
ಬೆಂಗಳೂರು, ನವೆಂಬರ್ 7: ಮೈಸೂರು (Mysuru) ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ದಾಳಿ (Tiger Attack) ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿರುವ ಬೆನ್ನಲ್ಲೇ, ಹುಲಿ ಸೆರೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ತುರ್ತು ಕ್ರಮಕ್ಕೆ ಮುಂದಾಗಿದೆ. ಕೂಂಬಿಂಗ್ ನಡೆಸಿ ಹುಲಿ ಸೆರೆ ಹಿಡಿಯುವುದಕ್ಕಾಗಿ ಸದ್ಯ ಅರಣ್ಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಸಿಬ್ಬಂದಿಯನ್ನು ಕೂಂಬಿಂಗ್‌ಗೆ ಬಳಸಿಕೊಳ್ಳುವುದಕ್ಕಾಗಿ ಬಂಡೀಪುರ ಮತ್ತು ನಾಗರಹೊಳೆಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಬಂಡಿಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ನಿಷೇಧಿಸಿ ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಬಂಡೀಪುರ, ನಾಗರಹೊಳೆ ಅರಣ್ಯದಂಚಿನಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಹುಲಿ ದಾಳಿಯಿಂದ ಮೂರು ಅಮೂಲ್ಯ ಜೀವ ಹಾನಿ ಆಗಿರುವುದು ಅತೀವ ನೋವು ತಂದಿದೆ. ಹುಲಿ ದಾಳಿಯ ನಂತರ ದಿನಾಂಕ 27.10.2025ರಂದು ಬಂಡೀಪುರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಹುಲಿ ಸೆರೆಗೆ ತುರ್ತು ಕ್ರಮ ಕೈಗೊಳ್ಳಲು ಮತ್ತು ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸುವಂತೆ ಸೂಚಿಸಿರುತ್ತೇನೆ. ಇದಾದ ಬಳಿಕ ದಿನಾಂಕ 02.11.2025ರಂದು ಚಾಮರಾಜನಗರದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಮತ್ತು ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಶಾಸಕರು, ಅಧಿಕಾರಿಗಳ ಸಮ್ಮುಖದಲ್ಲಿ ರೈತರು, ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಹುಲಿ ಸೆರೆಗೆ ಎಲ್ಲ ಸಾಧ್ಯ ಕ್ರಮ ಕೈಗೊಳ್ಳುವಂತೆ ಸೂಚಿಸುವುದರ ಜೊತೆಗೆ ಸಫಾರಿ ಬಂದ್ ಮಾಡುವ ಎಚ್ಚರಿಕೆಯನ್ನೂ ನೀಡಲಾಗಿರುತ್ತದೆ. ಇದಾದ ಬಳಿಕವೂ ಇಂದು ಮತ್ತೊಂದು ದಾರುಣ ಘಟನೆ ಸಂಭವಿಸಿರುವುದು ಆಘಾತ ತಂದಿದೆ ಎಂದು ಸಚಿವ ಈಶ್ವರ್ ಖಂಡ್ರೆ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ನಾಗರಹೊಳೆ ಮತ್ತು ಬಂಡೀಪುರ ಅರಣ್ಯ ಪ್ರದೇಶಗಳಲ್ಲಿ ಇತ್ತೀಚೆಗೆ ಸಂಭವಿಸಿದ ಹುಲಿ ದಾಳಿಯಿಂದ ಜೀವಹಾನಿ ಸಂಭವಿಸಿರುವ ಹಿನ್ನೆಲೆ, ಮುಂದಿನ ಆದೇಶದವರೆಗೆ ಎರಡೂ ಪ್ರದೇಶಗಳ ಸಫಾರಿ ಹಾಗೂ ಟ್ರೆಕ್ಕಿಂಗ್ (ಚಾರಣ) ಚಟುವಟಿಕೆಗಳನ್ನು ಇಂದಿನಿಂದಲೇ ಬಂದ್ ಮಾಡುವಂತೆ ಹಾಗೂ ಸಫಾರಿ ಸಿಬ್ಬಂದಿಯನ್ನು ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜಿಸಲು ಅಧಿಕಾರಿಗಳಿಗೆ… pic.twitter.com/hffcuLK3lR
— Eshwar Khandre (@eshwar_khandre) November 7, 2025
ಚಾಮರಾಜನಗರದಲ್ಲಿ ನಡೆದ ಸಭೆಯಲ್ಲಿ ರೈತರು, ಕಾಡಿನಲ್ಲಿ ನಡೆಯುವ ಸಫಾರಿಯ ಕಿರಿಕಿರಿಯಿಂದ ವನ್ಯಜೀವಿಗಳು ಕಾಡಿನಿಂದ ಹೊರ ಬರುತ್ತಿವೆ ಎಂಬ ಅಭಿಪ್ರಾಯ ವ್ಯಕ್ತವಡಿಸಿದ್ದಾರೆ. ಮತ್ತೊಂದೆಡೆ, ಅಧಿಕಾರಿಗಳು ಸಿಬ್ಬಂದಿಯ ಕೊರತೆ ಇದೆ ಎಂದು ತಿಳಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಇಂದಿನಿಂದಲೇ ನಾಗರಹೊಳೆ ಮತ್ತು ಬಂಡೀಪುರದಲ್ಲಿ ಸಫಾರಿ ಬಂದ್ ಮಾಡಲು ಮತ್ತು ಮಾನವ ವನ್ಯಜೀವಿ ಸಂಘರ್ಷ ಇರುವ ಪ್ರದೇಶದಲ್ಲಿ ಟ್ರಕ್ಕಿಂಗ್ (ಚಾರಣ) ಸ್ಥಗಿತಗೊಳಿಸಲು ಸೂಚಿಸಲಾಗಿದೆ ಎಂದು ಸಚಿವರು ಆದೇಶಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ವ್ಯಾಘ್ರನ ಅಟ್ಟಹಾಸಕ್ಕೆ ಮೈಸೂರಲ್ಲಿ ಮತ್ತೊಬ್ಬ ರೈತ ಬಲಿ: ದನ ಕಾಯುತ್ತಿದ್ದವನ ಕೊಂದ ಹುಲಿ
ಬಂಡೀಪುರ, ನಾಗರಹೊಳೆ ಸಫಾರಿಯ ಕಾರ್ಯದಲ್ಲಿ ನಿಯೋಜನೆಗೊಂಡಿರುವ ಎಲ್ಲ ಅಧಿಕಾರಿಗಳು ಮತ್ತು ವಾಹನ ಚಾಲಕರ ಸಹಿತ ಎಲ್ಲ ಸಿಬ್ಬಂದಿಯನ್ನು ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜನೆ ಮಾಡಲು ಹಾಗೂ ವನ್ಯಜೀವಿ ವಿಭಾಗದ ಎಪಿಸಿಸಿಎಫ್ ಮತ್ತು ಹುಲಿ ಯೋಜನೆಯ ನಿರ್ದೇಶಕರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪದೆ ಪದೇ ದಾಳಿ ಮಾಡುತ್ತಿರುವ ಹುಲಿಯನ್ನು ಹಿಡಿಯಲು ಕ್ರಮ ಕೈಗೊಳ್ಳುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
Published On - 1:05 pm, Fri, 7 November 25