ಫೋನ್ ಪೇ ಮೂಲಕ ಪರಿಚಯವಾಗಿ ಲವ್ವಿ ಡವ್ವಿ: ಗರ್ಭಿಣಿಯಾದ 9ನೇ ತರಗತಿ ವಿದ್ಯಾರ್ಥಿನಿ
ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಪ್ರೀತಿ-ಪ್ರೇಮದ ಬಲೆಗೆ ಬಿದ್ದು ಗರ್ಭಿಣಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ. ನಾಪತ್ತೆಯಾಗಿದ್ದ ಬಾಲಕಿಯ ಪತ್ತೆ ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದು, ಸಂತ್ರಸ್ತೆಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಯಚೂರು/ ಕೊಪ್ಪಳ, ನವೆಂಬರ್ 07: ಪ್ರೀತಿ-ಪ್ರೇಮದ ಬಲೆಗೆ ಬಿದ್ದು 9ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿಯಾಗಿರುವ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂತ್ರಸ್ತ ಯುವತಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಪಿ ಶಿವಮೂರ್ತಿ(25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಸಂತ್ರಸ್ತ ವಿದ್ಯಾರ್ಥಿನಿಯ ತಂದೆ ಚಿಕನ್ ಶಾಪ್ ಹೊಂದಿದ್ದು, ಇಲ್ಲಿ ಮಾಂಸ ಖರೀದಿಗೆ ಬಂದಿದ್ದ ಆರೋಪಿ ಶಿವಮೂರ್ತಿ ಫೋನ್ ಪೇ ಮೂಲಕ ಹಣ ಪಾವತಿಸಿದ್ದ. ಬಳಿಕ ಫೋನ್ ಪೇ ಮಾಡಿರುವ ಮೊಬೈಲ್ ಸಂಖ್ಯೆಯನ್ನ ಆತ ಸಂಪರ್ಕಿಸಿದ್ದು, ಸಂತ್ರಸ್ತೆಯ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಪ್ರೀತಿ ಆರಂಭವಾಗಿದ್ದು, ದೈಹಿಕ ಸಂಪರ್ಕದವರೆಗೂ ಹೋಗಿದೆ. ಈ ನಡುವೆ ಅಕ್ಟೋಬರ್ 30ರ ರಾತ್ರಿ ಸಂತ್ರಸ್ತೆ ನಾಪತ್ತೆಯಾಗಿದ್ದು, ಮನೆಯವರೆಲ್ಲ ಸೇರಿ ಹುಡುಕಿದರೂ ಆಕೆಯ ಸುಳಿವು ಸಿಕ್ಕಿರುವುದಿಲ್ಲ. ಈ ಹಿನ್ನಲೆ ಪೋಷಕರು ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದರು. ಪೊಲೀಸರು ಕೇಸ್ ಬೆನ್ನುಹತ್ತಿದಾಗ ನಾಪತ್ತೆಯಾಗಿರೋ ಬಾಲಕಿ ಗರ್ಭಿಣಿ ಎಂಬ ವಿಷಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಅಪ್ರಾಪ್ತೆ ತಂಗಿಗೆ ಮಗು ಕರುಣಿಸಿ ಜೈಲುಪಾಲಾದ ಭೂಪ!
ಆಟೋ ಪಲ್ಟಿಯಾಗಿ ವಿದ್ಯಾರ್ಥಿನಿ ಸಾವು

ಅಪಘಾತವಾದ ಆಟೋ
ಆಟೋ ಪಲ್ಟಿಯಾಗಿ ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಬಳಿ ನಡೆದಿದೆ. ಬಸಾಪಟ್ಟಣದ ನಿವಾಸಿ ಪ್ರೇಮಾ(18) ಮೃತ ವಿದ್ಯಾರ್ಥಿನಿಯಾಗಿದ್ದು, ಬಸಾಪಟ್ಟಣದಿಂದ ಗಂಗಾವತಿ ಕಾಲೇಜಿಗೆ ಪ್ರೇಮಾ ತೆರಳುತ್ತಿದ್ದರು ಎನ್ನಲಾಗಿದೆ. ಗಾಯಾಳುಗಳನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:55 pm, Fri, 7 November 25



