Koppal: ಅಪ್ರಾಪ್ತೆ ತಂಗಿಗೆ ಮಗು ಕರುಣಿಸಿ ಜೈಲುಪಾಲಾದ ಭೂಪ!
ಕೊಪ್ಪಳದಲ್ಲಿ ಆಘಾತಕಾರಿ ಘಟನೆ ನಡೆದಿದ್ದು ಸ್ವಂತ ಅಣ್ಣನೇ ತನ್ನ ಅಪ್ರಾಪ್ತ ತಂಗಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ದೈಹಿಕ ಸಂಬಂಧ ಬೆಳೆಸಿ ಗರ್ಭಿಣಿಯಾಗಿಸಿದ್ದಾನೆ. ಸಂತ್ರಸ್ತೆ ಮಗುವಿಗೆ ಜನ್ಮ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ದೂರಿನ ಮೇರೆಗೆ 21 ವರ್ಷದ ಆರೋಪಿ ಅಣ್ಣನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ಕೊಪ್ಪಳ, ನವೆಂಬರ್ 06: ನಿನ್ನನ್ನು ಮದುವೆ ಆಗುತ್ತೇನೆ ಎಂದು ಪುಸಲಾಯಿಸಿ ಸ್ವಂತ ಅಣ್ಣನೇ ಅಪ್ರಾಪ್ತೆ ತಂಗಿ ಜೊತೆ ದೈಹಿಕ ಸಂಪರ್ಕ ಬೆಳೆಸಿ ಮಗು ಕರುಣಿಸಿರುವ ಆಘಾತಕಾರಿ ಘಟನೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗರ್ಭವತಿಯಾಗಿದ್ದ ಬಾಲಕಿ ವಾರದ ಹಿಂದೆ ಮಗುವಿಗೆ ಜನ್ಮ ನೀಡಿದ್ದು, 21 ವರ್ಷದ ಆರೋಪಿ ಅಣ್ಣನ ವಿರುದ್ಧ ಬಾಲಕಿ ದೂರಿನನ್ವಯ ಪೋಕ್ಸೋ ಕೇಸ್ ದಾಖಲಾಗಿದೆ. ಸದ್ಯ ಆರೋಪಿಯನ್ನ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಘಟನೆ ಏನು?
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಆರೋಪಿ ಅಣ್ಣ ತನ್ನ ಅಪ್ರಾಪ್ತೆ ತಂಗಿ ಬಳಿ ತಾನು ನಿನ್ನನ್ನು ಮದುವೆ ಆಗುವುದಾಗಿ ಹೇಳಿದ್ದ. ನಿನ್ನನ್ನು ಯಾವತ್ತೂ ಕೈಬಿಡಲ್ಲ, ಚೆನ್ನಾಗಿ ನೋಡಿಕೊಳ್ಳುತ್ತೇನೆ. ಯಾರೂ ನಿನಗೆ ಏನು ಹೇಳದ ರೀತಿ ಕಾವಲಾಗಿ ಇರುತ್ತೇನೆ ಎಂದೆಲ್ಲ ಪುಸಲಾಯಿಸಿದ್ದ. ಈ ವೇಳೆ ಸಂತ್ರಸ್ತೆ ಇದನ್ನು ವಿರೋಧಿಸಿದ್ದು ಸಮಾಜ ಈ ರೀತಿಯ ಸಂಬಂಧವನ್ನು ಒಪ್ಪಲ್ಲ ಎಂದಿದ್ದಳು. ಹೀಗಿದ್ದರೂ ಆಕೆಯ ಬೆನ್ನು ಬಿದ್ದಿದ್ದ ಆತ ಮನೆಯಲ್ಲಿ ಯಾರು ಇಲ್ಲದೆ ಇರುವಾಗ ತಂಗಿಯ ಜೊತೆ ದೈಹಿಕ ಸಂಬಂಧ ಬೆಳೆಸಿದ್ದ. ಫೆಬ್ರವರಿಯಿಂದ ಇವರ ನಡುವೆ ಈ ರೀತಿ ಸಂಬಂಧ ನಡೆದುಕೊಂಡು ಬಂದಿದ್ದು, ವಿಷಯವನ್ನು ಮನೆಯವರಿಗೆ ತಿಳಿಸಲು ಸಂತ್ರಸ್ತೆ ಯತ್ನಿಸಿದ್ದಳು. ಆದರೆ ಈ ವೇಳೆ ವಿಷಯ ಮನೆಯವರಿಗೆ ಹೇಳಿದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಆರೋಪಿ ಬೆದರಿಸಿದ್ದ ಎನ್ನಲಾಗಿದೆ.
ಇದನ್ನೂ ಓದಿ: ವಿಚ್ಛೇದನ ಕೇಳಿದ್ದಕ್ಕೆ ಪತ್ನಿಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ ಪತಿ!
ಈ ನಡುವೆ ಅಕ್ಟೋಬರ್ 26ರ ಬೆಳಿಗ್ಗೆ ಮನೆ ಕೆಲಸ ಮಾಡುವಾಗ ಸಂತ್ರಸ್ತೆ ಜಾರಿ ಬಿದ್ದಿದ್ದು, ಘಟನೆಯಲ್ಲಿ ಸೊಂಟಕ್ಕೆ ಏಟು ಬಿದ್ದಿತ್ತು. ಹೀಗಾಗಿ ಊರಿನ ಖಾಸಗಿ ಆಸ್ಪತ್ರೆಗೆ ಅರೋಪಿಯೇ ಆಕೆಯನ್ನ ಕರೆದೊಯ್ದಿದ್ದು, ಈ ವೇಳೆ ವೈದ್ಯರು ಬೆನ್ನಿಗೆ ಪೆಟ್ಟಾಗಿದೆ. ಶೀಘ್ರವಾಗಿ ಸ್ಕ್ಯಾನಿಂಗ್ ಮಾಡಿಸುವಂತೆ ಸೂಚಿಸಿದ್ದರು. ಬಳಿಕ ಅಕ್ಟೋಬರ್ 30ರಂದು ಕೊಪ್ಫಳ ಜಿಲ್ಲಾಸ್ಪತ್ರೆಗೆ ಸಂತ್ರಸ್ತೆಯನ್ನು ಕರೆದುಕೊಂಡು ಬರಲಾಗಿದ್ದು, ಈ ವೇಳೆ ಆಕೆಯ ಹೊಟ್ಟೆಯಲ್ಲಿ ಮಗು ಇರುವ ವಿಷಯ ಬೆಳಕಿಗೆ ಬಂದಿದೆ. ಅಲ್ಲಿಯವರೆಗೆ ಗರ್ಭಿಣಿ ಎಂಬ ವಿಷಯ ತನಗೇ ಗೊತ್ತಿಲ್ಲ ಎಂದು ಸಂತ್ರಸ್ತೆ ತಿಳಿಸಿದ್ದು, ಅದೇ ದಿನ ರಾತ್ರಿ ಗಂಡು ಮಗುವಿಗೆ ಆಕೆ ಜನ್ಮ ನೀಡಿದ್ದಾಳೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:10 pm, Thu, 6 November 25



