ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸವಿದೆ: ಪ್ರಮೋದ್ ಮುತಾಲಿಕ್

ಬಿಜೆಪಿ ಹಿರಿಯರ ಜತೆ ಮೂರು ಸುತ್ತಿನ ಮಾತುಕತೆಯಾಗಿದೆ. ನನಗೆ ಟಿಕೆಟ್ ನೀಡುತ್ತಾರೆ ಎಂಬ ವಿಶ್ವಾಸವಿದೆ. ನಾನು ಪಕ್ಷೇತರನಾಗಿ ನಿಲ್ಲುವುದಿಲ್ಲ. ಟಿಕೆಟ್ ಸಿಗದಿದ್ದರೆ ಟಿಕೆಟ್ ಸಿಕ್ಕವರ ಪರ ಕೆಲಸ ಮಾಡುತ್ತೇನೆ.

ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸವಿದೆ: ಪ್ರಮೋದ್ ಮುತಾಲಿಕ್
ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್
Follow us
shruti hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 16, 2021 | 3:32 PM

ಧಾರವಾಡ: ಬಿಜೆಪಿಯ ಹಿರಿಯರ ಜೊತೆ ಮೂರು ಸುತ್ತಿನ ಮಾತುಕತೆಯಾಗಿದೆ. ನನಗೆ ಟಿಕೆಟ್ ನೀಡುವ ಕುರಿತಂತೆ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿದೆ. ಇನ್ನೂ ಚುನಾವಣೆ ದಿನಾಂಕ ನಿಗದಿಯಾಗಿಲ್ಲ. ದಿನಾಂಕ ಘೋಷಣೆಯಾದ ಮೇಲೆ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡುತ್ತಾರೆ ಎಂದು ಶ್ರೀರಾಮಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಬೆಳಗಾವಿ ಲೋಕಸಭೆ ಉಪಚುನಾವಣೆ ಟಿಕೆಟ್ ವಿಚಾರಕ್ಕೆ ಸಂಬಂಧಿಸಿ ಧಾರವಾಡದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತಂತೆ ಮಾತನಾಡಿದ ಪ್ರಮೋದ ಮುತಾಲಿಕ್, ಬಿಜೆಪಿ ಹಿರಿಯರ ಜತೆ ಮೂರು ಸುತ್ತಿನ ಮಾತುಕತೆಯಾಗಿದೆ. ನನಗೆ ಟಿಕೆಟ್ ನೀಡುತ್ತಾರೆ ಎಂಬ ವಿಶ್ವಾಸವಿದೆ. ನಾನು ಪಕ್ಷೇತರನಾಗಿ ನಿಲ್ಲುವುದಿಲ್ಲ. ಟಿಕೆಟ್ ಸಿಗದಿದ್ದರೆ ಟಿಕೆಟ್ ಸಿಕ್ಕವರ ಪರ ಕೆಲಸ ಮಾಡುತ್ತೇನೆ. ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಗೊತ್ತಿಲ್ಲ. ಯಾರಿಗೆ‌ ಟಿಕೆಟ್​ ಕೊಟ್ಟರೂ ಒಳ್ಳೆಯದೇ ಎಂದು ಮಾತನಾಡಿದ್ದಾರೆ.

ಕಳೆದ 40 ವರ್ಷಗಳಿಂದ ಮನೆ ಬಿಟ್ಟು ಹಿಂದುತ್ವ, ಸಮಾಜ ಎಂದು ಕೆಲಸ ಮಾಡುತ್ತಿದ್ದೇನೆ. ಈಗ ನನಗೆ 66 ವರ್ಷ ಆಗಿದೆ. ಇದು ಕೊನೆಯ ಪ್ರಯತ್ನ ಎಂದು ಟಿಕೆಟ್ ಕೇಳಿದ್ದೇನೆ. ಮೂರು ವರ್ಷ ಸೇವೆ ಮಾಡಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಧಾರವಾಡ ಜಿಲ್ಲಾಡಳಿತದಿಂದ ಟಗರು ಕಾಳಗ ನಿಷೇಧ ಹಿನ್ನೆಲೆಯಲ್ಲಿ ಪ್ರತಿಭಟನೆ ಜಿಲ್ಲಾಡಳಿತದಿಂದ ಟಗರು ಕಾಳಗ ನಿಷೇಧ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಪ್ರತಿಭಟನೆ ಕೈಗೊಂಡಿದೆ. ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಾಳಗ ನಿಷೇಧಿಸಿದ್ದಾರೆ. ಈ ಕುರಿತಾಗಿ ಡಿಸಿ ಆದೇಶದ ವಿರುದ್ಧ ಶ್ರೀರಾಮಸೇನೆ ಆಕ್ರೋಶ ವ್ಯಕ್ತಪಡಿಸಿದೆ. ಸಂಘಟನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ನೇತ್ರತ್ವದಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆಗೆ ಟಗರು ಕಾಳಗ ಸಮಿತಿ ಸಾಥ್ ನೀಡಿದ್ದು, ಟಾಕೀಸ್‌ಗಳ ವಿಚಾರವಾಗಿ ಕೊರೊನಾ ಇಲ್ಲವೇ? ಅವುಗಳನ್ನೇ ಆರಂಭಿಸಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ದತ್ತಪೀಠವನ್ನು ಹಿಂದೂಗಳಿಗೆ ವಹಿಸುವ ಬುದ್ಧಿ ಬಿಜೆಪಿಗೆ ಬರಲಿ: ಪ್ರಮೋದ್​ ಮುತಾಲಿಕ್

ಇದನ್ನೂ ಓದಿ: ಪಟಾಕಿಯಿಂದ ಪರಿಸರ ಮಾಲಿನ್ಯ ಆಗುತ್ತೆ ಅನ್ನೋದು ಸುಳ್ಳು -ಪ್ರಮೋದ್ ಮುತಾಲಿಕ್ ‘ಬಾಂಬ್​’!