ಕೊಪ್ಪಳ: ವಿಶ್ವಪಾರಂಪರಿಕ ಹಂಪಿಯ ಜೊತೆಗೆ ಗಂಗಾವತಿ ತಾಲೂಕಿನ ಆನೆಗೊಂದಿ ಭಾಗ ಐತಿಹಾಸಿಕ ಸಂಬಂಧ ಹೊಂದಿದ್ದು, ಹಂಪಿಗೆ ಆಗಮಿಸುವ ಪ್ರವಾಸಿಗರು ಆನೆಗೊಂದಿ ಭಾಗದ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ತಾಣಗಳ ಬಳಿ ಇರುವ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದು ಸಾಮಾನ್ಯ. ಆದರೆ ಇತ್ತೀಚೆಗೆ ಇಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.
ಹೌದು ಅಕ್ಟೋಬರ್ ತಿಂಗಳಲ್ಲಿ ಇಲ್ಲಿ ಚಿರತೆಯೊಂದು ಮಹಿಳೆ ಹಾಗೂ ಬಾಲಕನ ಮೇಲೆ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಳಿಸಿದೆ. ಇನ್ನು ನವೆಂಬರ್ನಲ್ಲಿ ಶ್ರೀ ದುರ್ಗಾ ದೇವಿ ದೇವಾಲಯದ ಸಮೀಪ ಯುವಕನ ಮೇಲೆ ದಾಳಿ ನಡೆಸಿದ್ದು, ಈ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಡಿಸೆಂಬರ್ನಲ್ಲಿ ಮತ್ತೊಬ್ಬ ಯುವಕನ ಮೇಲೆ ಚಿರತೆ ದಾಳಿ ನಡೆಸಿದ್ದು, ಆಕರ್ಷಕ ತಾಣಗಳಿಗೆ ಭೇಟಿ ನೀಡುವವರಲ್ಲಿ ಈ ಘಟನೆಗಳು ಆತಂಕ ಸೃಷ್ಟಿಸಿವೆ.
ಗಂಗಾವತಿ ತಾಲೂಕಿನ ಆನೆಗೊಂದಿ, ಶ್ರೀ ದುರ್ಗಾ ದೇವಿ ದೇವಾಲಯ, ನವವೃಂದಾವನ ಗಡ್ಡಿ, ಪಂಪಾ ಸರೋವರ, ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇವಾಲಯ, ಸಾಣಾಪುರ ಕೆರೆ ಸೇರಿದಂತೆ ನಾನಾ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳಿದ್ದು, ಈ ಭಾಗಗಳು ಬೆಟ್ಟಗಳ ಸಾಲುಗಳು, ಕುರುಚಲು ಕಾಡು, ನದಿ ಹಾಗೂ ಜಮೀನುಗಳಲ್ಲಿ ಬೆಳೆದು ನಿಂತಿರುವ ಹಸಿರು ಹೊದಿಕೆಯ ಪೈರುಗಳಿಂದಾಗಿ ಕಂಗೊಳಿಸುತ್ತದೆ. ಈ ಕಾರಣಕ್ಕೆ ಇದು ಪ್ರವಾಸಿಗರನ್ನು ಇಲ್ಲಿಗೆ ಕೈ ಬೀಸಿ ಕರೆಯುತ್ತಿದೆ. ಆದರೆ ಚಿರತೆ ದಾಳಿಯ ಭಯ ಪ್ರವಾಸಿಗರು ಈ ಭಾಗದಲ್ಲಿ ಆಗಮಿಸಲು ಹಿಂದೇಟು ಹಾಕುವಂತೆ ಮಾಡಿದೆ.
ಚಿರತೆಯ ಭಯ ಪ್ರವಾಸಿಗರಲ್ಲಿ ಆತಂಕ ಸೃಷ್ಟಿಸಿದರೆ ಇನ್ನೊಂದು ಕಡೆ ಈ ಭಾಗದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವುದು ಸಹಿತ ಪ್ರವಾಸೋದ್ಯಮಕ್ಕೆ ಹಿನ್ನಡೆಯಾದಂತಾಗಿದೆ. ಚಿರತೆ ಯಾವುದೇ ಸಂದರ್ಭದಲ್ಲಿ ದಾಳಿ ನಡೆಸಬಹುದಾದ ಸನ್ನಿವೇಶ ಇಲ್ಲಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಜನರ ಜೀವ ರಕ್ಷಣೆಯ ಉದ್ದೇಶದಿಂದ ಈ ಭಾಗದಲ್ಲಿ ಕೆಲವೊಂದಿಷ್ಟು ಷರತ್ತುಗಳನ್ನು ವಿಧಿಸಿದ್ದು, ಇಲ್ಲಿ ಸಾರ್ವಜನಿಕರ ಸಂಚಾರ ನಿಷೇಧಿಸಿದೆ.
ಅಂಜನಾದ್ರಿ ಬೆಟ್ಟದಲ್ಲಿ ಜರುಗಿದ ಹನುಮ ಮಾಲಾ ವಿಸರ್ಜನೆ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಹನುಮಮಾಲಾ ವಿಸರ್ಜನೆ ಮಾಡುತ್ತಿದ್ದರು. ಆದರೆ ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಹನುಮಮಾಲಾಧಾರಿಗಳ ಸಂಖ್ಯೆಯೂ ಈಗ ಕಡಿಮೆಯಾಗಿದ್ದು, ಇದರ ಜೊತೆಗೆ ಹಂಪಿಯಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿದೆ.
ಚಿರತೆ ಹಾವಳಿ ಮುನ್ನ ಜನರು ಬಂದು ಹೋಗುತ್ತಿದ್ದರು. ಆದರೆ ಯಾವಾಗ ಚಿರತೆ ಹಾವಳಿ ಹೆಚ್ಚಾಯಿತೋ ಅಂದಿನಿಂದ ಜನರು ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ವ್ಯಾಪಾರಿ ನಾಗೇಶ್ ಹೇಳಿದ್ದಾರೆ.
ಸದ್ಯ ಪ್ರತಿ ದಿನ ಎಷ್ಟು ಜನ ಪ್ರವಾಸಿಗರು ಆಗಮಿಸಿದ್ದಾರೆ ಎನ್ನುವುದು ಇಲಾಖೆಯಿಂದ ಲೆಕ್ಕ ಹಾಕುತ್ತಿಲ್ಲ. ಬದಲಾಗಿ ಹಂಪಿಯಲ್ಲಿ ಪ್ರವಾಸಿಗರಿಗೆ ರಸೀದಿ ಮಾತ್ರ ನೀಡಲಾಗುತ್ತದೆ. ಆದರೆ ಇತ್ತೀಚೆಗೆ ನಡೆದಿರುವ ಬೆಳವಣಿಗೆಯಿಂದ ಪ್ರವಾಸಿಗರ ಸಂಖ್ಯೆ ಕುಸಿತವಾಗಿದೆ ಎನ್ನುವುದು ಇಲಾಖೆಯ ಅಭಿಪ್ರಾಯವಾಗಿದ್ದು, ಪ್ರವಾಸಿಗರು ಇಲ್ಲಿಗೆ ಆಗಮಿಸದಿರುವುದರಿಂದ ವ್ಯಾಪಾರೋದ್ಯಮ ತೀರ ಕುಸಿತವಾಗಿದೆ ಎಂದು ತಿಳಿದು ಬಂದಿದೆ.