Viral Video: ಬಿಳಿಗಿರಿರಂಗನಬೆಟ್ಟದಲ್ಲಿ ಸಫಾರಿ ವಾಹನವನ್ನು ಎರಡೂ ಕಡೆಯಿಂದ ಅಡ್ಡಗಟ್ಟಿದ ಆನೆಗಳು; ಪ್ರವಾಸಿಗರನ್ನು ರಕ್ಷಣೆ ಮಾಡಿದ ಚಾಲಕ

|

Updated on: Mar 16, 2021 | 2:45 PM

ಈ ವಿಡಿಯೋ ವೈರಲ್ ಆದ ನಂತರ ನೆಟ್ಟಗರಿಂದ ಎರಡೂ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ. ಒಂದಷ್ಟು ಜನರು, ಹೀಗೆ ಆನೆಯನ್ನು ಸಫಾರಿ ವಾಹನದಲ್ಲಿ ಬೆನ್ನಟ್ಟಿದ್ದು ಸರಿಯಲ್ಲ. ಅದು ತುಂಬ ಹೆದರಿತ್ತು ಎಂದು ಹೇಳಿದ್ದಾರೆ.

Viral Video: ಬಿಳಿಗಿರಿರಂಗನಬೆಟ್ಟದಲ್ಲಿ ಸಫಾರಿ ವಾಹನವನ್ನು ಎರಡೂ ಕಡೆಯಿಂದ ಅಡ್ಡಗಟ್ಟಿದ ಆನೆಗಳು; ಪ್ರವಾಸಿಗರನ್ನು ರಕ್ಷಣೆ ಮಾಡಿದ ಚಾಲಕ
ಆನೆ (ಸಂಗ್ರಹ ಚಿತ್ರ)
Follow us on

ಚಾಮರಾಜನಗರದ ಬಿಳಿಗಿರಿರಂಗನಬೆಟ್ಟದ ಅರಣ್ಯ ಪ್ರದೇಶಕ್ಕೆ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಒಂದು ಭಯಾನಕ ಅನುಭವ ಆಗಿದೆ. ಜೀವನದಲ್ಲಿ ಈ ಘಟನೆಯನ್ನೆಂದಿಗೂ ಮರೆಯೋದಿಲ್ಲ ಎಂದು ಹೇಳಿಕೊಂಡಿದ್ದಾರೆ. ಜೀವಸಹಿತ ಬಂದಿದ್ದೇ ಹೆಚ್ಚು ಎಂಬುದು ಅವರ ಅಭಿಪ್ರಾಯ. ಅಷ್ಟಕ್ಕೂ ಏನಾಯಿತು ಎಂಬುದನ್ನು ತಿಳಿಯಬೇಕಾದರೆ ನೀವು ಈ ಮೈ ಜುಂ ಎನ್ನಿಸುವ ಸ್ಟೋರಿ ಓದಲೇಬೇಕು.. ವಿಡಿಯೋ ನೋಡಲೇಬೇಕು.

ಒಂದಷ್ಟು ಪ್ರವಾಸಿಗರನ್ನು ಅರಣ್ಯ ಇಲಾಖೆಯ ವಾಹನದಲ್ಲಿಯೇ ಸಫಾರಿಗೆ ಕರೆದುಕೊಂಡು ಹೋಗಲಾಗಿತ್ತು. ಪ್ರವಾಸಿಗರು ಸಹಜವಾಗಿಯೇ ವಿಡಿಯೋ, ಫೋಟೋ ಶೂಟ್​ ಮಾಡುತ್ತಿದ್ದರು. ಆದರೆ ಕೆಲವೇ ಹೊತ್ತಲ್ಲಿ ಅವರ ವಾಹನವನ್ನು ಸಲಗವೊಂದು ಅಟ್ಟಿಸಿಕೊಂಡು ಬರಲು ಶುರು ಮಾಡಿತ್ತು. ಜೀಪ್​ ಮುಂದೆ ಹೋಗುತ್ತಿದ್ದರೆ ಹಿಂದಿನಿಂದ ಸಲಗ ಬೆನ್ನಟ್ಟಿತ್ತು. ಆದರೆ ವಾಹನ ಇನ್ನೂ ಸ್ವಲ್ಪ ಮುಂದೆ ಬಂದ ಮೇಲೆ ಪ್ರವಾಸಿಗರ ಜೀವವೇ ಬಾಯಿಗೆ ಬಂದಂತಾಯಿತು. ಕಾರಣ.. ಮುಂದಿನಿಂದಲೂ ಸಲಗವೊಂದು ಸಫಾರಿ ವಾಹನದತ್ತಲೇ ವೇಗವಾಗಿ ಓಡಿಬಂದಿತ್ತು. ವಾಹನದ ಸಮೀಪವೇ ಬಂದಿದ್ದ ಆನೆಯನ್ನು ನೋಡಿ ಪ್ರವಾಸಿಗರು, ಸಫಾರಿ ವಾಹನ ಚಾಲಕ ಎಲ್ಲರೂ ದಿಗಿಲುಬಿದ್ದಿದ್ದರು. ಅವರ ಕೂಗಾಟವನ್ನೂ ವಿಡಿಯೋದಲ್ಲಿ ನೀವು ಕೇಳಬಹುದು. ಅದಾದ ಬಳಿಕ ವಾಹನ ಚಾಲಕ ಅನಿವಾರ್ಯವಾಗಿ ಆನೆಯ ಹತ್ತಿರವೇ ಜೀಪ್​ ತೆಗೆದುಕೊಂಡುಹೋಗಿ ವೇಗವಾಗಿ ಮುನ್ನುಗ್ಗಲು ಪ್ರಯತ್ನಿಸಿದರು. ಇದರಿಂದ ಸ್ವಲ್ಪ ಹೆದರಿದಂತೆ ಕಂಡ ಆನೆ ತಿರುಗಿ ಓಡಲು ಶುರು ಮಾಡಿತು. ಆದರೂ ಅದು ಒಮ್ಮೊಮ್ಮೆ ನಿಂತು, ಹಿಂದಿರುಗಿ ನೋಡುತ್ತ ನಿಧಾನವಾಗಿಯೇ ಓಡುತ್ತಿತ್ತು. ಬಳಿಕ ಮುಖ್ಯರಸ್ತೆಯಿಂದ ಕಾಡಿನ ಕಡೆಗೆ ಹೋಯಿತು. ಈ ಎಲ್ಲ ದೃಶ್ಯಗಳೂ ವೈರಲ್ ಆದ ವಿಡಿಯೋದಲ್ಲಿ ಕಾಣಸಿಗುತ್ತವೆ. ಅಷ್ಟೇ ಅಲ್ಲ, ಆ ಪ್ರದೇಶದಲ್ಲಿ ಆನೆಗಳ ಹಿಂಡೇ ಇತ್ತು ಎಂದು ಹೇಳಲಾಗಿದೆ.

ವಿಡಿಯೋ ವೈರಲ್ ಆದ ನಂತರ ನೆಟ್ಟಗರಿಂದ ಎರಡೂ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ. ಒಂದಷ್ಟು ಜನರು, ಹೀಗೆ ಆನೆಯನ್ನು ಸಫಾರಿ ವಾಹನದಲ್ಲಿ ಬೆನ್ನಟ್ಟಿದ್ದು ಸರಿಯಲ್ಲ. ಅದು ತುಂಬ ಹೆದರಿತ್ತು ಎಂದು ಹೇಳಿದ್ದಾರೆ. ಆದರೆ ಇನ್ನೂ ಒಂದಷ್ಟು ಮಂದಿ, ಚಾಲಕ ಹೀಗೆ ಮಾಡದಿದ್ದರೆ ಪ್ರವಾಸಿಗರ ಜೀವಕ್ಕೆ ಅಪಾಯವಿತ್ತು. ಆತನ ಸಮಯಪ್ರಜ್ಞೆಯಿಂದ ಅವರೆಲ್ಲರೂ ಬಚಾವಾದರು ಎಂದಿದ್ದಾರೆ.

ಘಟನೆ ನಡೆದಿದ್ದು ಸೋಮವಾರ (ಮಾ.15). ಸ್ಥಳೀಯ ಅರಣ್ಯ ಇಲಾಖೆಯಿಂದಲೇ ಸಫಾರಿ ಆಯೋಜಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಐಎಫ್​ಎಸ್​ ಅಧಿಕಾರಿ, ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಮನೋಜ್​ ಕುಮಾರ್​, ಈ ಪ್ರವಾಸಿ ತಾಣದಲ್ಲಿ ಇತ್ತೀಚೆಗಷ್ಟೇ ಒಂದು ಆನೆ ಮರಿ ಜನಿಸಿದೆ. ಬಹುಶಃ ಅದರ ರಕ್ಷಣೆಗಾಗಿ ಹೀಗೆ ಆನೆಗಳು ಗುಂಪುಗೂಡಿವೆ. ವಾಹನಸದ್ದು, ಮನುಷ್ಯರನ್ನು ನೋಡಿದ ಆನೆಗಳು ತಮಗೇನೋ ಅಪಾಯವಾಗಲಿದೆ ಎಂದು ಹೀಗೆ ಅಟ್ಟಿಸಿಕೊಂಡು ಬಂದಿರಬಹುದು. ಸಫಾರಿವಾಹನಗಳನ್ನು ಪ್ರಾಣಿಗಳು ಅಟ್ಟಿಸಿಕೊಂಡು ಬರುವುದು ಸಹಜ. ಆದರೆ ಹೀಗೆ ಏಕಕಾಲದಲ್ಲಿ ಎರಡೂ ಕಡೆಯಿಂದ ಆನೆಗಳು ಸುತ್ತುವರಿಯುವುದು ತೀರ ಅಪರೂಪ. ಈ ಹೊತ್ತಲ್ಲಿ ಚಾಲಕನಿಗೆ ಬೇರೆ ದಾರಿ ಇರಲಿಲ್ಲ. ಎದುರಿನಿಂದ ಬರುತ್ತಿದ್ದ ಆನೆಯನ್ನು ಹಿಮ್ಮೆಟ್ಟಿಸಲೇಬೇಕಿತ್ತು ಎಂದು ಹೇಳಿದ್ದಾರೆ.
ಸದ್ಯದ ಮಟ್ಟಿಗೆ ಈ ಅರಣ್ಯ ಮಾರ್ಗದಲ್ಲಿ ಸಫಾರಿ ನಡೆಸುವುದನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ಉಪಸಂರಕ್ಷಣಾಧಿಕಾರಿಗೆ ಸೂಚಿಸಿದ್ದೇನೆ. ಅಲ್ಲಿಂದ ಆನೆಗಳು ಬೇರೆಕಡೆಗೆ ಹೋಗಿವೆ ಎಂಬುದು ದೃಢಪಟ್ಟ ಬಳಿಕವಷ್ಟೇ ಮತ್ತೆ ಅಲ್ಲಿ ಸಫಾರಿ ನಡೆಯಲಿದೆ ಎಂದು ಮನೋಜ್​​ಕುಮಾರ್ ತಿಳಿಸಿದ್ದಾರೆ.

ಇಲ್ಲಿದೆ ನೋಡಿ ಮೈ ಜುಂ ಎನ್ನಿಸುವ ವಿಡಿಯೋ

Published On - 2:39 pm, Tue, 16 March 21