ವಿಚ್ಛೇದನ ಕೇಳಿದ್ದಕ್ಕೆ ಪತ್ನಿಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ ಪತಿ! ಅಮೇಲೇನಾಯ್ತು?
ಬೆಂಗಳೂರಿನಲ್ಲಿ ಕೌಟುಂಬಿಕ ದೌರ್ಜನ್ಯದಿಂದ ಬೇಸತ್ತು ವಿಚ್ಛೇದನ ಕೇಳಿದ ಪತ್ನಿಯ ಖಾಸಗಿ ಫೋಟೋಗಳನ್ನು ಪತಿಯೇ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ ವಿಲಕ್ಷಣ ಘಟನೆ ನಡೆದಿದೆ. ಮದ್ಯಪಾನ ಮತ್ತು ಆನ್‌ಲೈನ್ ಬೆಟ್ಟಿಂಗ್‌ಗೆ ದಾಸನಾಗಿದ್ದ ಆರೋಪಿ ಗೋವಿಂದರಾಜು, ಪತ್ನಿಯ ಹಣವನ್ನೂ ಬಳಸುತ್ತಿದ್ದ. ಸದ್ಯ ಅಮೃತಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರು, ನವೆಂಬರ್ 6: ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಪತಿಯ ಕಾಟ ತಾಳಲಾರದೆ ಮಹಿಳೆಯೊಬ್ಬರು ವಿಚ್ಛೇದನ ಕೇಳಿದ್ದೇ ಆಕೆಗೆ ಮುಳುವಾಗಿದೆ. ಪತ್ನಿಯ ಮಾನ ರಕ್ಷಣೆ ಮಾಡಬೇಕಾದ ಪತಿಯೇ ಆಕೆಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಅಪ್ಲೋಡ್ ಮಾಡಿ ವಿಕೃತಿ ಮೆರೆದಿದ್ದಾನೆ. ಬೆಂಗಳೂರಿನ (Bengaluru) ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯ ಆರೋಪಿ ಗೋವಿಂದರಾಜು (27) ಎಂಬಾತನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗಂಡ-ಹೆಂಡತಿ ಮಧ್ಯೆ ಏನಾಗಿತ್ತು?
ಆರೋಪಿ ಗೋವಿಂದರಾಜು ಹಾಗೂ ಮಹಿಳೆ ಬೆಂಗಳೂರಿನ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ಪರಸ್ಪರ ಪರಿಚಯವಾಗಿದ್ದರು. ನಂತರ 2024ರಲ್ಲಿ ವಿವಾಹವಾಗಿದ್ದರು. ನಂತರದಲ್ಲಿ ಆನ್‌ಲೈನ್ ಬೆಟ್ಟಿಂಗ್ ಹಾಗೂ ಕುಡಿತದ ದಾಸನಾಗಿದ್ದ ಗೋವಿಂದರಾಜು ಅದರಲ್ಲೇ ಹಣ ಕಳೆದುಕೊಳ್ಳುತ್ತಿದ್ದ. ಅಲ್ಲದೆ, ಪತ್ನಿ ದುಡಿದು ತಂದ ಹಣವನ್ನೂ ಆನ್‌ಲೈನ್ ಬೆಟ್ಟಿಂಗ್, ಕುಡಿತಕ್ಕೆ ಬಳಸುತ್ತಿದ್ದ. ಇದರಿಂದಾಗಿ ದಂಪತಿ ಮಧ್ಯೆ ನಿತ್ಯ ಜಗಳವಾಗುತ್ತಿತ್ತು.
ಕುಡಿತದ ಚಟದಿಂದ ಹಣ ಕಳೆದುಕೊಂಡು ಮನೆಗೆ ಬರುವ ಗೋವಿಂದರಾಜು ನಿತ್ಯ ಹೆಂಡತಿ ಮೇಲೆ ಹಲ್ಲೆ ಮಾಡುತ್ತಿದ್ದ. ಗಂಡನ ದೌರ್ಜನ್ಯದಿಂದ ಬೇಸತ್ತ ಮಹಿಳೆ ಬೆಂಗಳೂರು ತೊರೆದು ಆಂಧ್ರ ಪ್ರದೇಶದಲ್ಲಿರುವ ತವರು ಮನೆಗೆ ತೆರಳಿದ್ದರು.
ತವರಿಗೆ ತೆರಳಿದ್ದ ಹೆಂಡತಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಆರೋಪಿ
ಪತಿಯ ಕಾಟದಿಂದ ಬೇಸತ್ತು ತವರಿಗೆ ಹೋದ ಮಹಿಳೆ ಗೋವಿಂದರಾಜು ಬಳಿ ವಿಚ್ಛೇದನ ಕೇಳಿದ್ದಳು. ಇದರಿಂದಾಗಿ ಆಕೆಗೆ ಅಲ್ಲಿಯೂ ನೆಮ್ಮದಿ ಇರಲ್ಲದಂತಾಗಿತ್ತು. ವಿಚ್ಛೇದನ ಕೇಳಿದ್ದರಿಂದ ಸಿಟ್ಟಾಗಿ ಪತ್ನಿಗೆ ಕರೆ ಮಾಡಿದ್ದ ಗೋವಿಂದರಾಜು, ಖಾಸಗಿ ಫೋಟೋಗಳು ಮತ್ತು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಹೆದರಿದ್ದ ಆಕೆ ಬೆಂಗಳೂರಿಗೆ ಬಂದಿ ಪೇಯಿಂಗ್ ಗೆಸ್ಟ್ ಆಗಿ ನೆಲೆಸಿದ್ದಳು.
ಪೇಯಿಂಗ್ ಗೆಸ್ಟ್ಗೂ ತೆರಳಿ ಮಹಿಳೆಗೆ ಕಾಟ ಕೊಡುತ್ತಿದ್ದ ಆರೋಪಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೆ, ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕೊಲೆ ಮಾಡುವುದಾಗಿಯೂ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕದ್ದ ಮಾಲಲ್ಲಿ ದೇವರಿಗೂ ಪಾಲು ಕೊಡ್ತಿದ್ದ ಖತರ್ನಾಕ್ ಕಳ್ಳ!: 20 ವರ್ಷಗಳಿಂದ ರಾಬರಿಯೇ ಫುಲ್ಟೈಮ್ ಕೆಲಸ
ಇಷ್ಟೆಲ್ಲ ಆದ ಬಳಿಕ ಆರೋಪಿಯು ಮಹಿಳೆಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಮಾಧ್ಯದಲ್ಲಿ ಅಪ್ಲೋಡ್ ಮಾಡಿ ಆಕೆಯ ಸ್ನೇಹಿತೆಯರ ಗುಂಪನ್ನು ಟ್ಯಾಗ್ ಮಾಡಿದ್ದ. ಸ್ನೇಹಿತೆಯರಿಂದ ಮಾಹಿತಿ ದೊರೆತ ಬೆನ್ನಲ್ಲೇ ಸಂತ್ರಸ್ತೆ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಆಧಾರದಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ.




