದರೂ ಹುಲಿಗಳ ವಾಸ ಪ್ರದೇಶದ ವ್ಯಾಪ್ತಿ ಹೆಚ್ಚಿದೆ. ಪ್ರಸ್ತುತ ಶೇ 40 ರಷ್ಟು ಹುಲಿಗಳು ಮಾನವ ವಾಸಕ್ಕೆ ಹತ್ತಿರವಿರುವ ಪ್ರದೇಶಗಳಲ್ಲಿ ವಾಸಿಸುತ್ತವೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ