ಹಿಜಾಬ್ (Hijab) ವಿವಾದಕ್ಕೆ ಕೊನೆಹಾಡುವ ಪ್ರಯತ್ನವಾಗಿ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ (uniform) ಕುರಿತಂತೆ ಒಂದು ಆದೇಶವನ್ನು ಹೊರಡಿಸಿದೆ. ಸರ್ಕಾರದ ಆದೇಶ ಪ್ರಕಾರ, ರಾಜ್ಯದ ಎಲ್ಲ ಸರ್ಕಾರೀ ಶಾಲಾ ಕಾಲೇಜುಗಳಲ್ಲಿ ಸರ್ಕಾರ ನಿಗದಿಪಡಿಸುವ ಮತ್ತು ಖಾಸಗಿ ಶಾಲೆಗಳಲ್ಲಿ ಅವುಗಳ ಆಡಳಿತ ಮಂಡಳಿಗಳು (school management) ಅಂತಿಮಗೊಳಿಸುವ ಸಮವಸ್ತ್ರಗಳೇ ಅಂತಿಮ. ರಾಜ್ಯದ ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ಏಕರೂಪದ ಸಮವಸ್ತ್ರ ಸಂಹಿತೆಯನ್ನು (Uniform Dress Code) ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಪಿಯು ಕಾಲೇಜುಗಳಲ್ಲಿ ಅಲ್ಲಿನ ಆಡಳಿತ ಮಂಡಳಿ ಇಲ್ಲವೇ ಕಾಲೇಜು ಅಭಿವೃದ್ಧಿ ಸಮಿತಿ ನಿರ್ಧರಿಸಿರುವ ನಿಗದಿಪಡಿಸಿದ ಸಮವಸ್ತ್ರವೇ ಕಡ್ಡಾಯ ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ. ಕಾಲೇಜು ಸಮವಸ್ತ್ರ ನಿಗದಿಪಡಿಸದಿದ್ದಲ್ಲಿ ಸಮಪರ್ಕ ಉಡುಪು ಧರಿಸಿ ವಿದ್ಯಾರ್ಥಿ-ವಿದ್ಯಾರ್ಥನಿಯರು ತರಗತಿಗಳಿಗೆ ಹೋಗಬೇಕು. ಯಾವುದೇ ಸಮುದಾಯದಿಂದ ಸಮಾನತೆ, ಐಕ್ಯತೆ ಜೊತೆ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವುದು ಬೇಡ ಎಂದು ಸರ್ಕಾರ ಹೇಳಿದೆ.
ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ಮತ್ತು ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹೊದ್ದು ಶಾಲೆಗಳಿಗೆ ಹೋಗುವ ವಿವಾದಕ್ಕೆ ತೆರೆ ಎಳೆಯುವ ಉದ್ದೇಶದೊಂದಿಗೆ ಸರ್ಕಾರ ಅದೇಶ ಹೊರಡಿಸಿದೆಯಾದರೂ ವಿವಾದ ಇದರಿಂದ ಕೊನೆಗೊಳ್ಳುವ ಸಾಧ್ಯತೆ ಕಡಿಮೆ.
ಯಾಕೆಂದರೆ ಹಿಜಾಬ್-ಶಾಲು ಪ್ರಕರಣ ಅದಾಗಲೇ ಕೋರ್ಟಿನ ಮೆಟ್ಟಿಲೇರಿದೆ. ಮಂಗಳವಾರದಂದು ರಾಜ್ಯ ಉಚ್ಚ ನ್ಯಾಯಾಲಯ ತೀರ್ಪು ನೀಡಲಿದೆ. ಕೋರ್ಟ್ ತೀರ್ಪು ಹೊರಬೀಳುವವರೆಗೆ ಕಾದು ಅದಕ್ಕೆ ಸಮರ್ಪಕವಾದ ಆದೇಶವನ್ನು ಹೊರಡಿಸಿದ್ದರೆ ಪ್ರಾಯಶಃ ಉತ್ತಮ ನಡೆ ಅನಿಸುತ್ತಿತ್ತು.
ಆದರೆ ವಿವಾದ ದಿನೇದಿನೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಏನಾದರೂ ಕ್ರಮ ತೆಗೆದುಕೊಳ್ಳಲೇಬೇಕಾದ ಒತ್ತಡದಲ್ಲಿತ್ತು. ಶುಕ್ರವಾರಂದು ಕುಂದಾಪುರ ಸರ್ಕಾರಿ ಕಾಲೇಜೊಂದರ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದಕ್ಕೆ ಗೇಟ್ ಹೊರಗೆ ಅವರನ್ನು ಕಳಿಸಿದ್ದು ಎಲ್ಲೆಡೆ ಚರ್ಚೆಯಾಗುತ್ತಿದೆ. ಕೆಲ ಸಾಮಾಜಿಕ ಕಾರ್ಯಕರ್ತರು ಮಾನವ ಹಕ್ಕುಗಳ ಆಯೋಗ ಮತ್ತು ಮಹಿಳಾ ಹಕ್ಕುಗಳ ಆಯೋಗಗಳ ಕದ ತಟ್ಟುವ ಬಗ್ಗೆ ಮಾತಾಡಿದ್ದಾರೆ.
ಹಾಗಾಗೇ ನಾವು ಹೇಳುತ್ತಿರೋದು. ಸರ್ಕಾರದ ಆದೇಶದಿಂದ ವಿವಾದ ಕೊನೆಗೊಳ್ಳುವ ಲಕ್ಷಣಗಳಿಲ್ಲ ಅಂತ.
ಏತನ್ಮಧ್ಯೆ, ಸರ್ಕಾರ ಏಕರೂಪದ ಸಮವಸ್ತ್ರ ಆದೇಶ ಜಾರಿಗೊಳಿಸಿದ ಹಿನ್ನೆಲೆಯಲ್ಲಿ
ಉಡುಪಿ ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರ ಹೊರಡಿಸಿರುವ ಆದೇಶ ತಾರತಮ್ಯದಿಂದ ಕೂಡಿದೆ, ವಿದ್ಯಾರ್ಥಿಗಳ ಭವಿಷ್ಯ ಮತ್ತು ಬದುಕಿನೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ, ನಾವು ಹೈಕೋರ್ಟ್ ತೀರ್ಪು ಬರುವವರೆಗೂ ಕಾಯುತ್ತೇವೆ ಮತ್ತು ನ್ಯಾಯಾಲಯದ ತೀರ್ಪನ್ನು ಗೌರವಿಸಿ ಪಾಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಹಿಜಾಬ್ ವಿವಾದ ಬಿಸಿಯಾಗಿರುವಾಗಲೇ ಕುಂದಾಪುರದಲ್ಲಿ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಬಳಿ ಅವರನ್ನು ಬಂಧಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತ ವ್ಯಕ್ತಿಗಳನ್ನು ಹಾಜಿ ಅಬ್ದುಲ್ ಮಾಜಿದ್ (31) ಹಾಗೂ ರಜಬ್ (41) ಎಂದು ಗುರುತಿಸಲಾಗಿದೆ. ಅವರ ಬಳಿಯಿದ್ದ ಹರಿತವಾದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಾಲೇಜಿನ ಬಳಿ ಒಟ್ಟು ಆರು ಜನರು ಗುಂಪುಗೂಡಿ ಚರ್ಚೆ ಮಾಡುತ್ತಿದ್ದಾಗ ಹಾಜಿ ಅಬ್ದುಲ್ ಮಾಜಿದ್ ಹಾಗೂ ರಜಬ್ ರನ್ನು ಬಂಧಿಸಲಾಗಿದೆ. ಪೊಲೀಸರು ದಾಳಿ ನಡೆಸಿದಾಗ ನಾಲ್ವರ ತಪ್ಪಿಸಿಕೊಳ್ಳುವುದರಲ್ಲಿ ಸಫಲರಾಗಿದ್ದಾರೆ. ಬಂಧಿತ ಅಬ್ದುಲ್ ಮಾಜಿದ್ ವಿರುದ್ಧ ಈಗಾಗಲೇ 7 ಪ್ರಕರಣಗಳು ದಾಖಲಾಗಿವೆ ಮತ್ತು ರಜಬ್ ವಿರುದ್ಧವೂ ಈ ಹಿಂದೆ ಒಂದು ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಸಚಿವ ಶ್ರೀರಾಮುಲು ಹಿಜಾಬ್ ವಿವಾದ ಬಗ್ಗೆ ಕಾಮೆಂಟ್ ಮಾಡುತ್ತಾ ಸಮಯ ವ್ಯರ್ಥ ಮಾಡದೆ, ವಿಮ್ಸ್ನಲ್ಲಿ ರೋಗಿಗಳೊಂದಿಗೆ ಮಾತಾಡಿದರು!
Published On - 11:37 pm, Sat, 5 February 22